-ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಅಧಿಕಾರಿಗಳಿಗೆ ಶಾರದಾ ಪೂರ್ಯಾನಾಯ್ಕ ಸಲಹೆ
--ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೋವು, ಸಂಕಷ್ಟ, ಸವಾಲು-ಸಮಸ್ಯೆಗಳ ಪರಿಹಾರಕ್ಕಾಗಿ ತಮ್ಮಲ್ಲಿಗೆ ಬರುವ ಮುಗ್ಧ ಜನರಿಗೆ ಅನಗತ್ಯ ಅಲೆದಾಡಿಸದೆ ತಾಳ್ಮೆಯಿಂದ ಅವರ ಕೆಲಸ ಮಾಡಿಕೊಡಬೇಕು ಎಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾ ನಾಯ್ಕ್ ಸೂಚನೆ ನೀಡಿದರು.ತಾಲೂಕಿನ ಹಾರನಹಳ್ಳಿಯಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆ ಇದಾಗಿದ್ದು, ಅಧಿಕಾರಿಗಳು ಜನರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸುವಂತೆ ಹಾಗೂ ಸಾರ್ವಜನಿಕರೊಂದಿಗೆ ಅಧಿಕಾರಿಯುತವಾಗಿ ದರ್ಪ ತೋರದೆ ಅವರ ಸಮಸ್ಯೆಗಳಿಗೆ ಸಕಾಲಿಕ ಹಾಗೂ ತಕ್ಷಣದ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ಸರ್ಕಾರವು ಜನರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಸದುದ್ದೇಶದಿಂದ ಮಹತ್ವದ ಈ ಯೋಜನೆಯನ್ನು ಜಾರಿಗೊಳಿಸಿದೆ.
ಹಾರನಹಳ್ಳಿ ಮತ್ತು ಸುತ್ತಲ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮಳೆ ಆಗಿದ್ದು, ಬಹುತೇಕ ಕೆರೆ, ಕಟ್ಟೆ ಕಾಲುವೆಗಳಲ್ಲಿ ನೀರು ಇಲ್ಲದಾಗಿದ್ದು, ಕುಡಿವ ನೀರು, ಜನ, ಜಾನುವಾರು ಸಾಕಣೆ ಮುಂದಿನ ದಿನಗಳಲ್ಲಿ ಕಷ್ಟಕರವಾಗಲಿದೆ. ಈ ತೀವ್ರತೆಯನ್ನು ಅರಿತು ನೀರಾವರಿ ಇಲಾಖೆಯ ಅಧಿಕಾರಿಗಳು ಏತ ನೀರಾವರಿ ಯೋಜನೆಗಳ ಮೂಲಕ ತ್ವರಿತವಾಗಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಮುಂದಾಗುವಂತೆ ಸಲಹೆ ನೀಡಿದರು.
ವಿಶೇಷವಾಗಿ ಅಧಿಕಾರಿಗಳು ಮಳೆ ಮಾಪನ ಕೇಂದ್ರ ನಿರ್ವಹಣೆ ಬಗ್ಗೆ ಗಮನಹರಿಸಿ. ರೈತರಿಗೆ ಬೆಳೆ ವಿಮೆ ಸೌಲಭ್ಯ ನೀಡುವಲ್ಲಿ ಮಳೆ ಮಾಪನ ಕೇಂದ್ರಗಳ ವರದಿಯೊಂದನ್ನೇ ಅಂತಿಮವಾಗಿ ಪರಿಗಣಿಸದಂತೆ ಸೂಚಿಸಿದ ಅವರು, ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿ.ಪಂ ಸಿಇಒ ಅಧಿಕಾರಿ ಎನ್. ಹೇಮಂತ್, ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್, ಉಪವಿಭಾಗಾಧಿಕಾರಿ ಡಾ. ಮೈತ್ರಿ, ತಹಸೀಲ್ದಾರ್ ರಾಜೀವ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಶುದ್ಧ ಕುಡಿವ ನೀರು ಪೂರೈಕೆ, ಮಾಸಾಶನ, ಶಾಲೆಗೆ ಅಡುಗೆ ಕೋಣೆ, ರೈಲ್ವೆ ಸ್ಟೇಷನ್ ಗೆ ಬೆಳಕಿನ ವ್ಯವಸ್ಥೆ, ಬಾಕ್ಸ್ ಚರಂಡಿ, ಸ್ಮಶಾನ ಭೂಮಿ ಮಂಜೂರಾತಿ ಮುಂತಾದ ಹಲವು ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಯಾದವು.ಪೋಟೊ: 12ಎಸ್‌ಎಂಜಿಕೆಪಿ03
ಶಿವಮೊಗ್ಗ ತಾಲೂಕಿನ ಹಾರನಹಳ್ಳಿಯಲ್ಲಿ ಜಿಲ್ಲಾಡಳಿತ, ಜಿ.ಪಂ ವತಿಯಿಂದ ಏರ್ಪಡಿಸಿದ್ದ ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಯಾದವು.