ಪ್ರತಿ ಪಕ್ಷವನ್ನು ಕಟ್ಟಿಹಾಕುವ ಪೂರ್ವಾಗ್ರಹ ಪೀಡಿತವಾದ ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಯಾವ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.
ಶಿವಮೊಗ್ಗ: ಪ್ರತಿ ಪಕ್ಷವನ್ನು ಕಟ್ಟಿಹಾಕುವ ಪೂರ್ವಾಗ್ರಹ ಪೀಡಿತವಾದ ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ಯಾವ ಕಾರಣಕ್ಕೂ ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಿದೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ಇಂತಹ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಈಗ ಸಿದ್ದರಾಮಯ್ಯ ಅವರು ಮತ್ತೇ ಅದೇ ಕೆಲಸವನ್ನು ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಆಗಿದೆ. ಸಂವಿಧಾನದ ಆರ್ಟಿಕಲ್ 19‘ಎ’ಗೆ ವಿರುದ್ಧವಾಗಿದೆ ಎಂದರು.ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಇರುತ್ತದೆ. ಆದರೆ ಇದು ಅದಕ್ಕೆ ಕಡಿವಾಣ ಹಾಕಲಾಗಿದೆ. ಪ್ರತಿಪಕ್ಷಗಳನ್ನು ಕಟ್ಟಿಹಾಕುವ ಕುತಂತ್ರವಿದೆ. ಜನವಿರೋಧಿ ಧೋರಣೆಯಿಂದ ಕೂಡಿದೆ. ದ್ವೇಷಕ್ಕೆ ಹೆಚ್ಚು ಶಕ್ತಿಯನ್ನು ಕೊಟ್ಟಂತ್ತಾಗುತ್ತದೆ. ಸುಪ್ರೀಂಕೋರ್ಟ್ ತೀರ್ಪುಗಳಿಗೂ ಇದು ವಿರುದ್ಧವಾಗಿದೆ ಎಂದು ಆರೋಪಿಸಿದರು.ಈ ಬಿಲ್ಲನ್ನು ಪಾಸ್ ಮಾಡುವ ಮೂಲಕ ಸ್ವಾಮೀಜಿಗಳು, ಸಾಹಿತಿಗಳು ಪ್ರತಿಭಟನಾಕಾರರು ಸಂಘ-ಸಂಸ್ಥೆಗಳು ಸೇರಿದಂತೆ ಶ್ರೀಸಾಮಾನ್ಯನ ಬಾಯಿ ಮುಚ್ಚಿಸುವ ನಿರ್ಧಾರವಿದು. ಮುಂದೊಂದು ದಿನ ಸಾಹಿತಿಗಳ ಪುಸ್ತಕಗಳು ಈ ಕಾಯ್ದೆಯಿಂದ ಬ್ಯಾನ್ ಆಗುವ ಅಪಾಯವಿದೆ. ಅಲ್ಲದೆ ದ್ವೇಷದ ಭಾಷಣದ ಬಗ್ಗೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಬಹುದಾಗಿದೆ. ಯಾವುದೇ ವ್ಯಕ್ತಿ ದ್ವೇಷ ಭಾಷಣ ಮಾಡದಿದ್ದರೂ ಆ ವ್ಯಕ್ತಿಯ ಮೇಲಿನ ದ್ವೇಷದಿಂದ ಅವನನ್ನು ಬಂಧಿಸಬಹುದಾಗಿದೆ. ಇಂತಹ ಕರಾಳ ವಿಧೇಯಕವನ್ನು ಬಿಜೆಪಿ ವಿರೋಧಿಸುತ್ತದೆ. ಅಲ್ಲದೆ ಇದರ ವಿರುದ್ಧ ಹೋರಾಟವನ್ನು ಕೂಡ ಆರಂಭಿಸುತ್ತದೆ. ಶಿವಮೊಗ್ಗದಲ್ಲಿ ಡಿ.26ರಂದು ಶಿವಪ್ಪನಾಯಕ ಪ್ರತಿಮೆ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎನ್.ಕೆ.ಜಗದೀಶ್, ಎನ್.ಜೆ.ನಾಗರಾಜ್, ಮಂಜುನಾಥ್ ನವಿಲೆ, ದೀನದಯಾಳ್, ಎಂ.ಬಿ. ಹರಿಕೃಷ್ಣ, ಮುರಳಿ, ಶ್ರೀನಾಗ್, ಮೋಹನ್ ರೆಡ್ಡಿ, ಮಂಜು ಇದ್ದರು.