With dedication, hard work, and self-confidence, anything can be achieved.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ರಾಜಕಾರಣ ಪ್ರಗತಿಯ ಬೀಗ ಇದ್ದಂತೆ, ನಮ್ಮ ಹೆಣ್ಣುಮಕ್ಕಳು ಅವಕಾಶಗಳ ಬಳಸಿಕೊಂಡು ರಾಜಕಾರಣಕ್ಕೆ ಬಂದು ಸೇವೆ ಮಾಡಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮ್ಛೀ ಚೌಧರಿ ಹೇಳಿದರು.ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಹಾಲುಮತ ಮಹಾಸಭಾ ಮತ್ತು ಕನಕ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಾಲುಮತ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಣವೇ ನಮ್ಮ ಶಕ್ತಿ. ಅದರಲ್ಲೂ ಹೆಣ್ಣುಮಕ್ಕಳು ಶಿಕ್ಷಣದಿಂದ ದೂರ ಆಗಬಾರದು. ಓದುವ ಸಮಯದಲ್ಲಿ ಇತರೆ ಯಾವ ಹವ್ಯಾಸಗಳಿಗೂ ಒಳಗಾಗದೇ ಕಷ್ಟಪಟ್ಟು ವ್ಯಾಸಂಗ ಮಾಡಬೇಕು. ಶ್ರದ್ಧೆ, ಶ್ರಮ, ಆತ್ಮವಿಶ್ವಾಸವಿದ್ದರೆ ಏನನ್ನಾದರೂ ಸಾಧಿಸಬಹುದು. ಶಿಕ್ಷಣ ನಮ್ಮ ಅವಮಾನಗಳಿಗೆ ಉತ್ತರವಾಗಬೇಕು ಎಂದರು.
ನಮ್ಮ ಯುವ ಜನಾಂಗ ರಾಜಕಾರಣದತ್ತ ಹೊರಳಬೇಕಾದ ಅನಿವಾರ್ಯತೆ ಇದೆ. ರಾಜಕಾರಣದ ಮೂಲಕವೂ ಕೂಡ ಸಮಾಜದ ಸೇವೆಯನ್ನು ಮಾಡಬಹುದಾಗಿದೆ. ಸೇವೆ ಇಲ್ಲದ ಡಿಗ್ರಿಗೆ ಯಾವ ಬೆಲೆಯೂ ಇಲ್ಲ. ನಾವು ಪಡೆದ ಶಿಕ್ಷಣ ಸಮಾಜ ಸೇವೆಗೆ ಬಳಕೆಯಾಗಬೇಕು. ರಾಜಕಾರಣದ ಬಗ್ಗೆ ಏನೇ ಟೀಕೆಗಳಿದ್ದರೂ ಶುದ್ಧ ರಾಜಕಾರಣವು ನಮ್ಮ ವ್ಯಕ್ತಿತ್ವವನ್ನು ಬದಲಾಯಿಸುವುದರ ಜತೆಗೆ ಸಮಾಜದ ಅಭಿವೃದ್ಧಿಗೂ ಕಾರಣವಾಗುತ್ತದೆ. ವಿಶೇಷವಾಗಿ ನಮ್ಮ ಹೆಣ್ನುಮಕ್ಕಳು ರಾಜಕಾರಣಕ್ಕೆ ಬನ್ನಿ ಎಂದು ಕರೆ ನೀಡಿದರು.ಮಕ್ಕಳು ದೇಶದ ಆಸ್ತಿ:
ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಹಾಲುಮತ ಸಮಾಜವು ಸಂಘಟನೆಯ ಮೂಲಕ ಸಮಾಜದ ಶಕ್ತಿಯಾಗಿ ಬೆಳೆಯುತ್ತಿದೆ. ಸಂಘದ ಪದಾಧಿಕಾರಿಗಳು ಕುರುಬ ಸಮಾಜವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ನಿರಂತರ ಪ್ರಯತ್ನ ಪಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮೂಲಕ ನೆರವು ನೀಡುವುದು ಅತ್ಯಂತ ಒಳ್ಳೆಯ ಕೆಲಸ. ವಿದ್ಯಾರ್ಥಿಗಳಿಗೆ ಆರ್ಥಿಕ ಸಮಸ್ಯೆ ಬಂದರೆ ನಾವು ಕೂಡ ನೆರವು ನೀಡುತ್ತೇವೆ. ಮುಖ್ಯವಾಗಿ ಅವರು ಓದಬೇಕು. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸಬೇಕು. ಮಕ್ಕಳು ಈ ದೇಶದ ಆಸ್ತಿ. ತಂದೆ ತಾಯಿಗಳ ನಿರೀಕ್ಷೆಗಳನ್ನು ಹುಸಿಗೊಳಿಸದಿರಿ ಎಂದರು.ಶ್ರೀಕ್ಷೇತ್ರ ಕಾಗಿನೆಲೆ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ಹಾಲುಮತದ ಭರವಸೆಯ ಬೆಳಕು ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೇ ಸಮಾಜಸೇವೆ ಸಲ್ಲಿಸಿದ ಸಮಾಜದ ಹಿರಿಯ ಮುಖಂಡ ಹರಳೆಣ್ಣೆ ರಾಮಪ್ಪ ಕುಂಸಿ ಅವರಿಗೆ ಹಾಲುಮತ ಚೇತನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಅಲ್ಲದೇ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಹಾಲುಮತ ಮಹಾಸಭಾ ರಾಜ್ಯಾಧ್ಯಕ್ಷ ರುದ್ರಣ್ಣ ಗುಳಿಗುಳಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಮರಿಗೌಡರು, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಗರದ ಮಹಾದೇವಪ್ಪ, ಸಮಾಜದ ಮುಖಂಡರಾದ ನವುಲೆ ಈಶ್ವರಪ್ಪ, ಯುವ ಮುಖಂಡ ಕೆ.ಇ. ಕಾಂತೇಶ್, ಪ್ರಮುಖರಾದ ಡಾ.ಶರತ್ ಮರಿಯಪ್ಪ, ಡಾ.ಸೌಮ್ಯಾ ಪ್ರಶಾಂತ್, ಸಿದ್ದಪ್ಪ, ಕೃಷ್ಣಮೂರ್ತಿ, ಸ್ವಪ್ನಾ, ಲಿಂಗದಹಳ್ಳಿ ಹಾಲಪ್ಪ ಸೇರಿದಂತೆ ಹಲವರಿದ್ದರು.ಗಣೇಶ್ ಬಿಳಿಗಿ ಸ್ವಾಗತಿಸಿದರು. ಡಾ.ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಡಿ. ಶಿವಕುಮಾರ್ ನಿರೂಪಿಸಿದರು.
-------------------ಪೋಟೋ: 12ಎಸ್‌ಎಂಜಿಕೆಪಿ01
ಶಿವಮೊಗ್ಗದ ಸರ್ಕಾರಿ ನೌಕರರ ಭವನದಲ್ಲಿ ಹಾಲುಮತ ಮಹಾಸಭಾ ಮತ್ತು ಕನಕ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಹಾಲುಮತ ಚೇತನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಮಾಜಸೇವೆ ಸಲ್ಲಿಸಿದ ಸಮಾಜದ ಹಿರಿಯ ಮುಖಂಡ ಹರಳೆಣ್ಣೆ ರಾಮಪ್ಪ ಕುಂಸಿ ಅವರಿಗೆ ಹಾಲುಮತ ಚೇತನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.