೧೦ ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣವೇ ವಿಲೀನಗೊಳಿಸಬೇಕು, ೧೦ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನೈಜ ಹಾಗೂ ನಿರಂತರ ಸೇವೆ ಸಲ್ಲಿಸಿರುವ ಅರ್ಹ ಅತಿಥಿ ಉಪನ್ಯಾಸಕರನ್ನು ಕಾನೂನುಬದ್ಧವಾಗಿ ತಕ್ಷಣವೇ ವಿಲೀನಗೊಳಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ದೀರ್ಘಕಾಲದ ಸೇವೆ, ಅನುಭವ ಮತ್ತು ಕೊಡುಗೆಯನ್ನು ಸರ್ಕಾರ ಗುರುತಿಸಿ, ಅವರಿಗೆ ಶಾಶ್ವತ ಹಾಗೂ ಗೌರವಯುತ ಪರಿಹಾರ ನೀಡುವ ಮೂಲಕ ಬಹುದಿನಗಳ ಸಮಸ್ಯೆಗಳು ಹಾಗೂ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಲ್ಯಾಣ ಪರಿಷತ್ ರಾಜ್ಯಾಧ್ಯಕ್ಷ ಡಾ.ಪೀಟರ್ ಒತ್ತಾಯಿಸಿದರು.

೧೦ ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರನ್ನು ತಕ್ಷಣವೇ ವಿಲೀನಗೊಳಿಸಬೇಕು, ೧೦ ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ನೈಜ ಹಾಗೂ ನಿರಂತರ ಸೇವೆ ಸಲ್ಲಿಸಿರುವ ಅರ್ಹ ಅತಿಥಿ ಉಪನ್ಯಾಸಕರನ್ನು ಕಾನೂನುಬದ್ಧವಾಗಿ ತಕ್ಷಣವೇ ವಿಲೀನಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ದೀರ್ಘಕಾಲ ಸೇವೆ ಸಲ್ಲಿಸಿರುವ ಉಪನ್ಯಾಸಕರನ್ನು ಏಕಾಏಕಿ ಸೇವೆಯಿಂದ ಕೈಬಿಡುವುದನ್ನು ತಡೆಯಬೇಕು. ಸೂಕ್ತ ವೈದ್ಯಕೀಯ, ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಸೌಲಭ್ಯಗಳನ್ನು ಒದಗಿಸಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಮಾತೃತ್ವ ಹಾಗೂ ಇತರೆ ನ್ಯಾಯಯುತ ಸೇವಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಸೇವಾ ದಾಖಲೆಗಳು ಮತ್ತು ಅರ್ಹತೆಯನ್ನು ಪಾರದರ್ಶಕವಾಗಿ ಪರಿಶೀಲಿಸಬೇಕು. ಅತಿಥಿ ಉಪನ್ಯಾಸಕರ ಪ್ರತಿನಿಧಿಗಳೊಂದಿಗೆ ಸರ್ಕಾರ ಅರ್ಥಪೂರ್ಣ ಚರ್ಚೆ ನಡೆಸಬೇಕು. ಪ್ರತಿವರ್ಷ ತಾತ್ಕಾಲಿಕ ನೇಮಕಾತಿ ಮಾಡುವ ಬದಲು ಶಾಶ್ವತ ಮತ್ತು ನ್ಯಾಯಯುತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅತಿಥಿ ಉಪನ್ಯಾಸಕರ ನೋವು, ಕಷ್ಟ ಹಾಗೂ ನ್ಯಾಯಯುತ ಬೇಡಿಕೆಯನ್ನು ಆಲಿಸಿ, ನಮ್ಮ ಮನವಿಗೆ ಸ್ಪಂದಿಸಿ ಸೂಕ್ತ ನ್ಯಾಯ ಒದಗಿಸುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ದಾಖಲೆಗಳು, ಸೇವಾ ವಿವರಗಳು, ಸರ್ಕಾರದ ನೀತಿಗಳು ಹಾಗೂ ಅನ್ವಯವಾಗುವ ನ್ಯಾಯಾಂಗ ತೀರ್ಪುಗಳನ್ನು ಆಧರಿಸಿ, ಅರ್ಹ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಯನ್ನು ಹೈಕೋರ್ಟ್ ಮುಂದೆ ಮಂಡಿಸಲು ಪರಿಷತ್ ಸಿದ್ಧವಾಗಿದೆ ಎಂದರು.

ಅತಿಥಿ ಉಪನ್ಯಾಸಕರ ಕಲ್ಯಾಣ ಪರಿಷತ್ ರಾಜ್ಯ ಕಾರ್ಯದರ್ಶಿ ರಮೇಶ್‌ರಾವ್ ಬಾರ್ಗೆ, ಜಿಲ್ಲಾ ಅಧ್ಯಕ್ಷ ಎಂ.ಎಸ್.ಕೃಷ್ಣ, ಕಾರ್ಯದರ್ಶಿ ನಂದೀಶ್ ಗೋಷ್ಠಿಯಲ್ಲಿದ್ದರು.