ಸಾರಾಂಶ
ಕುದೂರು: ಸೋಲೂರು ಗ್ರಾಮ ಸೇರಿದಂತೆ 68 ಗ್ರಾಮಗಳನ್ನು ಮಾಗಡಿ ತಾಲೂಕಿನಿಂದ ಬೇರ್ಪಡಿಸಿ ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಲು ರಾಜ್ಯ ಸಚಿವ ಸಂಪುಟದ ಅನುಮೋದನೆ ಸಿಕ್ಕ ಕಾರಣ ಮಾಗಡಿ ತಾಲೂಕಿನ ಜನರು ಸರ್ಕಾರದ ಕ್ರಮವನ್ನು ಉಗ್ರವಾಗಿ ಖಂಡಿಸಿದ್ದಾರೆ.
ಸೋಲೂರು ಹೋಬಳಿ ಮಾಗಡಿ ತಾಲೂಕಿನ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರು ಇಲ್ಲಿನ ಜನರು ನೆಲಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಮತ ಚಲಾಯಿಸುತ್ತಿದ್ದರು. ಹೀಗಾಗಿ ತಾಲೂಕು ಬದಲಾವಣೆ ಮಾಡಲಾಗಿದೆ ಎಂಬುದು ಮೇಲ್ಮಟ್ಟದ ಮಾತು.ರಾಜ್ಯ ವಿಂಗಡಣೆ ಆದಾಗಿನಿಂದಲೂ ಸೋಲೂರು ಹೋಬಳಿ ಮಾಗಡಿ ತಾಲೂಕಿಗೆ ಸೇರ್ಪಡೆಯಾಗಿತ್ತು. ಒಂದು ಕಾಲದಲ್ಲಿ ಮತವನ್ನೂ ಕೂಡಾ ಮಾಗಡಿ ತಾಲೂಕಿನ ಅಭ್ಯರ್ಥಿಗಳಿಗೇ ಹಾಕುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಸೋಲೂರು ಸಿದ್ದಪ್ಪ, ತಟ್ಟೇಕರೆ ಮಾರಣ್ಣ ಇದೇ ಹೋಬಳಿಯಿಂದ ಮಾಗಡಿ ತಾಲೂಕಿನ ಶಾಸಕರಾಗಿದ್ದರು. ಆದರೆ ಜನಸಂಖ್ಯೆ ಆಧಾರಿತ ಕ್ಷೇತ್ರ ವಿಂಗಡಣೆಯಾದಾಗ ಸೋಲೂರು ಹೋಬಳಿ ನೆಲಮಂಗಲ ಕ್ಷೇತ್ರಕ್ಕೆ ಮತ ಹಾಕಲಷ್ಟೇ ಬದಲಾಯಿತು. ಹೀಗಾಗಿ ಸೋಲೂರು ಹೋಬಳಿಗೆ ಇಬ್ಬರು ಶಾಸಕರು ಸಿಗುವಂತಾಯಿತು. ವಿಧಾನಸಭೆ ಮತ್ತು ಲೋಕಸಭೆ ಕ್ಷೇತ್ರಗಳು ಬದಲಾದವೆ ಹೊರತು, ಗ್ರಾಪಂ, ತಾಪಂ, ಜಿಪಂ, ಬಮೂಲ್ ಚುನಾವಣೆಗಳು ಹೀಗೆ ಎಲ್ಲವೂ ಕೂಡಾ ಮಾಗಡಿ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಿದ್ದರು.
