ಗುದ್ದಲಿಪೂಜೆಗೆ ವರ್ಷ<bha>;</bha> ಇನ್ನೂ ಶುರುವಾಗದ ಭದ್ರಾವತಿ ಗುರುಭವನ ಕಾಮಗಾರಿ!

| Published : Jan 15 2024, 01:45 AM IST

ಗುದ್ದಲಿಪೂಜೆಗೆ ವರ್ಷ<bha>;</bha> ಇನ್ನೂ ಶುರುವಾಗದ ಭದ್ರಾವತಿ ಗುರುಭವನ ಕಾಮಗಾರಿ!
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಮೂಲಮಂತ್ರವೇ ಸರ್ವಾಂಗೀಣ ಅಭಿವೃದ್ಧಿ. ಜನರಿಗೆ, ಸಮಾಜಕ್ಕೆ ಅಗತ್ಯವಾದ ಎಲ್ಲ ರೀತಿಯ ಮೂಲಸೌಲಭ್ಯಗಳನ್ನು, ಅವಕಾಶಗಳನ್ನು ನೀಡುವುದು ಸರ್ಕಾರದ ಹೊಣೆ. ಆದರೆ, ಬಹುತೇಕ ಕಡೆ ಸಮರ್ಪಕವಾಗಿ ಸರ್ಕಾರ ಕಾರ್ಯನಿರ್ವಹಿಸುವುದಿಲ್ಲ ಎಂಬುದಕ್ಕೆ ಭದ್ರಾವತಿ ಗುರುಭವನ ಕಾಮಗಾರಿ ಶುರುವಾಗದಿರುವ ಸಂಗತಿ ಸಾಕ್ಷಿಯಾಗಬಲ್ಲದು.

ಅನಂತಕುಮಾರ್

ಕನ್ನಡಪ್ರಭ ವಾರ್ತೆ, ಭದ್ರಾವತಿ

ಒಂದು ಕಾಲದಲ್ಲಿ ಶಿಕ್ಷಕರ ಅಚ್ಚುಮೆಚ್ಚಿನ ಸ್ಥಳವಾಗಿದ್ದ, ಶಿಕ್ಷಣ ಇಲಾಖೆ ತನ್ನ ಬಹುತೇಕ ಕಾರ್ಯ ಚಟುವಟಿಕೆಗಳಿಗೆ ಅವಲಂಬಿಸಿದ್ದ ಗುರುಭವನ ನೆಲಸಮಗೊಂಡಾಗಿದೆ. ಈ ನಡುವೆ ಹೊಸ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ಸಹ ನಡೆದು ವರ್ಷವಾಗುತ್ತಿದೆ. ಆದರೆ, ಅಗತ್ಯ ಅನುದಾನವಿಲ್ಲದೇ, ಕಾಮಗಾರಿ ಮಾತ್ರ ಇನ್ನೂ ಆರಂಭಗೊಂಡಿಲ್ಲ.

ಹಳೇ ನಗರದ ತಾಲೂಕು ಕಚೇರಿ ರಸ್ತೆ, ಕಂಚಿನಬಾಗಿಲು ಶ್ರೀ ಆಂಜನೇಯ ದೇವಸ್ಥಾನ ಮುಂಭಾಗದಲ್ಲಿದ್ದ ಗುರುಭವನ ಸಕಲ ಸಮಾರಂಭಗಳಿಗೆ ಪೂರಕವಾಗಿತ್ತು. ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಒಟ್ಟು 1750 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ. ಅದರಲ್ಲೂ ತಾಲೂಕಿನಲ್ಲಿ ಶಿಕ್ಷಣ ಇಲಾಖೆಯಲ್ಲಿಯೇ ಹೆಚ್ಚಿನ ಸರ್ಕಾರಿ ನೌಕರರು ಇರುವುದು ವಿಶೇಷ. ಪ್ರಸ್ತುತ ಶಿಕ್ಷಣ ಇಲಾಖೆ ಕಾರ್ಯ ಚಟುವಟಿಕೆಗಳಿಗೆ ಈ ಹಿಂದಿಗಿಂತಲೂ ಗುರುಭವನ ಅಗತ್ಯತೆ ಹೆಚ್ಚಿನದ್ದಾಗಿದೆ.

