ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಮನ್ನಣೆ ದೊರೆಯಬೇಕು: -ಸಂಸದ ಪ್ರತಾಪ್ ಸಿಂಹ ಅಭಿಮತ

| Published : Feb 25 2024, 01:55 AM IST

ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಮನ್ನಣೆ ದೊರೆಯಬೇಕು: -ಸಂಸದ ಪ್ರತಾಪ್ ಸಿಂಹ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ವ್ಯಂಗ್ಯಚಿತ್ರ ಕಲೆಯು ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ. ಗಂಭೀರವಾದ ವಿಚಾರವನ್ನು ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯಚಿತ್ರದ ಶೈಲಿ. ವ್ಯಂಗ್ಯಚಿತ್ರಕಾರರು ಜನಪ್ರಿಯ ವ್ಯಂಗ್ಯಚಿತ್ರಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಒಳ್ಳೆಯ ವಿಷಯ

ಕನ್ನಡಪ್ರಭ ವಾರ್ತೆ ಮೈಸೂರು

ವ್ಯಂಗ್ಯಚಿತ್ರ ಪತ್ರಿಕೆಗಳ ಓದುಗರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತದೆ. ಪತ್ರಿಕೆ ಅಭಿರುಚಿ ಹೆಚ್ಚಿಸಲು ವ್ಯಂಗ್ಯಚಿತ್ರಕಾರರಿಂದ ಸಾಧ್ಯ. ಹೀಗಾಗಿ, ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಅವಕಾಶ, ಮನ್ನಣೆ ದೊರೆಯಬೇಕು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನ ವಿಜಯನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಕರ್ನಾಟಕ ವ್ಯಂಗ್ಯ ಚಿತ್ರಕಾರರ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂ.ವಿ. ನಾಗೇಂದ್ರಬಾಬು (ಬ್ಯಾಂಟರ್ ಬಾಬು) ಅವರು ರಚಿಸಿರುವ ವ್ಯಂಗ್ಯ ಚಿತ್ರ ಸಿಂಹಾವಲೋಕನ ಎಂಬ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.

ವ್ಯಂಗ್ಯಚಿತ್ರ ಕಲೆಯು ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ. ಗಂಭೀರವಾದ ವಿಚಾರವನ್ನು ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯಚಿತ್ರದ ಶೈಲಿ. ವ್ಯಂಗ್ಯಚಿತ್ರಕಾರರು ಜನಪ್ರಿಯ ವ್ಯಂಗ್ಯಚಿತ್ರಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಒಳ್ಳೆಯ ವಿಷಯ ಎಂದು ಅವರು ಶ್ಲಾಘಿಸಿದರು.

ಇಂದು ಡಿಜಿಟಲ್ ಯುಗದಲ್ಲಿ ನಾವಿದ್ದೇವೆ. ಓದುಗರ ಸಂಖ್ಯೆ ಕಡಿಮೆಯಾಗಿದೆ. ಪತ್ರಿಕೆಯನ್ನು ಕಾಯ್ದಿರಿಸಿ ಓದುವ ಮನಸ್ಥಿತಿ ಹೊರಟು ಹೋಗಿದೆ. ಜೊತೆಗೆ ಸುದ್ದಿ ನೀಡುವ ಧಾವಂತದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ ಎಂದು ಅವರು ಹೇಳಿದರು.

ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಭಾಷೆಗೆ ಧ್ವನಿ ಇರಬೇಕು. ಸದ್ದು ಆದ ಮೇಲೆ ಏನೋ ಕೇಳಬೇಕು. ಅದರಂತೆ ಚಿತ್ರ ನೋಡಿದ ಮೇಲೆಯೂ ಏನೋ ಹೊಳೆಯಬೇಕು. ಅದುವೇ ವ್ಯಂಗ್ಯ ಚಿತ್ರ. ಸರ್ಕಾರ, ಸಮಾಜದ ವ್ಯವಸ್ಥೆಯ ಅಭಿಪ್ರಾಯ, ಭಿನ್ನಾಭಿಪ್ರಾಯ ಅವು ಬಿಂಬಿಸುತ್ತವೆ ಎಂದು ತಿಳಿಸಿದರು.

ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಉಪಾಧ್ಯಕ್ಷ ಎನ್. ಅನಂತ್, ಜಂಟಿ ಕಾರ್ಯದರ್ಶಿ ಕೆಂಪಣ್ಣ, ಸಮಾಜ ಸೇವಕ ಕೆ. ರಘುರಾಂ, ಲಕ್ಷ್ಮೀನರಸಿಂಹ ದೇವಸ್ಥಾನ ಸಿಇಒ ಕೆ.ಆರ್. ಯೋಗಾನರಸಿಂಹನ್, ಯೋಗ ವಿತ್ ಶ್ರೀನಾಥ ಸಂಸ್ಥಾಪಕ ಶ್ರೀನಾಥ್, ಕೃತಿಯ ಕರ್ತೃ ಎಂ.ವಿ. ನಾಗೇಂದ್ರಬಾಬು ಮೊದವಲಾದವರು ಇದ್ದರು.