ಕನ್ನಡಪ್ರಭ ವಾರ್ತೆ ಕುಶಾಲನಗರ

ಈ ಸಾಲಿನ ಮಳೆಗಾಲದಲ್ಲಿ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ಗ್ರಾಮೀಣ ಪ್ರದೇಶಗಳ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿ ತುಂಬಿ ಹರಿದು ಅಪಾಯದ ಮಟ್ಟ ಮೀರಿ ನದಿ ತಟದ ಜನತೆಯಲ್ಲಿ ಪ್ರವಾಹದ ಆತಂಕ ಮೂಡಿಸಿತ್ತು.

ಹಾರಂಗಿ ಜಲಾಶಯ ತುಂಬುವ ಮೂಲಕ ಮೇ ಅಂತ್ಯದಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗಿದೆ.

ಹಾರಂಗಿ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ 24 ಅಡಿಗಳಷ್ಟು ನೀರಿನ ಮಟ್ಟ ಇಳಿಕೆ ಕಾಣಬಹುದು. ಕಳೆದ


ವರ್ಷ ಇದೇ ಅವಧಿಯಲ್ಲಿ 12,000 ಕ್ಯುಸೆಕ್ಸ್ ಪ್ರಮಾಣದ ನೀರು ಜಲಾಶಯಕ್ಕೆ ಒಳಹರಿವು ದಾಖಲಾಗಿತ್ತು. ಈ ಬಾರಿ ಕೇವಲ 180 ಕ್ಯುಸೆಕ್ಸ್ ಪ್ರಮಾಣದ ನೀರು ಮಾತ್ರ ಹರಿದುಬರುತ್ತಿದೆ. 2859 ಅಡಿಗಳಷ್ಟು ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟಿನಲ್ಲಿ ಈ ಬಾರಿ 2825.3 ಅಡಿಗಳಷ್ಟು ನೀರಿನ ಮಟ್ಟ ಗೋಚರಿಸಿದೆ.

ಕುಶಾಲನಗರ ಪ್ರವಾಸಿ ಮಂದಿರದ ಮಳೆ ಮಾಪನದ ದಾಖಲೆಯಂತೆ ಪಟ್ಟಣದಲ್ಲಿ ಕಳೆದ ಮಳೆಗಾಲ ಅವಧಿಯಲ್ಲಿ 645.6 ಮಿಮಿ ಪ್ರಮಾಣದ ಮಳೆ ಸುರಿದರೆ ಈ ಬಾರಿ ಕೇವಲ 204.2 ಮಿಮೀ ಪ್ರಮಾಣದ ಮಳೆಯಾಗಿರುವುದನ್ನು ಗಮನಿಸಬಹುದು.

ಕುಶಾಲನಗರ ಮೂಲಕ ಹರಿಯುವ ಕಾವೇರಿ ನದಿಯಲ್ಲಿ ಕಳೆದ ವರ್ಷ ಕಾವೇರಿ ಸೇತುವೆಯ ಕೆಳ ಭಾಗದಲ್ಲಿ 7 ಮೀಟರ್ ಎತ್ತರಕ್ಕೆ ನೀರಿನ ಹರಿವು ಕಂಡುಬಂದಿತ್ತು. ಈ ವರ್ಷದ ಮಳೆಗಾಲದಲ್ಲಿ ನದಿಯ ತಳಮಟ್ಟದಲ್ಲಿ ನೀರಿನ ಹರಿವು ಗೋಚರಿಸಿರುವುದು ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ.