ಇಲ್ಲಿಯ ಹೊಸ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಸುಮಾರು 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ನಗದು ಹಣವಿದ್ದ ಬ್ಯಾಗ್‌ನ್ನು ಪೊಲೀಸರು ತ್ವರಿತ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿ ದೂರುದಾರರಿಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಕುಮಟಾ

ಇಲ್ಲಿಯ ಹೊಸ ಬಸ್ ನಿಲ್ದಾಣದ ಬಳಿ ಮಹಿಳೆಯೊಬ್ಬರು ಕಳೆದುಕೊಂಡಿದ್ದ ಸುಮಾರು 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರ ಹಾಗೂ ನಗದು ಹಣವಿದ್ದ ಬ್ಯಾಗ್‌ನ್ನು ಪೊಲೀಸರು ತ್ವರಿತ ಕಾರ್ಯಾಚರಣೆ ಮೂಲಕ ಪತ್ತೆ ಮಾಡಿ ದೂರುದಾರರಿಗೆ ಹಸ್ತಾಂತರಿಸಿದರು.

ಕುಮಟಾ ತಾಲೂಕಿನ ವಾಲಗಳ್ಳಿ ನಿವಾಸಿ ಬೇಬಿ ಅಣ್ಣಪ್ಪ ವರ್ಣೇಕರ್ ಹುಬ್ಬಳಿಯಿಂದ ಕುಮಟಾಕ್ಕೆ ಬಸ್ ಮೂಲಕ ಪ್ರಯಾಣಿಸಿ, ಕುಮಟಾದ ಹೊಸ ಬಸ್ ನಿಲ್ದಾಣದಲ್ಲಿ ಇಳಿದಿದ್ದರು. ತಮ್ಮ ಇನ್ನುಳಿದ ಎರಡು ಚೀಲಗಳನ್ನು ಆಟೋ ರಿಕ್ಷಾದಲ್ಲಿ ಇಟ್ಟುಕೊಂಡು ತೆರಳುವ ಸಂದರ್ಭ ಗಡಿಬಿಡಿಯಲ್ಲಿ ಮೌಲ್ಯ ವಸ್ತುಗಳಿದ್ದ ಬ್ಯಾಗ್ ಅನ್ನು ಬಸ್‌ನಲ್ಲೇ ಬಿಟ್ಟು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಬ್ಯಾಗ್ ಇಲ್ಲದಿರುವುದು ಗಮನಕ್ಕೆ ಬಂದಾಗ ಅವರು ಆತಂಕಗೊಂಡಿದ್ದರು.

ತಕ್ಷಣವೇ ಬೇಬಿ ವರ್ಣೇಕರ್ ಕುಮಟಾ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಬ್ಯಾಗ್ ಕಳೆದುಕೊಂಡಿರುವ ಬಗ್ಗೆ ದೂರು ಸಲ್ಲಿಸಿ, ಪತ್ತೆ ಮಾಡಿಕೊಡುವಂತೆ ವಿನಂತಿಸಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕುಮಟಾ ಪೊಲೀಸ್ ಠಾಣೆಯ ಸಿಪಿಐ ಯೋಗೇಶ ಕೆ.ಎಂ., ಕೂಡಲೇ ಬಸ್ ನಿಲ್ದಾಣದ ಸುತ್ತಮುತ್ತ ಅಳವಡಿಸಿರುವ ಸಿಸಿ ಕ್ಯಾಮೆರಾ ದೃಶ್ಯ ಪರಿಶೀಲಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಕಾರ್ಯಾಚರಣೆ ನಡೆಸಿದ ಪೊಲೀಸರು, ಕಳೆದುಹೋದ ಬ್ಯಾಗ್ ಅನ್ನು ಯಶಸ್ವಿಯಾಗಿ ಪತ್ತೆ ಮಾಡಿ, ಅದರಲ್ಲಿದ್ದ ಬಂಗಾರದ ಮಂಗಳಸೂತ್ರ ಹಾಗೂ ನಗದು ಹಣ ಸಹಿತವಾಗಿ ದೂರುದಾರ ಮಹಿಳೆಗೆ ಹಸ್ತಾಂತರಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ಸಿಬ್ಬಂದಿ ಕಿರಣ ನಾಯ್ಕ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಮೌಲ್ಯ ವಸ್ತುಗಳಿದ್ದ ಬ್ಯಾಗ್ ಸುರಕ್ಷಿತವಾಗಿ ಮರಳಿ ದೊರಕಿದ ಹಿನ್ನೆಲೆ ಬೇಬಿ ವರ್ಣೇಕರ್ ಪೊಲೀಸ್ ಇಲಾಖೆಯ ತ್ವರಿತ ಸ್ಪಂದನೆ ಹಾಗೂ ಪ್ರಾಮಾಣಿಕ ಕಾರ್ಯಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.