ಲೋಕಾಪುರ ಶ್ರೀ ಲೋಕೇಶ್ವರ ವೈಭವದ ರಥೋತ್ಸವ

| Published : Feb 28 2025, 12:45 AM IST

ಸಾರಾಂಶ

ಲೋಕಾಪುರ ಪಟ್ಟಣದ ಪವಾಡ ಪುರುಷ, ಶ್ರೀ ಲೋಕೇಶ್ವರ ಜಾತ್ರೆಯ ನಿಮಿತ್ತ ಗುರುವಾರ ಸಂಜೆ ಅಪಾರ ಭಕ್ತರ ಮಧ್ಯೆ ರಥೋತ್ಸವ ಸಂಭ್ರಮದಿಂದ ನೆರವೇರಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪಟ್ಟಣದ ಪವಾಡದ ಪುರುಷ, ಶ್ರೀ ಲೋಕೇಶ್ವರ ಜಾತ್ರೆಯ ನಿಮಿತ್ತ ಗುರುವಾರ ಸಂಜೆ ಅಪಾರ ಭಕ್ತರ ಮಧ್ಯೆ ರಥೋತ್ಸವ ಸಂಭ್ರಮದಿಂದ ನೆರವೇರಿತು.

ಬೆಳಗಿನ ಜಾವದಿಂದಲೇ ದೇವಸ್ಥಾನದಲ್ಲಿ ಕ್ರಿಯಾ ಮೂರ್ತಿಗಳ ನೇತೃತ್ವದಲ್ಲಿ ಅರ್ಚಕರ ಬಳಗ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಂತೆಯೇ ಸರತಿ ಸಾಲಿನಲ್ಲಿ ಭಕ್ತರು ಲೋಕನಾಥ ದರ್ಶನ ಪಡೆದು ಪುನೀತರಾದರು. ರಥವನ್ನು ವಿವಿಧ ಬಣ್ಣ ಬಣ್ಣದ ಬಟ್ಟೆಗಳಿಂದ, ರುದ್ರಾಕ್ಷಿ ಮಾಲೆ ಮತ್ತು ಹೂವಿನಿಂದ ಅಲಂಕರಿಸಲಾಗಿತ್ತು.

ರಥಕ್ಕೆ ಕಳಸದ ತುದಿಯಲ್ಲಿ ವರ್ಣಾಲಂಕಾರ ಧ್ವಜ ಕಟ್ಟಿದ ಬಳಿಕ ನವರತ್ನ ಹಾಗೂ ಫಲ ಪುಷ್ಪಾಲಂಕಾರ, ಹೂವಿನಿಂದ ಕಂಗೊಳಿಸುವ ಲೋಕನಾಥ ವಿಗ್ರಹ ರಥದಲ್ಲಿರಿಸಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥ ಸಾಗುತ್ತಿದ್ದಂತೆಯೇ ಅಪಾರ ಸಂಖ್ಯೆಯಲ್ಲಿ ನೆರದಿದ್ದ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಜೈಕಾರ ಹಾಕುತ್ತಾ ರಥ ಎಳೆದು ಪುನೀತರಾದರು.

ಲೋಕೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವ ಬೆಳಗಾವಿ-ರಾಯಚೂರು ರಾಜ್ಯ ಹೆದ್ದಾರಿ ರಸ್ತೆಯ ಮೇಲೆ ಸಾಗುತ್ತಿದ್ದಂತಯೇ ಭಕ್ತರು ಬಾಳೆಹಣ್ಣು, ಉತ್ತತ್ತಿ, ಹೂವು ಎಸೆದು ಭಕ್ತಿ ಸಮರ್ಪಿಸಿದರು. ವಿವಿಧ ಹಣ್ಣು, ನಾಣ್ಯಗಳನ್ನು ರಥದತ್ತ ಎಸೆದು ಭಕ್ತಿಸೇವೆ ಸಲ್ಲಿಸಿದರು. ರಥೋತ್ಸವ ಶ್ರೀ ರಾಮಲಿಂಗೇಶ್ವರ ದೇವಸ್ಥಾನಕ್ಕೆ ತಲುಪಿ ಮರಳಿ ದೇವಸ್ಥಾನಕ್ಕೆ ಬಂದು ತಲುಪಿತು.

ರಥೋತ್ಸವದಲ್ಲಿ ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ದೇಸಾಯಿ ವಾಡೆಯಿಂದ ವಿವಿಧ ಕಲಾ ಮೇಳದೊಂದಿಗೆ ನಂದಿಕೋಲ, ಝಾಂಜ್‌ ಪಥಕ್‌, ಅಂಬಾರಿ, ವಾದ್ಯಮೇಳಗಳೊಂದಿಗೆ ರಥೋತ್ಸವದ ಕಳಸವನ್ನು ಮೆರವಣಿಗೆ ಮೂಲಕ ದೇವಸ್ಥಾನ ತಂದ ಬಳಿಕ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಜಾತ್ರೆ ನಿಮಿತ್ತ ದೇವಸ್ಥಾನ ದೀಪ ಅಲಂಕಾರದಿಂದ ಅಲಂಕರಿಸಲಾಗಿತ್ತು. ಜ್ಞಾನೇಶ್ವರ ಮಠದ ಪೀಠಾಧಿಕಾರಿ ಬ್ರಹ್ಮಾನಂದ ಶ್ರೀಗಳ ನೇತೃತ್ವ ವಹಿಸಿದ್ದರು. ಸ್ಥಳೀಯ ಗಣ್ಯರಾದ ಡಾ. ಕೆ.ಎಲ್. ಉದಪುಡಿ, ಅವರ ಸಹಕಾರದೊಂದಿಗೆ ಜಾತ್ರಾ ಕಮಿಟಿಯ ಅಧ್ಯಕ್ಷ ಕಿರಣರಾವ ದೇಸಾಯಿ ಇವರ ನೇತೃತ್ವದಲ್ಲಿ ರಥೋತ್ಸವ ನೆರವೇರಿತು. ಠಾಣಾಧಿಕಾರಿ ಕೆ.ಬಿ.ಜಕ್ಕನ್ನವರ ಹಾಗೂ ಪೋಲಿಸ್ ಸಿಬ್ಬಂದಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

ಮುಗಿಲು ಮುಟ್ಟುವ ಘೋಷಣೆ ರಥ ಮುಂದೆ ಸಾಗುತ್ತಿದ್ದಂತೆ ಭಾವಪರವಶಗೊಂಡ ಭಕ್ತರು ಲೋಕೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಾಹದೇವಿ ಜೈ ಶಂಕರ ಎನ್ನುತ್ತ ರಥದ ಮೇಲೆ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ತಮ್ಮ ಹರಕೆಯನ್ನು ಲೋಕನಾಥನಿಗೆ ಅರ್ಪಿಸಿದರು. ರಥವು ರಾಮಲಿಂಗೇಶ್ವರ ದೇವಸ್ಥಾನಕ್ಕೆ ಬಂದು ನಿಂತಾಗ ಕಂಡು ಬರುವ ದೃಶ್ಯ ಕಣ್ಮನ ಸೆಳೆಯಿತು.

ಕ್ಯಾಮರ್ ಕಣ್ಗಾವಲು : ಜಾತ್ರಾ ನಿಮಿತ್ತ ಜನಸಂದಣಿ ದೇವಸ್ಥಾನದ ಸುತ್ತಮುತ್ತ, ಮಹಿಳೆಯರು, ಮಕ್ಕಳು ಇದ್ದ ಕಡೆ ಪೋಲಿಸ್ ಇಲಾಖೆ ಕ್ಯಾಮರ್ ಕಣ್ಗಾವಲು ಇಟ್ಟಿದ್ದರು. ಸಿಪಿಐ ಮಹಾದೇವ ಸಿರಹಟ್ಟಿ, ಪಿಎಸ್‌ಐ ಕೆ.ಬಿ.ಜಕ್ಕನ್ನವರ ಹಾಗೂ ಪೋಲಿಸ್ ಸಿಬ್ಬಂದಿ ಲೋಕಾಪುರ ಸುತ್ತಮುತ್ತಲಿನ ಲೋಕೇಶ್ವರ ಅಪಾರ ಭಕ್ತರು ಇದ್ದರು.