ಕನ್ನಡಪ್ರಭ ವಾರ್ತೆ ಮಡಿಕೇರಿ

ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲದ ಯೋಗವು , ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಇಂಥ ಯೋಗ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು ಎಂದು ಹಿರಿಯ ಪತ್ರಕರ್ತ ಜಿ.ಚಿದ್ವಿಲಾಸ್ ಅಭಿಪ್ರಾಯಪಟ್ಟರು. ನಗರದ ರೆಡ್ ಬಿಕ್ಸ್ ನ ಸತ್ಕಾರ ಸಭಾಂಗಣದಲ್ಲಿ ನಡೆದ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಯೋಗಾಭ್ಯಾಸದಿಂದ ಒಬ್ಬ ವ್ಯಕ್ತಿ ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ, ನಿರಂತರ ಯೋಗ ಪ್ರಕ್ರಿಯೆಯಿಂದ ವ್ಯಕ್ತಿಯಲ್ಲಿ ತಾಳ್ಮೆ ಸಹನೆ ಸಹಾನುಭೂತಿ, ಪ್ರೀತಿ ವಾತ್ಸಲ್ಯ ಸಹಜವಾಗಿಯೇ ಮೈಗೂಡಿಕೊಳ್ಳುವುದರಿಂದ ಸಮಾಜದ ಆರೋಗ್ಯವೂ ಬಲಗೊಳ್ಳುತ್ತದೆ ಎಂದು ವಿಶ್ಲೇಷಿಸಿದರು.

ಭಾರತೀಯ ವಿದ್ಯಾ ಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ, ಭಾರತದ ಯೋಗ ವಿದ್ಯೆಯನ್ನು ವಿದೇಶಿಯರು ಕಲಿತು ಇಂದು ಅವರುಗಳೇ ಯೋಗ ಶಿಕ್ಷಕರಾಗಿ ಸಹಸ್ರಾರು ಮಂದಿಗೆ ಯೋಗ ಬೋಧಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ಯೋಗ ಭಾರತಿ ಸಂಸ್ಥೆಯ ಪೋಷಕ ಡಾ. ಎಂ. ಜಿ. ಪಾಟ್ಕರ್ ಅಭಿಪ್ರಾಯ ವ್ಯಕ್ತಪಡಿಸಿ, ನಿರಂತರ ಯೋಗ ಅಭ್ಯಾಸ ಮಾಡುವಂತೆ ಕರೆ ನೀಡಿದರು.


ಜಿಲ್ಲಾ ಆಯುಷ್ ಅಧಿಕಾರಿ ಡಾಕ್ಟರ್ ಶೈಲಜಾ, ಜೂ.21 ರಂದು ಮಡಿಕೇರಿಯ ಕಾವೇರಿ ಹಾಲ್ ನಲ್ಲಿ ಬೆಳಗ್ಗೆ ಆರು ಗಂಟೆಗೆ ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮಗಳಿದ್ದು ಆಸಕ್ತರು ಪಾಲ್ಗೊಳ್ಳುವಂತೆ ಕರೆ ನೀಡಿದರು.

ಯೋಗದಿಂದ ಉತ್ತಮ ಆರೋಗ್ಯ ಪಡೆಯುವ ಬಗ್ಗೆ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದರು.

ಯೋಗ ಭಾರತಿ ಸಂಸ್ಥೆಯ ಪ್ರಾಚಾರ್ಯ ಕೆ.ಕೆ. ಮಹೇಶ್ ಕುಮಾರ್ ಅವರು, ಸಂಸ್ಥೆ 25 ವರ್ಷಗಳನ್ನು ಸವೆಸಿದ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಶಿಬಿರಾರ್ಥಿ , ಜಿ. ಆರ್. ರವಿಶಂಕರ್ ಸ್ವಾಗತಿಸಿ, ಜ್ಯೋತಿ ವರದಿವಾಚಿಸಿ, ಸವಿತಾ ವಂದಿಸಿದರು. ಜಯಲಕ್ಷ್ಮಿ ಪಾಟ್ಕರ್ ಉಪಸ್ಥಿತರಿದ್ದರು.