ಮಡಿಕೇರಿ: ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಾಗುತ್ತಿದ್ದು, ಪರಿಣಾಮ ಮಡಿಕೇರಿ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಬಳಿ ಭೂ ಕುಸಿತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಮಾರ್ಗ ಬದಲಾವಣೆಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ಜು.9 ರಿಂದ 12 ರವರೆಗೆ ಮುಂಜಾಗ್ರತಾ ಕ್ರಮವಾಗಿ ರಾಜಾಸೀಟು ಬಳಿ ವಾಹನ ನಿಲುಗಡೆ ಮತ್ತು ರಾಜಾಸೀಟ್‍ಗೆ ಸಾರ್ವಜನಿಕರ/ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಜೆ.ಸೋಮಶೇಖರ್ ಆದೇಶಿಸಿದ್ದಾರೆ.

ಹಾಲಿ ಖಾಸಗಿ ಮತ್ತು ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದ ಕಡೆಯಿಂದ ಹೊರಹೋಗುವ ಎಲ್ಲ ವಾಹನಗಳು ರಾಜಾಸೀಟು ರಸ್ತೆಯನ್ನು ಬಳಸಿ ಸಂಚರಿಸುತ್ತಿರುವುದಾಗಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಮತ್ತು ರಾಜಾಸೀಟು ಬಳಿ ಸಾರ್ವಜನಿಕರು ಮತ್ತು ಪ್ರವಾಸಿಗರ ವಾಹನ ನಿಲುಗಡೆಗೊಳಿಸುತ್ತಿರುವ ಕಾರಣ ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗುತ್ತಿದೆ. ವಾರಾಂತ್ಯದಲ್ಲಿ ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸುವ ವಾಹನಗಳು ರಸ್ತೆ ಕುಸಿತದಿಂದ ಪ್ರಸ್ತುತ ರಾಜಾಸೀಟು ಮಾರ್ಗವಾಗಿ ಸಂಚರಿಸುವುದರಿಂದ ರಾಜಾಸೀಟು ರಸ್ತೆಯಲ್ಲಿ ವಾಹನಗಳ ನಿಲುಗಡೆ ಮತ್ತು ವಾಹನಗಳ ಸಂಚಾರ ಅಧಿಕವಾಗುವ ಸಾಧ್ಯತೆ ಇರುವುದರಿಂದ ಈ ಆದೇಶ ಹೊರಡಿಸಲಾಗಿದೆ.