ಮಡಿಕೇರಿ: ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ಕೃಷಿ ಪ್ರಶಸ್ತಿ-ಕೃಷಿ ಉತ್ಪಾದನಾ ಬಹುಮಾನ ಯೋಜನೆಯನ್ನು ಕೃಷಿ ಇಲಾಖಾ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತೀ ವರ್ಷದಂತೆ ಈ ವರ್ಷವೂ (2026-27) ಸಹ ರೈತ/ರೈತ ಮಹಿಳೆಯರಿಂದ ಪ್ರತ್ಯೇಕವಾಗಿ (ಭತ್ತ (ಮಳೆಯಾಶ್ರಿತ)) ಬೆಳೆ ಸ್ಪರ್ಧೆಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಸ್ಪರ್ಧಾ ಬೆಳೆ ಬೆಳೆದಿರಬೇಕು. ರೆವಿನ್ಯೂ ದಾಖಲೆ ಪ್ರಕಾರ ಖಾತೆ ಹೊಂದಿರುವ ಹಾಗೂ ಸ್ವತಃ ಬೇಸಾಯದಲ್ಲಿ ತೊಡಗಿರುವ ಸ್ವಯಂ ಕ್ರಿಯಾಶೀಲ ಕೃಷಿಕನಾಗಿರಬೇಕು. ಒಂದು ಕುಟುಂಬದ ಒಬ್ಬ ಸದಸ್ಯರು ಮಾತ್ರ ಭಾಗವಹಿಸಬಹುದಾಗಿದೆ. ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ ರಚಿಸಲಾಗಿರುವ ವಿವಿಧ ಸಮಿತಿ/ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳು ಮತ್ತು ಅವರ ಕುಟುಂಬದ ಸದಸ್ಯರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವ ಯಾವುದೇ ಇಲಾಖೆ, ವಿಶ್ವವಿದ್ಯಾಲಯ, ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೌಕರರು ಮತ್ತು ಅವರ ಕುಟುಂಬ ಸದಸ್ಯರು ಭಾಗವಹಿಸುವಂತಿಲ್ಲ. ಕಟಾವಿಗೆ 15 ದಿನಗಳ ಮುಂಚಿತವಾಗಿ ಸಂಬಂಧಿಸಿದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಕಟಾವು ದಿನಾಂಕವನ್ನು ತಿಳಿಸತಕ್ಕದ್ದು.

ಬಹುಮಾನದ ಮೊತ್ತ ತಾಲ್ಲೂಕು ಮಟ್ಟ ಪ್ರಥಮ 15 ಸಾವಿರ ರು, ದ್ವಿತೀಯ 10 ಸಾವಿರ ರು., ತೃತೀಯ 5 ಸಾವಿರ ರು, ಜಿಲ್ಲಾ ಮಟ್ಟದಲ್ಲಿ ಪ್ರಥಮ 30 ಸಾವಿರ ರು, ದ್ವಿತೀಯ 25 ಸಾವಿರ ರು. ಹಾಗೂ ತೃತೀಯ 20 ಸಾವಿರ ರು, ರಾಜ್ಯ ಮಟ್ಟದಲ್ಲಿ ಪ್ರಥಮ 50 ಸಾವಿರ ರು, ದ್ವಿತೀಯ 40 ಸಾವಿರರು. ಹಾಗೂ ತೃತೀಯ ಬಹುಮಾನ 35 ಸಾವಿರ ರು ಆಗಿರುತ್ತದೆ.

ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಅಗತ್ಯ ದಾಖಲಾತಿಗಳೊಂದಿಗೆ ರೈತರ ಎಫ್‍ಐಡಿ(ಫ್ರೂಟ್ಸ್ ಐಡಿ) ಸಂಖ್ಯೆಯನ್ನು ಬಳಸಿಕೊಂಡು ಕೆ-ಕಿಸಾನ್ ಪೋರ್ಟಲ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರೈತರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಆ.31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.