ನರಸಿಂಹರಾಜಪುರಬೇರೆ ಭಾಷೆ ಬಗ್ಗೆ ದ್ವೇಷ ಮಾಡದೆ ಎಲ್ಲಾ ಭಾಷೆಯನ್ನು ಕಲಿಯಿರಿ. ಆದರೆ, ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು ಎಂದು ಬಿ.ಎಚ್.ಕೈಮರದ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

- ಕ.ಸಾ.ಪ ಮಹಿಳಾ ಘಟಕದಿಂದ ಬಿ.ಎಚ್.ಕೈಮರ ಐಟಿಐ ಕಾಲೇಜಿನಲ್ಲಿ ನುಡಿ ಸಂಭ್ರಮ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಬೇರೆ ಭಾಷೆ ಬಗ್ಗೆ ದ್ವೇಷ ಮಾಡದೆ ಎಲ್ಲಾ ಭಾಷೆಯನ್ನು ಕಲಿಯಿರಿ. ಆದರೆ, ಕನ್ನಡ ಭಾಷೆಯನ್ನು ಮಾತ್ರ ಪ್ರೀತಿಸಬೇಕು ಎಂದು ಬಿ.ಎಚ್.ಕೈಮರದ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ರವಿರಾಜ್ ಹೆಗಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮಂಗಳವಾರ ಬಿ.ಎಚ್.ಕೈಮರದ ಐಟಿಐ ಕಾಲೇಜಿನಲ್ಲಿ ಕಸಾಪ ತಾಲೂಕು ಮಹಿಳಾ ಘಟಕದವರು ಆಯೋಜಿಸಿದ್ದ ನುಡಿ ಸಂಭ್ರಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಆಂಗ್ಲ ಪದ ಬಳಸದೆ ಅಚ್ಚ ಕನ್ನಡದಲ್ಲಿ ಮಾತನಾಡುವ ಆಶು ಭಾಷಣ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಬಂದ ಬೇರೆ ಭಾಷಿಗರೊಂದಿಗೆ ನಾವು ಅವರ ಭಾಷೇಯಲ್ಲೇ ಉತ್ತರ ಕೊಡಲು ಹೋಗುತ್ತೇವೆ. ಬೇರೆ ಭಾಷಿಗರು ಕನ್ನಡ ಭಾಷೆ ಕಲಿಯುವುದೇ ಇಲ್ಲ. ಆದರೆ, ಕನ್ನಡಿ ಗರು ತಮಿಳು ನಾಡು, ಕೇರಳಕ್ಕೆ ಹೋದರೆ ಅಲ್ಲಿ ನಮಗೆ ಕನ್ನಡ ಭಾಷೆ ಸಿಗುವುದಿಲ್ಲ. ಆದ್ದರಿಂದ ಕನ್ನಡ ಭಾಷೆ ಬಗ್ಗೆ ಪ್ರತಿ ಯೊಬ್ಬ ಕನ್ನಡಿಗರು ಅಭಿಮಾನ ಬೆಳೆಸಿಕೊಳ್ಳಬೇಕು. ಮಾತೃ ಭಾಷೆಯಲ್ಲೇ ಶಿಕ್ಷಣ ನೀಡಿದರೆ ಅದು ಹೆಚ್ಚು ಪರಿಣಾಮಕಾರಿ ಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಪ್ರಾತಿನಿಧಿಕ ಸಂಸ್ಥೆ. ಕನ್ನಡ ಭಾಷೆ ಅಭಿವೃದ್ದಿ, ಬೆಳವಣಿಗೆಗೆ ಇರುವ ಸಂಸ್ಥೆಯಾಗಿದೆ. ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾರ್ಗದರ್ಶನದಲ್ಲಿ ಹಲವಾರು ಕಾರ್ಯಕ್ರಮ ನಡೆಸುತ್ತಾ ಬಂದಿದೆ. ತಾಲೂಕು ಕಸಾಪ ಮಹಿಳಾ ಘಟಕ ಸಹ ಉತ್ತಮ ಕಾರ್ಯಕ್ರಮ ನಡೆಸುತ್ತಿದೆ. ಮಕ್ಕಳು ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಗೆ ಹೆಚ್ಚು ಒತ್ತು ನೀಡಬೇಕು.ಆತ್ಮ ವಿಶ್ವಾಸ, ಕೌಸಲ್ಯಾಭಿವೃದ್ದಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.

ಸಭೆ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯನಂಜುಂಡಸ್ವಾಮಿ ಮಾತನಾಡಿ, ಕನ್ನಡ ಭಾಷೆ ಅಭಿಜಾತ ಭಾಷೆ ಎಂದು ಗೌರವಿಸಲ್ಪಟ್ಟಿದೆ. 8 ಜ್ಞಾನ ಪೀಠ ಪ್ರಶಸ್ತಿ ಪಡೆದುಕೊಂಡು ಕರ್ನಾಟಕದ ಅಧಿಕೃತ ಭಾಷೆಯಾಗಿ ಮಾನ್ಯತೆ ಪಡೆದಿದೆ. ಕಸಾಪ ಮಹಿಳಾ ಘಟಕದಿಂದ ಹಲವಾರು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿ ದ್ದೇವೆ. ಇಂದು ಐಟಿಐ ಕಾಲೇಜಿನ ಮಕ್ಕಳಿಗೆ ಆಶುಭಾಷಣ ಸ್ಪರ್ಧೆ ಏರ್ಪಡಿಸಿದ್ದು ಇದರಿಂದ ವಿದ್ಯಾರ್ಥಿಗಳಲ್ಲಿ ವಾಕ್ಚಾತುರ್ಯ, ವಿಷಯ ಸಂಗ್ರಹಣೆ ಹಾಗೂ ಮಾತನಾಡುವ ಕಲೆ ವೃದ್ದಿಯಾಗಲಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಯಡಗೆರೆ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳಿಗೆ ನಾಲ್ಕು ಗೋಡೆ ಮದ್ಯೆ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಗಳೂ ಅತಿ ಮುಖ್ಯವಾಗಿವೆ. ವಿದ್ಯಾರ್ಥಿಗಳು ಪ್ರತಿ ನಿತ್ಯ ಕನ್ನಡ ದಿನಪತ್ರಿಕೆ ಓದುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಕನ್ನಡ ದಿನ ಪತ್ರಿಕೆ ಓದುತ್ತಾ ಬಂದರೆ ಒಬ್ಬ ಒಳ್ಳೆಯ ಮಿತ್ರನನ್ನು ಸಂಪಾದನೆ ಮಾಡಿದಂತೆ ಆಗಲಿದೆ ಎಂದರು. ಅತಿಥಿಗಳಾಗಿ ಸಾಹಿತಿ ಜಯಮ್ಮ, ಐಟಿಐ ಕಾಲೇಜಿನ ಕಚೇರಿ ಅಧೀಕ್ಷಕ ಕಿರಣ್ ಬೇಂದ್ರೆ, ನಿವೃತ್ತ ಶಿಕ್ಷಕಿ ಜಯಂತಿ, ಕಸಾಪ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಇದ್ದರು.

ಆಶು ಭಾಷಣ ಸ್ಪರ್ಧೆಯಲ್ಲಿ ಕುಮಾರಸ್ವಾಮಿ ಪ್ರಥಮ ಸ್ಥಾನ, ಅರ್ಜುನ್ ದ್ವಿತೀಯ ಸ್ಥಾನ ಪಡೆದರು. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.