ಸೋಮವಾರಪೇಟೆ: ಎಸ್‌ಐಆರ್ ಮಾಹಿತಿ ಸಭೆ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಕಚೇರಿಯಲ್ಲಿ ಗುರುವಾರ ನಡೆಯಿತು.ಸಭೆಯಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪದಾಧಿಕಾರಿಗಳು ಭಾಗವಹಿಸಿದ್ದರು. ಗ್ರಾಪಂ ವ್ಯಾಪ್ತಿಗೆ ಬರುವಂತಹ ಬಿಎಲ್‌ಒಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ಎನ್ಯುಮರೇಶನ್ ಫಾರಂಗಳನ್ನು ಕೊಟ್ಟು ಅದನ್ನು ಭರ್ತಿ ಮಾಡಲು ಸಹಕಾರ ನೀಡಬೇಕು. ಪಕ್ಷದ ಪದಾಧಿಕಾರಿಗಳು ಬಿಎಲ್‌ಒಗಳಿಗೆ ಸಹಕಾರ ನೀಡಬೇಕು. ಮನೆಗಳ ಮಾಹಿತಿ ನೀಡಬೇಕು. ಕೆಲವೊಂದು ಮನೆಗಳಿಗೆ ತಲಪಲಾಗದ ಸ್ಥಿತಿ ಇದ್ದರೆ, ಪಿಡಿಒಗಳೊಂದಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಪ್ರತಿಯೊಬ್ಬರಿಗೂ ಮತದಾನ ಹಕ್ಕು ಸಿಗಲೇಬೇಕು. ಇದ್ದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿದೆ. ತಾವುಗಳು ಕೈಜೋಡಿಸಬೇಕು. ಬಿಎಲ್‌ಒಗಳು ಶ್ರಮ ವಹಿಸಿ ಉತ್ತಮ ಕರ್ತವ್ಯ ನಿರ್ವಹಿಸಿದರೆ ಅಂತಹವರನ್ನು ಗೌರವಿಸಲಾಗುವುದು ಎಂದು ಹೇಳಿದರು.
ಹರದೂರು ಗ್ರಾಪಂ ವ್ಯಾಪ್ತಿಯಲ್ಲಿ ೧೦೦ ಫಾರಂಗಳನ್ನು ಮನೆ ಮನೆಗೆ ವಿತರಿಸಲಾಗಿದೆ. ಅದರಲ್ಲಿ ೩೦ರಷ್ಟು ಫಾರಂಗಳಲ್ಲಿ ಮಾಹಿತಿ ಕೊರತೆಯಿಂದ ತಪ್ಪಾಗಿ ಭರ್ತಿ ಮಾಡಲಾಗಿದೆ. ಅದನ್ನೇ ಅಪ್‌ಲೋಡ್ ಮಾಡಲಾಗಿದೆ. ಬಿಎಲ್‌ಒಗಳು ಮತದಾರರ ಮನೆಯಲ್ಲೇ ಭರ್ತಿ ಮಾಡಿ ಅಪ್‌ಲೋಡ್ ಮಾಡಿದರೆ ಮಾತ್ರ, ತಪ್ಪುಗಳಾಗುವುದಿಲ್ಲ ಎಂದು ಅಬ್ದುಲ್ ನಾಸೀರ್ ಹೇಳಿದರು.ತಪ್ಪಾಗಿ ಅಪ್‌ಲೋಡ್ ಆಗಿರುವುದು ಗೊತ್ತಾದರೆ ಅಂತಹ ಮತದಾರರ ಅಕ್ಷೇಪಣಾ ಪತ್ರವನ್ನು ಸಲ್ಲಿಸುವ ಅವಕಾಶವಿದೆ. ಎಸಿ ಲಾಗಿನ್‌ಗೆ ಹೋದಾಗ ಅದನ್ನು ಸರಿಪಡಿಸಬಹುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ರಾಜಕೀಯ ಪಕ್ಷಗಳ ಪ್ರಮುಖರಾದ ಬಿ.ಬಿ. ಸತೀಶ್, ಎಸ್.ಆರ್. ಸೋಮೇಶ್, ಮಹೇಶ್ ತಿಮ್ಮಯ್ಯ, ಸಿ.ಎಸ್. ನಾಗರಾಜು, ಜೆ.ಎಲ್. ಜನಾರ್ದನ್, ಬಿ. ಶಿವಪ್ಪ, ಸುನಿಲ್ ಇದ್ದರು.