ಈಗಲಾದರೂ ನಾವು ಎಚ್ಚೆತ್ತುಕೊಂಡು ಮನೆ ಮುಂದೆ ಜಾಗವಿದ್ದರೆ ಹಸುಗಳನ್ನು ಸಾಕಿ ಇಡಿ ಕುಟುಂಬವನ್ನು ಆರೋಗ್ಯವಂತರನ್ನಾಗಿ ಮಾಡಬಹುದು.

ಗದಗ: ಮನೆಯಲ್ಲಿ ಒಂದು ಹಸು ಇದ್ದರೆ ಅದು ಇಡೀ ಕುಟುಂಬದ ಆರ್ಥಿಕ ಶಕ್ತಿಯಾಗಿರುತ್ತದೆ. ಆದ್ದರಿಂದ ಎಲ್ಲರೂ ಹಸುಗಳನ್ನು ಸಾಕುವ ಮೂಲಕ ಕುಟುಂಬದ ಆರೋಗ್ಯ ಕಾಪಾಡಿಕೊಂಡು ಮತ್ತು ಆರ್ಥಿಕ ಸದೃಢತೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಬಿ.ಆರ್. ದೇವರಡ್ಡಿ ತಿಳಿಸಿದರು.ತಾಲೂಕಿನ ನಾಗಾವಿ ಗ್ರಾಮದಲ್ಲಿ ಬೃಹತ್ ಮಿಶ್ರತಳಿ ಮತ್ತು ದೇಶಿತಳಿ ಜಾನುವಾರುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲಿ ಹಸುಗಳನ್ನು ಸಾಕುತ್ತಿದ್ದರಿಂದ ಇಡಿ ಕುಟುಂಬವು ಹಾಲು, ಬೆಣ್ಣೆ, ತುಪ್ಪ, ಮೊಸರು ಸೇವಿಸಿ ಆರೋಗ್ಯದಿಂದ ಇರುತ್ತಿದ್ದರು. ಆದರೆ ಈಗ ಕಾಲ ಬದಲಾದಂತೆ ಇಂದು ಮನೆಯಲ್ಲಿ ಇರಬೇಕಾದ ಹಸುಗಳು ರಸ್ತೆಯಲ್ಲಿವೆ. ರಸ್ತೆಯಲ್ಲಿ ಇರಬೇಕಾದ ಪ್ರಾಣಿಗಳು ಮನೆಯಲ್ಲಿವೆ. ಈಗಲಾದರೂ ನಾವು ಎಚ್ಚೆತ್ತುಕೊಂಡು ಮನೆ ಮುಂದೆ ಜಾಗವಿದ್ದರೆ ಹಸುಗಳನ್ನು ಸಾಕಿ ಇಡಿ ಕುಟುಂಬವನ್ನು ಆರೋಗ್ಯವಂತರನ್ನಾಗಿ ಮಾಡಬಹುದು ಎಂದರು. ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ವೈ. ಹೊನ್ನಿನಾಯ್ಕರ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು, ಜಾನುವಾರುಗಳ ಆರೋಗ್ಯ ರಕ್ಷಣೆ, ಲಸಿಕೆ, ಕರುಗಳ ಪಾಲನೆ ಮತ್ತು ರೈತ ಮಹಿಳೆಯರಿಗೆ ಇಲಾಖೆಯಲ್ಲಿರುವ ಸರ್ಕಾರಿ ಸವಲತ್ತುಗಳ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಜಾನುವಾರು ಪ್ರದರ್ಶನದಲ್ಲಿ ಎಚ್‌ಎಫ್ ಆಕಳುಗಳ ವಿಭಾಗದಲ್ಲಿ 96 ಜರ್ಸಿ ವಿಭಾಗದಲ್ಲಿ 64 ಮತ್ತು ಸ್ಥಳೀಯ ತಳಿಗಳ ವಿಭಾಗದಲ್ಲಿ 20 ಜಾನುವಾರಗಳು ಪ್ರದರ್ಶನಕ್ಕೆ ಬಂದಿವೆ. ರೈತರು ಈ ಜಾನುವಾರುಗಳ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಈ ವೇಳೆ ಜಾನುವಾರು ಪ್ರದರ್ಶನಕ್ಕೆ ಸ್ಥಳಾವಕಾಶ ನೀಡಿದ ಮರಿಯಪ್ಪ ಸಿದ್ನೆಕೊಪ್ಪ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷ ಉಳವಪ್ಪ ಶಿಗ್ಲಿ, ಸದಸ್ಯರಾದ ಹುಸೇನಸಾಬ್ ನದಾಫ್, ಪಾರವ್ವ ಗೊರವರ, ಹನುಮವ್ವ ಸಿದ್ನೆಕೊಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಎನ್.ಎಸ್. ಗೌರಿ, ಡಾ. ಸಂತೋಷ ಕುಂದರಗಿ, ಡಾ. ಮಂಜುನಾಥ ಮೇಟಿ, ಡಾ. ರಾಠೋಡ, ಡಾ. ಬಾಬಾಜಾನ ಕುರಹಟ್ಟಿ, ಡಾ. ಮುದೋಳಕರ, ಡಾ. ಶಿವದರ್ಶನ, ಡಾ. ಮಡಿವಾಳರ, ಡಾ. ಜೆ.ಎಸ್. ಮಟ್ಟಿ, ಡಾ. ತಾಂಬೋಳಿ, ಸರಗಣಾಚಾರಿ, ಚಿಕ್ಕಾಡಿ, ಅರಕೇರಿ, ಬಿರಾದಾರ, ಸತೀಶ ಕಟ್ಟಿಮನಿ ಇದ್ದರು. ಡಾ. ಬಸನಗೌಡ ಸ್ವಾಗತಿಸಿದರು. ಡಾ. ಗಾಣಗೇರ ನಿರೂಪಿಸಿದರು. ಡಾ. ಉಮೇಶ ತಿರ್ಲಾಪೂರ ಬಹುಮಾನ ವಿತರಿಸಿದರು.