ಸಾರಾಂಶ
ಶಿರಸಿ: ರಾಜ್ಯದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಮಾ. ೧೯ ರಿಂದ ೨೭ರವರೆಗೆ ನಡೆಯಲಿದೆ.
ದೇವಾಲಯದ ಆವರಣದಲ್ಲಿ ಭಾನುವಾರ ನಡೆದ ಜಾತ್ರಾ ದಿನಾಂಕ ನಿಗದಿ ಸಭೆಯಲ್ಲಿ ಅರ್ಚಕ ಶರಣಾಚಾರ್ಯ ಜಾತ್ರಾ ದಿನಾಂಕ ಪ್ರಕಟಿಸಿದರು.ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಬಳಿಕ ಇಲ್ಲಿಯ ದೇವಾಲಯದ ಸಭಾಭವನದಲ್ಲಿ ಜಾತ್ರಾ ಕಾರ್ಯಕ್ರಮಗಳನ್ನು ದೀಪ ಬೆಳಗುವ ಮೂಲಕ ಶಾಸಕ ಭೀಮಣ್ಣ ನಾಯ್ಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ನಮ್ಮ ಆರಾಧ್ಯ ದೈವವಾಗಿರುವ, ಧಾರ್ಮಿಕ ಚರಿತ್ರೆ ಇರುವ ಮಾರಿಕಾಂಬೆಯ ಜಾತ್ರೆ ಈ ವರ್ಷ ಉತ್ತಮವಾಗಿ ನಡೆಸಬೇಕು. ಕಳೆದ ಜಾತ್ರೆ ಕೋವಿಡ್ ಕರಿ ನೆರಳಿನಲ್ಲಿಯೇ ನಡೆದಿದ್ದರಿಂದ ಕೆಲ ತೊಡಕುಗಳೂ ಉಂಟಾಗಿದ್ದವು. ಧಾರ್ಮಿಕ ಪರಂಪರೆ ಹೊಂದಿರುವ ಈ ಜಾತ್ರೆಯಲ್ಲಿ ಬಾಬುದಾರರ ಪಾತ್ರ ಸಹ ಪ್ರಮುಖವಾಗಿದೆ. ಜಾತ್ರಾ ಪೂರ್ವ ಸಿದ್ಧತೆ ಉತ್ತಮವಾಗಿ ಮಾಡಿಕೊಳ್ಳಬೇಕು. ಸಾರ್ವಜನಿಕರ ಸೂಚನೆ ಗಮನದಲ್ಲಿಟ್ಟ ಜಾತ್ರೆ ಆಚರಿಸೋಣ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ.ಈ ವರ್ಷ ಮಹಿಳೆಯರಿಗೆ ಉಚಿತ ಬಸ್ ಸೇವೆ ಸಹ ಇರುವುದರಿಂದ ಈ ವರ್ಷ ಭಕ್ತಾದಿಗಳ ಸಂಖ್ಯೆ ಸಹ ಜಾಸ್ತಿ ಆಗಬಹುದು. ರಾಷ್ಟ್ರ ಮಟ್ಟದ ಜಾತ್ರೆ ಇದಾಗಿದ್ದು, ಉತ್ತಮವಾಗಿ ಆಚರಿಸಲು ನಮ್ಮ ಜವಾಬ್ದಾರಿ ಜಾಸ್ತಿ ಇದೆ ಎಂದರು.ಬಳಿಕ ಸಾರ್ವಜನಿಕರು, ಭಕ್ತರು ಮಾರಿಕಾಂಬಾ ದೇವಿ ಜಾತ್ರೆಯನ್ನು ಯಾವ ರೀತಿ ಉತ್ತಮವಾಗಿ ಆಚರಿಸಬಹುದು ಎಂಬ ಬಗ್ಗೆ ಸಲಹೆ ಸೂಚನೆ ನೀಡಿದರು. ಉಪವಿಭಾಗಾಧಿಕಾರಿ ಅಪರ್ಣಾ ರಮೇಶ, ಮಾರಿಕಾಂಬಾ ದೇವಾಲಯದ ಅಧ್ಯಕ್ಷ ರವಿ ನಾಯ್ಕ, ಉಪಾಧ್ಯಕ್ಷ ಸುದೇಶ ಜೋಗಳೇಕರ್, ಧರ್ಮದರ್ಶಿ ಸುಧೀರ ಹಂದ್ರಾಳ, ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ಡಿವೈಎಸ್ಪಿ ಗಣೇಶ ಕೆ.ಎಲ್., ಸಿಪಿಐ ರಾಮಚಂದ್ರ ನಾಯಕ, ಪಿ ಎಸ್ ಐ ನಾಗಪ್ಪ, ಬಾಬುದಾರ ಜಗದೀಶ ಗೌಡ ಇತರರಿದ್ದರು.
ಜಾತ್ರಾ ವಿಶೇಷತೆಗಳುಜ.31 ದೇವಿಯ ಪ್ರತಿಷ್ಠಾ ಮಂಟಪ ಕಳಚುವುದು, ಫೆ.27 ಮೊದಲ ಹೊರಬೀಡು, ಮಾ.1 ಎರಡನೇ ಹೊರಬೀಡು, ಮಾ.5 ಮೂರನೇ ಹೊರಬೀಡು, ಮಾ.8 ರಥ ನಿರ್ಮಾಣಕ್ಕಾಗಿ ವೃಕ್ಷ ಪೂಜೆ, ಮಾ.8 ನಾಲ್ಕನೇ ಹೊರಬೀಡು, ಮಾ.12 ರಥದ ಮರ ತರುವುದು, ಮಾ.12 ಅಂಕೆಯ ಹೊರಬೀಡು, ಮಾ.13 ಅಂಕೆ ಹಾಕುವುದು, ದೇವಿಯ ವಿಗ್ರಹ ವಿಸರ್ಜನೆ, ಮಾ.19 ದೇವಿಯ ಜಾತ್ರಾ ಕಲಶ ಪ್ರತಿಷ್ಠೆ, ಮಾ.19 ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ, ಮಾ. 20 ದೇವಿಯ ರಥಾರೋಹಣ, ಮಾ. 20 ದೇವಿಯ ಶೋಭಾ ಯಾತ್ರೆ, ಜಾತ್ರಾ ಗದ್ದುಗೆ ಮೇಲೆ ಸ್ಥಾಪನೆ, ಮಾ.21 ದೇವಿಯ ದರ್ಶನ, ಸೇವೆ ಆರಂಭ, ಮಾ.27: ಜಾತ್ರಾ ಮುಕ್ತಾಯ, ದೇವಿ ಗದ್ದುಗೆಯಿಂದ ಏಳುವುದು, ಏ.9 ಯುಗಾದಿಯಂದು ದೇವಿಯ ಪ್ರತಿಷ್ಠೆ