ಪ್ರಸ್ತುತ ನೆಲಮಂಗಲ ಕ್ಷೇತ್ರ ಮೀಸಲು ಕ್ಷೇತ್ರವಾಗಿದೆ. ಈಗ ಜಾತಿ ಸಮೀಕ್ಷೆ ಆಗುತ್ತಿರುವ ಕಾರಣ ಬಹುತೇಕ ನೆಲಮಂಗಲ ಕ್ಷೇತ್ರ ಮೀಸಲು ಕ್ಷೇತ್ರದಿಂದ ವಂಚಿತವಾಗಬಹುದೆಂಬ ಹಿನ್ನೆಲೆಯಲ್ಲಿ ಮತ್ತು ಇಲ್ಲಿ ಹಿಂದುಳಿದ ಜನಾಂಗದವರ ಮತಗಳು ಹೆಚ್ಚಿರುವ ಕಾರಣ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಮಾಗಡಿ ಜನ ಆರೋಪಿಸುತ್ತಿದ್ದಾರೆ.ಮತ ಬಹಿಷ್ಕಾರದ ಪ್ರತೀಕಾರ:
ತಾಲೂಕು ಬದಲಾವಣೆ ಎಂದರೆ ಕೇವಲ ರಿಯಲ್ ಎಸ್ಟೇಟ್ ಭಾಷೆಯ ಭೂಮಿ ಬದಲಾವಣೆ ಅಲ್ಲ. ಅದೊಂದು ಭಾವನಾತ್ಮಕ ಕೊಂಡಿ ಕಳಚುವ ದೂರ್ತತನ. ಮಾಗಡಿಯಿಂದ ಏಳೆಂಟು ಕಿಮೀ ದೂರವಿರುವ ಯಾಗನಹಳ್ಳಿ, ಸಿದ್ದಯ್ಯನಪಾಳ್ಯದ ಜನರು, ಸಮೀಪವಿದ್ದ ಮಾಗಡಿಯಲ್ಲಿ ನಮ್ಮ ಪಹಣಿ ಖಾತೆ, ಕೋರ್ಟ್ ಎಲ್ಲವೂ ಇತ್ತು. ಆದರೀಗ ನೆಲಮಂಗಲಕ್ಕೆ ನಾವು ಹೋಗುವುದಾದರೂ ಹೇಗೆ? ಅಲ್ಲಿನ ಅಧಿಕಾರಿಗಳನ್ನು ರಾಜಕಾರಣಿಗಳನ್ನು ಪರಿಚಯ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳುವುದು ಹೇಗೆ? ಮತ ಹಾಕಿಸಿಕೊಂಡು ಹೋದ ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸ್ ಗೆದ್ದಾಗಿನಿಂದಲೂ ಒಮ್ಮೆಯೂ ನಮ್ಮ ಊರಿನ ಕಡೆಗೆ ತಲೆಹಾಕಿಲ್ಲ. ಈಗ ನೋಡಿದರೆ ಮಾಗಡಿಯಿಂದ ನಮ್ಮನ್ನು ಕತ್ತರಿಸಿ ನೆಲಮಂಗಲಕ್ಕೆ ಜೋಡಿಸುತ್ತಿದ್ದಾರೆ. ಜಿಲ್ಲೆಗೆ ದೂರದ ದೇವನಹಳ್ಳಿಗೆ ಹೋಗಬೇಕಿದೆ. ಒಂದೊಂದು ಕಚೇರಿ ಒಂದೊಂದು ಊರಿನಲ್ಲಿದೆ. ಇದರಿಂದಾಗಿ ನಮ್ಮ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಮುಂದಿನ ಚುನಾವಣೆಗೆ ಮತಬಹಿಷ್ಕಾರ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡಿದ್ದಾರೆ.ಮಾಗಡಿ ತಾಲೂಕಿನ ಜನನಾಯಕರೂ ಕಾರಣ :
ಸೋಲೂರು ಹೀಗೆ ಮಾಗಡಿ ತಾಲೂಕಿನಿಂದ ಕೈತಪ್ಪಿ ಹೋಗುತ್ತಿರುವುದಕ್ಕೆ ಕಾರಣ ಇದುವರೆಗೂ ಆಳಿದ ಜನನಾಯಕರೇ ಕಾರಣರಾಗಿದ್ದಾರೆ. ಸೋಲೂರು ಹೋಬಳಿಯ ೬೮ ಗ್ರಾಮಗಳು ಮಾಗಡಿ ತಾಲೂಕಿನ ವ್ಯಾಪ್ತಿಗೆ ಸೇರಿದ್ದರೂ, ವಿಧಾನಸಭೆ ಚುನಾವಣೆಗೆ ನೆಲಮಂಗಲ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಬೇಕಿತ್ತು. ಲೋಕಸಭೆ ಕ್ಷೇತ್ರವೂ ಕೂಡಾ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಮತ ಚಲಾಯಿಸಬೇಕಿತ್ತು. ಮಾಗಡಿ ತಾಲೂಕಿನಲ್ಲಿ ಗ್ರಾಪಂ, ತಾಪಂ ಮತ್ತು ಜಿಪಂ ಸ್ಥಳೀಯ ಚುನಾವಣೆಗೆ ಮಾಗಡಿ ತಾಲೂಕು ಬೆಂಗಳೂರು ದಕ್ಷಿಣ ಜಿಲ್ಲೆಗೆ ಮತ ಚಲಾಯಿಸುತ್ತಿದ್ದರು. ಇದರಿಂದಾಗಿ ಕ್ಷೇತ್ರವನ್ನು ನಿರೀಕ್ಷಿಸಿದ ಮಟ್ಟಕ್ಕೆ ಅಭಿವೃದ್ಧಿಗೊಳಿಸಲಿಲ್ಲ.ಮಾಗಡಿ ತಾಲೂಕಿನ ಶಾಸಕರು ಸೋಲೂರು ಹೋಬಳಿಯ ಜನರು ನಮಗೆ ಮತ ಹಾಕುವುದಿಲ್ಲ ಎಂದು ಈ ಹೋಬಳಿಯನ್ನು ಅಭಿವೃದ್ಧಿಯಲ್ಲಿ ಕಡೆಗಣಿಸಿದರು. ಹೆದ್ದಾರಿಯಿದೆ ಎನ್ನುವುದನ್ನು ಹೊರತು ಪಡಿಸಿದರೆ ಸೋಲೂರು ಹೋಬಳಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಾಣಲಿಲ್ಲ. ಇದರಿಂದಾಗಿ ನಮ್ಮನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿ ಎಂದು ಇಲ್ಲಿನ ಜನರು ಸರ್ಕಾರವನ್ನು ಒತ್ತಾಯಿಸುತ್ತಲೇ ಇದ್ದರು.
