ಗಂಗಾವತಿಯಲ್ಲಿ ಗಣೇಶ ವಿಸರ್ಜನೆ ವೇಳೆ ಲಘು ಲಾಠಿ ಪ್ರಹಾರ

| Published : Sep 14 2025, 01:04 AM IST

ಸಾರಾಂಶ

ತಡರಾತ್ರಿ 2 ಗಂಟೆಯಾದರೂ ಡಿಜೆ ಬಂದ್‌ ಮಾಡದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಬಂದ್‌ ಮಾಡುವಂತೆ ಸಂಘಟಕರಿಗೆ ತಿಳಿಸಿದರು. ಒಪ್ಪದಿದ್ದಾಗ ಪೊಲೀಸರು ಬಂದ್‌ ಮಾಡಲು ಮುಂದಾದಾಗ ಯುವಕರು ತಡೆಯೊಡ್ಡಿ ವಾಗ್ವಾದ ನಡೆಸಿದರು.

ಗಂಗಾವತಿ:

ನಗರದಲ್ಲಿ ಗಣೇಶ ವಿಸರ್ಜನೆ ವೇಳೆ ಶುಕ್ರವಾರ ಮಧ್ಯರಾತ್ರಿ ಅವಧಿ ಮೀರಿದ ಬಳಿಕವೂ ಡಿಜೆ ಹಚ್ಚಿ ಕುಣಿಯುತ್ತಿದ್ದ ಯುವಕರಿಗೆ ತಿಳಿ ಹೇಳಿ ಡಿಜೆ ಬಂದ್‌ ಮಾಡಿಸಲು ಪೊಲೀಸರು ಹೋದ ಸಂದರ್ಭದಲ್ಲಿ ಯುವಕರು ವಿರೋಧಿಸಿದ್ದರಿಂದ ಮಾತಿನ ಚಕಮಕಿ ನಡೆದು ಕೊನೆಗೆ ಲಘು ಲಾಠಿ ಪ್ರಹಾರ ಮಾಡಲಾಯಿತು.

ನಗರದ 12 ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹಗಳು ಮೆರವಣಿಗೆ ಸಂಜೆ 5 ಗಂಟೆಗೆ ಪ್ರಾರಂಭವಾಗಿ ಮಹಾತ್ಮ ಗಾಂಧಿ ವೃತ್ತಕ್ಕೆ ಆಗಮಿಸಿದ್ದವು. ಈ ವೇಳೆ 10 ಸಾವಿರಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದರು. ಸಂಘಟಕರು ರಾತ್ರಿ 11ರ ವರೆಗೆ ಡಿಜೆ ಹಚ್ಚುವುದಾಗಿ ಪೊಲೀಸರಿಗೆ ಲಿಖಿತವಾಗಿ ಬರೆದು ಕೊಟ್ಟಿದ್ದರು. ಆದರೆ, ತಡರಾತ್ರಿ 2 ಗಂಟೆಯಾದರೂ ಡಿಜೆ ಬಂದ್‌ ಮಾಡದ ಕಾರಣ ಪೊಲೀಸರು ಮಧ್ಯಪ್ರವೇಶಿಸಿ ಬಂದ್‌ ಮಾಡುವಂತೆ ಸಂಘಟಕರಿಗೆ ತಿಳಿಸಿದರು. ಒಪ್ಪದಿದ್ದಾಗ ಪೊಲೀಸರು ಬಂದ್‌ ಮಾಡಲು ಮುಂದಾದಾಗ ಯುವಕರು ತಡೆಯೊಡ್ಡಿ ವಾಗ್ವಾದ ನಡೆಸಿದರು. ಪರಿಸ್ಥಿತಿ ಕೈಮೀರುವ ಸಂಗತಿ ಅರಿತ ಪೊಲೀಸರು ಯುವಕರನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಗಣೇಶೋತ್ಸವ ವರ್ಷಕ್ಕೊಮ್ಮೆ ಬರುತ್ತದೆ. ನಮ್ಮ ಉತ್ಸುಕತೆ ಏಕೆ ನಿಲ್ಲಿಸುತ್ತೀರಿ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಪೊಲೀಸರೇ ಡಿಜೆ ಸ್ಥಗಿತಗೊಳಿಸಿದರು. ಬಳಿಕ 3 ಗಂಟೆ ವೇಳೆ ಎಲ್ಲ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಬಿಗಿ ಭದ್ರತೆ:

ಎರಡು ವರ್ಷದ ಹಿಂದೆ ಗಾಂಧಿ ವೃತ್ತದ ಬಳಿ ಇರುವ ಜಾಮೀಯ ಮಸೀದಿ ಮುಂಭಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸಿದ್ದರಿಂದ ವಿರೋಧ ವ್ಯಕ್ತವಾಗಿ ಎರಡು ಕೋಮಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಹೀಗಾಗಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಅಲ್ಲಲ್ಲಿ ಸಿಸಿ ಕ್ಯಾಮೆರಾ, ಡ್ರೋಣ್, ವೀಡಿಯೋ ಸೇರಿದಂತೆ ಪೊಲೀಸರು ಜಾಗೃತಿ ವಹಿಸಿದ್ದರು.

ಸ್ಥಳದಲ್ಲಿ ಎಸ್ಪಿ ರಾಮ ಎಲ್. ಅರಿಸಿದ್ದಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಸಿಪಿಐ ಪ್ರಕಾಶ ಮಾಳೆ, ರಂಗಪ್ಪ ಸೇರಿದಂತೆ ಪೊಲೀಸ್ ಪಡೆ ಇತ್ತು.

ಗಣೇಶ ವಿಸರ್ಜನೆ ವೇಳೆ ಡಿಜೆ ಬಳಸಲು ರಾತ್ರಿ 12 ಗಂಟೆಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಯುವಕರು 2 ಗಂಟೆಯಾದರು ಬಂದ್ ಮಾಡದ ಕಾರಣ ಅನಿವಾರ್ಯವಾಗಿ ಬಂದ್ ಮಾಡಿಸಲಾಯಿತು.

ಸಿದ್ದಲಿಂಗಪ್ಪಗೌಡ ಪಾಟೀಲ್ ಡಿವೈಎಸ್ಪಿ ಗಂಗಾವತಿ