ಗವಿಶ್ರೀಗಳು ಬದುಕುವ ಮೌಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ನಮ್ಮ ಬದುಕುವ ರೀತಿ ಸದಾ ಕಾಲ ಮಾರ್ಗದರ್ಶಿಯಾಗಿ ಉಳಿಯಬೇಕು

ಕೊಪ್ಪಳ: ಕೊಪ್ಪಳ ಗವಿಮಠ ಮೌಲ್ಯಗಳ ದೀಪಸ್ತಂಭ ಹಾಗೂ ಮಾನವೀಯತೆ ಪಾಠಶಾಲೆ ಆಗಿದೆ ಎಂದು ಮಹಾರಥೋತ್ಸವ ಉದ್ಘಾಟಿಸಿದ ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ ಹೇಳಿದರು.

ನಗರದ ಗವಿಮಠದ ಕೈಲಾಸ ಮಂಟಪದಲ್ಲಿ ಜರುಗಿದ ಉದ್ಘಾಟನಾ ಸಮಾರಂಭದಲ್ಲಿ ಗವಿಸಿದ್ದೇಶ್ವರ ರಥೋತ್ಸವದ ಉದ್ಘಾಟನೆ ನುಡಿಗಳನ್ನಾಡಿದ ಅವರು, ಗವಿಮಠ ಧಾರ್ಮಿಕ ಸಂಸ್ಥೆ ಮಾತ್ರವಲ್ಲದೆ ಮೌಲ್ಯಗಳ ದೀಪಸ್ತಂಭ ಆಗಿದೆ. ಮಾನವೀಯತೆಯ ಪಾಠಶಾಲೆ ಆಗಿದೆ. ಕರುಣೆಯ ಆಶ್ರಯ ತಾಣವಾಗಿದೆ. ಗವಿಶ್ರೀಗಳು ಬದುಕುವ ಮೌಲ್ಯಗಳನ್ನು ಜನರಿಗೆ ತಲುಪಿಸುತ್ತಿದ್ದಾರೆ. ನಮ್ಮ ಬದುಕುವ ರೀತಿ ಸದಾ ಕಾಲ ಮಾರ್ಗದರ್ಶಿಯಾಗಿ ಉಳಿಯಬೇಕು ಎಂದು ಶ್ರೀಗಳು ಕಾರ್ಯ ಮಾಡುತ್ತಿದ್ದಾರೆ. ಧ್ಯೇಯ ಭಾರತೀಯರಾಗಿ, ಜಂಗಮ ಲಾಂಛನ ಕಟ್ಟಿ, ಹರಿವ ನದಿಯಾಗಿ, ಉರಿಯುವ ಜ್ಯೋತಿಯಾಗಿ ಜನ ಮನ ಬೆಳಗುತ್ತಿರುವ ಅಪರೂಪದ ಸಂತರಾಗಿದ್ದಾರೆ ಹಾಗೂ ಮನುಕುಲ ಬೆಳಗುವ ಕರ್ಮಯೋಗಿ ಅದು ಗವಿಶ್ರೀ ಆಗಿದ್ದಾರೆ ಎಂದು ಮನತುಂಬಿ ಬಣ್ಣಿಸಿದರು.

ಗವಿಮಠಕ್ಕೆ ಬರುವವರು ಹಸಿವಿನಿಂದ ಹಿಂದಿರುಗಿದ ಉದಾಹರಣೆ ಇಲ್ಲ. ಇಲ್ಲಿ ಜಾತಿ, ಮತ, ಪಂಥ, ಪಂಗಡಗಳ ಬೇಧಭಾವವಿಲ್ಲ. ಇಲ್ಲಿ ಭಾಷೆ, ಸ್ಥಾನಮಾನ ಭೇದವಿಲ್ಲ. ಲಕ್ಷಾಂತರ ಭಕ್ತರು ಒಂದೇ ಸಾಲಿನಲ್ಲಿ ಕುಳಿತು ದಾಸೋಹ ಸ್ವೀಕರಿಸುವ ಪರಂಪರೆ ಗವಿಮಠದಲ್ಲಿ ಕಾಣುತ್ತೇವೆ. ಭರತ ಭೂಮಿಯ ಇತಿಹಾಸ ಅದ್ಭುತ. ಇಲ್ಲಿ ಸಂತರು ಕಂಡ ಕನಸು ನನಸಾಗಿರುವ ವಾತಾವರಣ ಗವಿಮಠದಲ್ಲಿದೆ. ಶ್ರೀಗಳ ಬದುಕು ಅರ್ಥೈಸುವಾಗ, ದೇವರು ಎಂದಿಗೂ ಹೋರಾಟಗಾರರನ್ನು, ಪ್ರಯತ್ನಶೀಲರನ್ನು ಕೈ ಬಿಡುವುದಿಲ್ಲ. ಅದೃಷ್ಠ ಎಂದಿಗೂ ಹೇಡಿಗಳನ್ನು ಹುಡುಕಿಕೊಂಡು ಬರುವುದಿಲ್ಲ ಎಂಬುದಕ್ಕೆ ಗವಿಶ್ರೀಗಳು ಉದಾಹರಣೆ ಎಂದರು.