ನೂತನ ಗುರುಭವನಕ್ಕೆ ಬೇಡಿಕೆ:

ಕಳೆದೊಂದು ದಶಕದಿಂದ ಈ ಭವನ ಪಾಳುಬಿದ್ದಿದ್ದು, ಹೊಸ ಗುರು ಭವನ ನಿರ್ಮಾಣಕ್ಕೆ ಶಿಕ್ಷಕರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ, ತಾಲೂಕು ಆಡಳಿತ, ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ ಹಾಗೂ ಶಾಸಕ ಬಿ.ಕೆ. ಸಂಗಮೇಶ್ವರ ಸೇರಿದಂತೆ ಇನ್ನಿತರರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರರ ಗಮನ ಸೆಳೆದು ಎರಡೂವರೆ ವರ್ಷದ ಹಿಂದೆ ನಗರದ ಹೊಸ ಸೇತುವೆ ರಸ್ತೆಯ ವಿಶ್ವೇಶ್ವರಾಯ ವಿದ್ಯಾಸಂಸ್ಥೆಗೆ ₹1 ಕೋಟಿ, ಗುರು ಭವನ ನಿರ್ಮಾಣಕ್ಕೆ ₹2 ಕೋಟಿ ಹಾಗೂ ನ್ಯೂಟೌನ್ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್ನಿಕ್ ನೂತನ ಕಟ್ಟಡ ನಿರ್ಮಾಣಕ್ಕೆ ₹3.5 ಕೋಟಿ ಅನುದಾನ ಸರ್ಕಾರದಿಂದ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಕಳೆದ ವರ್ಷ ಮಾರ್ಚ್ 11ರಂದು ಸಂಸದ ಬಿ.ವೈ. ರಾಘವೇಂದ್ರ ಇನ್ನಿತರ ಗಣ್ಯರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗಾಗಲೇ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ₹1 ಕೋಟಿ ವೆಚ್ಚದ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ, ಗುರುಭವನ ಕಾಮಗಾರಿ ಇನ್ನೂ ಆರಂಭಗೊಂಡಿಲ್ಲ.

- - -

ಬಾಕ್ಸ್‌ ಕೇವಲ ₹65 ಲಕ್ಷ ಬಿಡುಗಡೆ ಗುರುಭವನ ನಿರ್ಮಾಣಕ್ಕೆ ಸರ್ಕಾರ ನೀರಾವರಿ ಇಲಾಖೆ ಅನುದಾನ ಸುಮಾರು ₹2 ಕೋಟಿ ಮಂಜೂರಾತಿ ಮಾಡಿದೆ. ಹಳೇ ಕಟ್ಟಡ ನೆಲಸಮಗೊಳಿಸಿ, ನೂತನ ಕಟ್ಟಡ ನಿರ್ಮಿಸುವ ಹಿನ್ನೆಲೆ ಸೂಕ್ತ ದಾಖಲಾತಿಗಳ ಹೊಂದಿಸಿಕೊಳ್ಳುವುದು ವಿಳಂಬವಾಗಿದೆ. ಅಲ್ಲದೇ, ವಿಧಾನಸಭಾ ಚುನಾವಣೆ ಎದುರಾಗಿ ಸರ್ಕಾರ ಬದಲಾದ ಹಿನ್ನೆಲೆ ಪೂರ್ಣ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಆಗಿಲ್ಲ. ಶೇ.80ರಷ್ಟು ಅನುದಾನ ಬಿಡುಗಡೆಗೊಂಡಲ್ಲಿ ಕಾಮಗಾರಿ ಆರಂಭಿಸುವುದು ಸೂಕ್ತ. ಆದರೆ, ಪ್ರಸ್ತುತ ಲಭ್ಯವಿರುವ ₹65 ಲಕ್ಷ ಅನುದಾನದಲ್ಲಿಯೇ ಕಾಮಗಾರಿ ಆರಂಭಿಸಿದಲ್ಲಿ ಮುಂದಿನ ದಿನಗಳಲ್ಲಿ ಕಾಮಗಾರಿ ನನೆಗುದಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ನೂತನ ಕಟ್ಟಡ ಕಾಮಗಾರಿ ಹಾಳಾಗಲಿದೆ. ಗುಣಮಟ್ಟದ ಭವನ ನಿರ್ಮಾಣಕ್ಕೆ ಧಕ್ಕೆ ಉಂಟಾಗಲಿದೆ ಎಂಬುದು ಶಿಕ್ಷಕರ ಸಂಘಟನೆ ಪ್ರಮುಖರ ಅಭಿಪ್ರಾಯ.

ಶಿಕ್ಷಕರ ಬಹಳ ವರ್ಷಗಳ ಬೇಡಿಕೆಯಾಗಿರುವ ನೂತನ ಗುರುಭವನ ನಿರ್ಮಾಣದ ಕನಸು ನನಸಾಗಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ್ ಸೇರಿದಂತೆ ಜನಪ್ರತಿನಿಧಿಗಳು ಗಮನಹರಿಸಬೇಕಿದೆ.