ಮಾಗಡಿ ಶಾಸಕರು ಕೈಚಲ್ಲಿದ್ದಾದರೂ ಏಕೆ?:ಯಾವುದೇ ಕಾರಣಕ್ಕೂ ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ನೆಲಮಂಗಲ ಕ್ಷೇತ್ರಕ್ಕೆ ಸೇರ್ಪಡೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ಮಾತನಾಡುತ್ತೇನೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದ್ದರು. ಆದರೆ ಈಗ ಅವರ ಮಾತು ಸುಳ್ಳಾಯಿತು. ಏಕೆಂದರೆ ಬಾಲಕೃಷ್ಣರು ಡಿ.ಕೆ.ಶಿವಕುಮಾರ್‌ರನ್ನು ಭೇಟಿ ಮಾಡುವ ಮೊದಲೇ ನೆಲಮಂಗಲ ಕ್ಷೇತ್ರದ ಶಾಸಕ ಶ್ರೀನಿವಾಸ್ ಡಿ.ಕೆ.ಶಿವಕುಮಾರ್ ಮನವೊಲಿಸಿ ಒಪ್ಪಿಗೆ ಪಡೆದಿದ್ದರು. ಇದರಿಂದಾಗಿ ನೆಲಮಂಗಲ ತಾಲೂಕು ವಿಸ್ತಾರವಾದಂತಾಯಿತು. ಮಾಗಡಿ ತಾಲೂಕಿನಲ್ಲಿ ಐದು ಹೋಬಳಿಗಳಿದ್ದವು. ಈಗ ನಾಲ್ಕಕ್ಕಿಳಿಯಿತು ಎಂಬ ನೋವು ತಾಲೂಕಿನ ಜನರಲ್ಲಿ ಮಡುಗಟ್ಟಿದೆ.
ಸೋಲೂರು ಹೋಬಳಿ ಜನರ ವಿರೋಧ:ಸೋಲೂರು ಹೋಬಳಿಯ ಜನರಿಗೂ ಕೂಡಾ ತಾಲೂಕು ಬದಲಾವಣೆಯಾಗುತ್ತಿರುವುದು ಸುತಾರಂ ಇಷ್ಟವಿಲ್ಲ. ಇದಕ್ಕೆ ಸಾಕ್ಷಿಯಾಗಿ ಹೋಬಳಿಯ ಗುಡೇಮಾರನಹಳ್ಳಿ, ಮೋಟಗಾನಹಳ್ಳಿ, ಬಾಣವಾಡಿ, ಪಾಲನಹಳ್ಳಿ ಗ್ರಾಮಸ್ಥರು ಮಾಗಡಿ ತಾಲೂಕಿನಿಂದ ನಮ್ಮನ್ನು ಬೇರ್ಪಡಿಸುವ ಬದಲು ನೆಲಮಂಗಲ ಕ್ಷೇತ್ರದಿಂದ ಮತ ಹಾಕಲು ಮಾಗಡಿ ಕ್ಷೇತ್ರಕ್ಕೆ ಬದಲಿಸುವ ಕೆಲಸ ಮಾಡಿ ಎಂದು ಒಕ್ಕೊರಲಿನಿಂದ ಮನವಿ ಮಾಡಿದ್ದಾರೆ.