ನಾನು ಹದಿನೈದು ವರ್ಷಗಳ ಹಿಂದೆ ಕೊಪ್ಪಳಕ್ಕೆ ಬಂದಾಗ ನನಗೆ ಪರಿಚಯ ಇದ್ದವರ ಮನೆಗೆ ಹೋದಾಗ ಎಲ್ಲರ ಮನೆಯಲ್ಲಿ ಗವಿಶ್ರೀ ಫೋಟೊ ಇರುವುದನ್ನು ನೊಡಿದ್ದೆ. ಆಗ ಅವರನ್ನು ಕೇಳಿದಾಗ ನಮ್ಮ ಅಜ್ಜನವರು ಅಂದರು. ಆಗ ನನಗೆ ಅಚ್ಚರಿಯಾಯಿತು.‌ ಎಲ್ಲರ ಮನ ಗೆದ್ದಿರುವ ಶ್ರೀಗಳನ್ನು ನೋಡಬೇಕು ಎಂದು ಸೀದಾ ಮಠಕ್ಕೆ ಬಂದೆ.‌ ಆಗ ಅವರನ್ನು ನೋಡಿ ನಾನು ಪುನೀತನಾಗಿದ್ದೆ. ಈಗ ಇತ್ತೀಚೆಗೆ ಬಂದಾಗ ಮಠಕ್ಕೆ ಭೇಟಿ ನೀಡಿದಾಗ ಇಲ್ಲಿಯ ಅಭಿವೃದ್ಧಿ ಕಂಡು ಮೂಕವಿಸ್ಮಿತನಾದೆ. ಇದೆಲ್ಲವೂ ಸುಮ್ಮನೇ ಆಗಿರುವುದಲ್ಲ. ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳ ತಪಸ್ಸಿನ ಫಲ ಎಂದರು.

ಕಳೆದ ಬಾರಿ ಅಂಜನಾದ್ರಿ ಬೆಟ್ಟ ಹತ್ತುವಾಗ ನನ್ನ ಸೊಂಟಕ್ಕೆ ತೊಂದರೆಯಾಗಿ ನಾನು ಎರಡು ತಿಂಗಳ ಕಾಲ ಪ್ರವಾಸ ಮಾಡಬಾರದೆಂದು ವೈದ್ಯರು ತಿಳಿಸಿದ್ದರೂ ಸಹಿತ ಗವಿಮಠದ ಆಹ್ವಾನ ತಿರಸ್ಕರಿಸದೆ ಬಂದು ಇಲ್ಲಿ ಇಡೀ ದಿನ ನಾನು ಓಡಾಡಿದ್ದೇನೆ. ಆದರೆ, ನನಗೆ ಯಾವುದೇ ತೊಂದರೆ ಆಗಿಲ್ಲ. ಹೀಗಾಗಿ ಇಲ್ಲಿಯ ಮಹಿಮೆ ಅಪಾರವಾಗಿದೆ. ನಾನು ಒಂದು ವಾರ ಇಲ್ಲೇ ಇದ್ದರೆ ನನಗೆ ಯಾವುದೇ ವೈದ್ಯರ ಅವಶ್ಯಕತೆ ಇಲ್ಲದೆ ನನ್ನ ಸೊಂಟದ ನೋವು ಕಡಿಮೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನಾರೋಗ್ಯದ ಮಧ್ಯೆಯೂ ಜಾತ್ರೆಗೆ ಬರಲು ಒಪ್ಪಿದೆ. ಯಾಕೆಂದರೆ ಮಾನಸಿಕ, ಶಾರೀರಕ, ಸಾಮಾಜಿಕ ಜವಾಬ್ದಾರಿಯ ಶಕ್ತಿ ನೀಡುವ ಔಷಧ ಸ್ಥಳ ಗವಿಮಠ ಆಗಿದೆ. ನನ್ನ ಆರೋಗ್ಯ ಸುಧಾರಿಸುವ ಶಕ್ತಿ ಈ ಸ್ಥಳಕ್ಕೆ ಇದೆ. ಅಂತಹ ಶಕ್ತಿ ಈ ಮಣ್ಣಿಗೆ ಇದೆ ಎಂದರು.

ಈ ಭಾಗದ ಪರಿಸರ ಸಂರಕ್ಷಣೆ, ನೆಲದ ರಕ್ಷಣೆ, ಪ್ರಾಕೃತೀಕ ಸ್ವತ್ತಿನ ರಕ್ಷಣೆ ಮಾಡುವಲ್ಲಿ ಗವಿಸಿದ್ದೇಶ್ವರ ಶ್ರೀಗಳು ಮುಂಚೂಣಿಯಲ್ಲಿದ್ದಾರೆ. ಮೇಘಾಲಯ ಔಷಧಿಗಳ ನಾಡು, ಅಲ್ಲಿಗೆ ಗವಿಶ್ರೀಗಳು ಕೂಡಾ ಬರಬೇಕು. ನಮ್ಮ ರಾಜಭವನದಲ್ಲಿ ತಮ್ಮ ಪಾದ ಮೂಡಲಿ. ಇಷ್ಟರಲ್ಲಿಯೇ ಆಹ್ವಾನ ನೀಡುತ್ತಿದ್ದೇನೆ ಎಂದರು.

ಬಿನ್ನಾಳ ಗ್ರಾಮ ನೆನೆದ ರಾಜ್ಯಪಾಲ:ನನ್ನ ಮೂಲ ಇದೇ ನೆಲ. ನಮ್ಮ ಕುಟುಂಬದ ಹಿರಿಯರು ಜಿಲ್ಲೆಯ ಬಿನ್ನಾಳ ಗ್ರಾಮದವರು. ಈಗಲೂ ಅಲ್ಲಿ ನಮ್ಮ ಮನೆ ಇದೆ. ಅದನ್ನು ಮಾರಿಲ್ಲ ಎಂದರು.