- - -

ಕೋಟ್ಸ್

ಭದ್ರಾವತಿ ತಾಲೂಕಿನಲ್ಲಿ ಸರ್ಕಾರಿ ಹಾಗೂ ಅನುದಾನ ಶಾಲೆಗಳ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 17 ವರ್ಷಗಳಿಂದ ಶಿಕ್ಷಕನಾಗಿದ್ದು, ಹಳೇ ಗುರುಭವನ ಒಂದು ಕಾಲದಲ್ಲಿ ಶಿಕ್ಷಕರ ಅಚ್ಚುಮೆಚ್ಚಿನ ಸ್ಥಳವಾಗಿದ್ದು, ನೂತನ ಗುರುಭವನ ಕಾಮಗಾರಿ ತಕ್ಷಣ ಆರಂಭಿಸಿ ಶಿಕ್ಷಕರ ಕನಸು ನನಸಾಗಿಸಬೇಕಾಗಿದೆ

- ಟಿ. ಪೃಥ್ವಿರಾಜ್, ಅಧ್ಯಕ್ಷ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಸೂಕ್ತ ದಾಖಲಾತಿಗಳ ಹೊಂದಿಸಿಕೊಳ್ಳೋದು ವಿಳಂಬವಾದ ಹಿನ್ನೆಲೆ ಕಾಮಗಾರಿ ಆರಂಭಗೊಂಡಿಲ್ಲ. ಕಾಮಗಾರಿ ಜವಾಬ್ದಾರಿ ತೆಗೆದುಕೊಂಡಿರುವ ನಿರ್ಮಿತಿ ಕೇಂದ್ರದಿಂದ ಹಳೇ ಕಟ್ಟಡ ನೆಲಸಮಗೊಳಿಸಿ, ನೂತನ ಭವನ ನಿರ್ಮಾಣಕ್ಕೆ ಸಮತಟ್ಟು ಮಾಡಲಾಗಿದೆ. ಪ್ರಸ್ತುತ ₹65 ಲಕ್ಷ ಮಾತ್ರ ಬಿಡುಗಡೆಯಾಗಿದೆ. ₹2 ಕೋಟಿ ಅನುದಾನದಲ್ಲಿ ಶೇ.80ರಷ್ಟು ಅನುದಾನ ಬಿಡುಗಡೆಯಾದರೆ ಕಾಮಗಾರಿ ಆರಂಭ ಸೂಕ್ತ. ಈ ವಿಚಾರ ಶಾಸಕರ ಗಮನಕ್ಕೆ ತರಲಾಗಿದೆ. ಯಾವುದಾದರೂ ಬೇರೆ ಅನುದಾನ ಲಭ್ಯವಾದಲ್ಲಿ ಕಾಮಗಾರಿ ಆರಂಭಿಸೋಣ ಎಂದಿದ್ದಾರೆ

- ಬಿ.ಸಿದ್ದಬಸಪ್ಪ, ಅಧ್ಯಕ್ಷ, ತಾಲೂಕು ಸರ್ಕಾರಿ ನೌಕರರ ಸಂಘ, ಭದ್ರಾವತಿ.

ಶಿಕ್ಷಣ ಇಲಾಖೆಗೆ ಗುರುಭವನ ಅತಿ ಅವಶ್ಯಕವಾಗಿದ್ದು, ಪ್ರಸ್ತುತ ಇಲಾಖೆ ಕಾರ್ಯ ಚಟುವಟಿಕೆಗಳಿಗೆ ಶಾಲಾ ಕೊಠಡಿಗಳನ್ನು ಅವಲಂಬಿಸುವಂತಾಗಿದೆ. ಶಿಕ್ಷಕರ ದಿನಾಚರಣೆ ಇಲಾಖೆ ಭವನದಲ್ಲಿ ನಡೆಸಲು ಸಾಧ್ಯವಾಗದ ಕೊರಗು ಇದೆ. ಗುರುಭವನ ಕಾಮಗಾರಿ ತಕ್ಷಣ ಆರಂಭಿಸಲು ಅಗತ್ಯ ಅನುದಾನ ಬಿಡುಗಡೆಗೆ ಈಗಾಗಲೇ ಇಲಾಖೆ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ - ವಿ.ಎಚ್. ಪಂಚಾಕ್ಷರಿ, ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ, ಶಿಕ್ಷಣ-ಸಾಕ್ಷರತಾ ಇಲಾಖೆ, ಭದ್ರಾವತಿ

- - - -13ಬಿಡಿವಿಟಿ1: ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿದ್ದ ಗುರುಭವನ ಒಂದು ವರ್ಷದ ಹಿಂದೆ ಕೆಡವಿರುವುದು.

-13ಬಿಡಿವಿಟಿ1: ಭದ್ರಾವತಿ ತಾಲೂಕು ಕಚೇರಿ ರಸ್ತೆಯಲ್ಲಿರುವ ಪ್ರಸ್ತುತ ಗುರುಭವನ ನಿರ್ಮಾಣ ಸ್ಥಳ.