ಬಿಡದಿಯನ್ನು ಮಾಗಡಿಗೆ ಸೇರ್ಪಡೆ ಮಾಡುತ್ತೀರಾ?:ಸೋಲೂರು ಹೋಬಳಿಯ ನ್ಯಾಯದಂತೆ ನಡೆಯುವುದಾದರೆ ಮಾಗಡಿ ಕ್ಷೇತ್ರಕ್ಕೆ ರಾಮನಗರ ತಾಲೂಕಿನ ಬಿಡದಿ ಮತ್ತು ಕೂಟಗಲ್ ಹೋಬಳಿಗಳ ಜನರು ಮತ ಚಲಾಯಿಸುತ್ತಾರೆ. ಆದರೆ ಅವರೆಲ್ಲರ ಆಡಳಿತದ ಕಚೇರಿಗಳಿರುವುದು ರಾಮನಗರ ಕೇಂದ್ರದಲ್ಲಿ. ಹಾಗಾಗಿ ಈ ಎರಡೂ ಹೋಬಳಿಗಳಿಗೆ ರಾಮನಗರ ಮತ್ತು ಮಾಗಡಿಯ ಇಬ್ಬರು ಶಾಸಕರಿದ್ದಾರೆ. ಸೋಲೂರು ಹೋಬಳಿಯೂ ಕೂಡಾ ಬಿಡದಿ ಮತ್ತು ಕೂಟಗಲ್ಲಿನಂತೆಯೇ ತಾಲೂಕು ಒಂದಕ್ಕೆ ಮತ ಚಲಾವಣೆ ಮತ್ತೊಂದಕ್ಕೆ ಇದೆ. ಹಾಗೆಂದು ಬಿಡದಿ ಮತ್ತು ಕೂಟಗಲ್ ಹೋಬಳಿಗಳನ್ನು ರಾಮನಗರ ತಾಲೂಕಿನಿಂದ ಬೇರ್ಪಡಿಸಿ ಮಾಗಡಿಗೆ ಸೇರ್ಪಡೆ ಮಾಡಿಸಿಕೊಳ್ಳುತ್ತೀರಾ ಎಂದು ತಾಲೂಕಿನ ಜನರು ಪ್ರಶ್ನಿಸಿದ್ದಾರೆ.
ಬಾಕ್ಸ್ ..................ರಾಜ್ಯಪಾಲರಿಗೆ ಮನವಿ:
ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ಬೇರ್ಪಡಿಸಬಾರದು ಎಂದು ಸಾರ್ವಜನಿಕರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ. ವಕೀಲರ ಸಂಘ, ವ್ಯವಸಾಯೋತ್ಪನ್ನ ಸಹಕಾರ ಸಂಘಗಳು, ಹತ್ತಾರು ಸಂಘ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ರಾಜ್ಯಸರ್ಕಾರದ ನಿರ್ಧಾರವನ್ನು ಖಂಡಿಸಿ ರಾಜ್ಯಪಾಲರಿಗೂ ಮನವಿ ಅರ್ಪಿಸಿದ್ದಾರೆ.ಕೋಟ್ ...........
ಮಾಗಡಿ ತಾಲೂಕಿನ ಜನನಾಯಕರ ಇಚ್ಚಾಶಕ್ತಿಯ ಕೊರತೆ ತೋರಿಸುತ್ತದೆ. ಸೋಲೂರು ಹೋಬಳಿ ಮಾಗಡಿ ತಾಲೂಕಿನಿಂದ ಬೇರ್ಪಡುವುದನ್ನು ಸಹಿಸಲು ಸಾಧ್ಯವಿಲ್ಲ. ಸುಪ್ರೀಂಕೋರ್ಟಿನವರೆಗೂ ಹೋದರೂ ಸರಿಯೇ ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡಿಸುವುದನ್ನು ಬಿಡಲು ಸಾಧ್ಯವಿಲ್ಲ.- ಕನ್ನಡಕುಮಾರ, ಸಾಮಾಜಿಕ ಹೋರಾಟಗಾರ
ಕೋಟ್ ................ಕೆಲವೇ ಕೆಲವರ ಹಿತಾಸಕ್ತಿಗೆ ಸೋಲೂರು ಹೋಬಳಿಯನ್ನು ಮಾಗಡಿಯಿಂದ ನೆಲಮಂಗಲ ಕ್ಷೇತ್ರಕ್ಕೆ ಬದಲಿಸುವುದರಿಂದ ಜನಸಮಾನ್ಯರಿಗೆ ಯಾವುದೇ ಅನುಕೂಲವಿಲ್ಲ. ಇನ್ನು ಅದರಿಂದ ಅನನುಕೂಲವೇ ಹೆಚ್ಚು. ಆದ್ದರಿಂದ ಸೋಲೂರು ಹೋಬಳಿ ಮಾಗಡಿ ತಾಲೂಕಿನಲ್ಲಿಯೇ ಉಳಿಸಬೇಕು.
-ಶಿವಪ್ರಸಾದ್, ಅಧ್ಯಕ್ಷರು, ಮಾಗಡಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ14ಕೆಆರ್ ಎಂಎನ್ 1.ಜೆಪಿಜಿ
ಸೋಲೂರು ರೈಲ್ವೆ ನಿಲ್ದಾಣ.