ಪ್ರವಾಸಿಗನ ಜೀವರಕ್ಷಿಸಿದ ಜೀವರಕ್ಷಕ ಸಿಬ್ಬಂದಿ

| Published : Oct 03 2025, 01:07 AM IST

ಪ್ರವಾಸಿಗನ ಜೀವರಕ್ಷಿಸಿದ ಜೀವರಕ್ಷಕ ಸಿಬ್ಬಂದಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿನ ಕುಡ್ಲೆ ಕಡಲತೀರದಲ್ಲಿ ಗುರುವಾರ ಸಂಜೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗೋಕರ್ಣ

ಸಮುದ್ರ ಪಾಲಾಗುತ್ತಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಇಲ್ಲಿನ ಕುಡ್ಲೆ ಕಡಲತೀರದಲ್ಲಿ ಗುರುವಾರ ಸಂಜೆ ನಡೆದಿದೆ.

ತುಮಕೂರಿನ ಮಂಜುನಾಥ (೩೨) ರಕ್ಷಣೆಗೊಳಗಾದ ಪ್ರವಾಸಿಗ. ಅವರು ಸ್ನೇಹಿತರ ಜತೆ ಇಲ್ಲಿಗೆ ಬಂದಿದ್ದು, ಸಮುದ್ರದಲ್ಲಿ ಈಜಾಡುವಾಗ ಈ ಅವಘಡ ನಡೆದಿದೆ.

ಸುಳಿಗೆ ಸಿಲುಕಿ ಜೀವಾಪಾಯದಲ್ಲಿ ಮಂಜುನಾಥ ರಕ್ಷಣೆಗೆ ಕೂಗಿದ್ದು, ತಕ್ಷಣ ಕರ್ತವ್ಯದಲ್ಲಿದ ಜೀವರಕ್ಷಕ ಸಿಬ್ಬಂದಿ ನಾಗೇಂದ್ರ ಕುರ್ಲೆ, ಗಿರೀಶ್ ಗೌಡ ಹಾಗೂ ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್ ರಕ್ಷಣೆಗೆ ಧಾವಿಸಿದ್ದಾರೆ. ಅವರಿಗೆ ಗೋಕರ್ಣ ಅಡ್ವೆಂಚರ್ಸ್ ಬೋಟ್‌ನ ಸಿಬ್ಬಂದಿ ಜತೆಯಾಗಿ ಪ್ರವಾಸಿಗನ ಜೀವ ಉಳಿಸಿದ್ದಾರೆ. ಪ್ರವಾಸಿಗನ ಪ್ರಾಣ ರಕ್ಷಣೆ ಮಾಡಿದ ತಂಡವನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.ಮೀನುಗಾರಿಕೆಗೆ ತೆರಳಿದ ಮೀನುಗಾರ ಸಾವು:

ಮೀನುಗಾರಿಕೆಗೆ ತೆರಳಿದ ಗಂಗಾವಳಿಯ ವ್ಯಕ್ತಿ ರಭಸದ ಅಲೆಗೆ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ಗೋವಾದ ಪಣಜಿಯಲ್ಲಿ ನಡೆದಿದೆ.ಗಂಗಾವಳಿಯ ರಾಮ ನಾರಾಯಣ ತಾಂಡೇಲ(೪೮) ಮೃತ ವ್ಯಕ್ತಿಯಾಗಿದ್ದು, ಪಣಜಿ ಡ್ಯಾನಿಷ್ ಫಸ್ಟ್ ಎಂಬ ಬೋಟ್‌ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಸಮುದ್ರದ ಅಲೆ ಬಡಿದು ಈ ಅವಘಡ ನಡೆದಿದೆ ಎನ್ನಲಾಗಿದ್ದು, ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ. ಮೃತ ಮೀನುಗಾರ ಪತ್ನಿ ಇಬ್ಬರು ಪುಟ್ಟ ಮಕ್ಕಳನ್ನ ಅಗಲಿದ್ದಾರೆ.ಗೋವಾ ಗಡಿಯಲ್ಲಿ ಸರಣಿ ಅಪಘಾತ:

ಜೋಯಿಡಾ ತಾಲೂಕಿನ ರಾಮನಗರ ವ್ಯಾಪ್ತಿಯಲ್ಲಿರುವ ತಿನೈಘಾಟದಲ್ಲಿ ನಡೆದ ಅಪಘಾತದಲ್ಲಿ ಚಿಕ್ಕಬಳ್ಳಾಪುರದ ರಾಜಶೇಖರ ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ. ಹೈದರಾಬಾದದಿಂದ ಗೋವಾ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮ್ಯಾಂಗನೀಸ್ ತುಂಬಿದ ಟ್ರಕ್‌ನ್ನು ಓವರ್ ಟೇಕ್ ಮಾಡಲು ಹೋದಾಗ ಎದುರಿಗೆ ಬಂದ ಟಾಟಾ ಪಿಕ್ ಅಪ್‌ಗೆ ಡಿಕ್ಕಿ ಆಗಿದೆ. ಡಿಕ್ಕಿ ರಭಸಕ್ಕೆ ಪಿಕ್ ಅಪ್ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ. ಅದೇ ವೇಳೆ ಪಿಕ್ ಅಪ್ ಹಿಂದೆ ಬರುತ್ತಿದ್ದ ಬುಲೆಟ್ ಬೈಕ್ ಕೂಡ ಅಪಘಾತಕ್ಕೆ ಸಿಲುಕಿ ಹಾನಿಯಾಗಿದೆ. ಬಸ್ ಹಾಗೂ ಪಿಕ್ ಅಪ್ ನುಜ್ಜು ಗುಜ್ಜಾಗಿದ್ದು, ಕೆಲವು ಪ್ರಯಾಣಿಕರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ರಾಮನಗರ ಪಿಎಸ್ಐ ಮಹಾಂತೇಶ ನಾಯಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.