ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದ ಬಿಸಿಎಂ ಬಾಲಕರ ವಸತಿ ನಿಲಯ ಮತ್ತು ಪುರಸಭೆ ಕಚೇರಿಗೆ ಹಾಗೂ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ಗುಣಮಟ್ಟದ ಕೆಲಸದ ಬಗ್ಗೆ ಜಿಲ್ಲಾ ಲೋಕಾಯುಕ್ತ ಇಲಾಖೆ ಡಿವೈಎಸ್ಪಿ ಗೀತಾ ಬೇನಾಳ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಹಿಂದುಗಡೆ ಇರುವ ಸರಕಾರಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.
ಈ ವೇಳೆ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಹಾಸ್ಟೆಲ್‌ನಲ್ಲಿ ಸರಕಾರದಿಂದ ಕೊಟ್ಟಿರುವ ಮೂಲ ಸೌಕರ್ಯ ಕೊರತೆಯನ್ನು ಕೇಳಿದರು. ಶೌಚಾಲಯ, ಅಡುಗೆ ಕೋಣೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಫ್ಯಾನ್, ಹಾಸಿಗೆ ಹೊದಿಕೆ ಮತ್ತು ಮಂಚಗಳನ್ನು ನೀಡಲಾಗಿದೆಯೇ? ಮಕ್ಕಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆಯೇ ಎಂದು ಬಿಸಿಎಂ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅಧಿಕಾರಿ ಅನುಸೂಯ ಚವ್ಹಾಣ ಸರ್ಮಪಕ ಉತ್ತರ ಕೊಡದಿರುವುದಕ್ಕೆ ಲೋಕಾಯುಕ್ತ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.ನಂತರ ಪುರಸಭೆಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಆರ್ಥಿಕ ಲೆಕ್ಕಪತ್ರಗಳು ಮತ್ತು ರಜಿಸ್ಟರ್, ಹಾಜರಾತಿ ಪುಸ್ತಕವನ್ನು ಪರಿಶೀಲಿಸಿದರು. ಪಟ್ಟಣದ ಚಂದಾಪೂರ ನಗರದ ಮುಖ್ಯರಸ್ತೆಯಲ್ಲಿ ಚರಂಡಿ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ರಸ್ತೆ ಮೇಲೆ ಹರಿಯುತ್ತಿದೆ. ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಹತ್ತಿರ ಚರಂಡಿ ನಿರ್ಮಿಸಿಲ್ಲ ಸೊಳ್ಳೆಗಳ ತಾಣವಾಗಿದೆ. ಚರಂಡಿಗಳನ್ನು ಸ್ಚಚ್ಛತೆ ಮಾಡಿ ಇಲ್ಲದಿದ್ದರೆ ರೋಗಗಳು ಹರಡುತ್ತವೆ ಮುಂಜಾಗ್ರತಾ ಕ್ರಮ ಕೈಕೊಳ್ಳಬೇಕೆಂದು ಪುರಸಭೆ ಸಿಬ್ಬಂದಿ ಸಂಗಮೇಶ ಮತ್ತು ನಿಂಗಮ್ಮ ಬೀರಾದಾರ ಅವರಿಗೆ ಸೂಚಿಸಿದರು.
ಪಟ್ಟಣದ ಹೊರವಲಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಿರ್ಮಿಸುತ್ತಿರುವ ಮನೆಗಳ ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಸ್ಥಳಿಯ ಬಿಜೆಪಿ ಮುಖಂಡ ತುಳಸೀರಾವ ಪೋಳ ಮನೆಗಳು ಸರಿಯಾಗಿ ನಡೆಯುತ್ತಿಲ್ಲ. ಗುತ್ತಿಗೆದಾರರ ಗುಣಮಟ್ಟದಿಂದ ಕೆಲಸ ಮಾಡುತ್ತಿಲ್ಲ. ಜನರು ಇಂತಹ ಮನೆಗಳಲ್ಲಿ ಹೇಗೆ ವಾಸ ಮಾಡಬೇಕು ಎಂದು ಕೇಳಿದರು.ಈ ವೇಳೆ ಇನ್ಸ್‌ಪೆಕ್ಟರ್ ರಾಜಶೇಖರ ಹಳಗೋಧಿ, ಅಕ್ಕಮಹಾದೇವಿ ನೀಲಿ, ಪುರಸಭೆ ಸಿಬ್ಬಂದಿ ನಿಂಗಮ್ಮ, ಸಂಗಮೇಶ, ಬಿಸಿಎಂ ಅಧಿಕಾರಿ ಅನಸೂಯ ಚವ್ಹಾಣ, ಜೆಡಿಎಸ್ ಮುಖಂಡರಾದ ರವಿಶಂಕರರೆಡ್ಡಿ ಮುತ್ತಂಗಿ, ಹಣಮಂತರಾವ ಪೂಜಾರಿ, ಗೌತಮ ಹೂಡದಳ್ಳಿ, ಮಸ್ತಾನ ದೇಗಲಮಡಿ ಇನ್ನಿತರಿದ್ದರು.