ಉಡುಪಿ: ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2025-26ನೇ ಸಾಲಿನಲ್ಲಿ 1,212 ಕೋಟಿ ರು. ವ್ಯವಹಾರ ನಡೆಸಿ 26.72 ಕೋಟಿ ರು. ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದ್ದು 50,000 ಗ್ರಾಹಕರನ್ನು ಹೊಂದಿದೆ. ಬ್ಯಾಂಕ್ 2025-26ನೇ ಸಾಲಿನಲ್ಲಿ 715 ಕೋಟಿ ರು. ಠೇವಣಿ, 497 ಕೋಟಿ ರು. ಸಾಲ ಮತ್ತು ಮುಂಗಡ, 46 ಕೋಟಿ ರು. ಪಾಲು ಬಂಡವಾಳ ಹೊಂದಿದ್ದು, 850 ಕೋಟಿ ರು. ದುಡಿಯುವ ಬಂಡವಾಳದೊಂದಿಗೆ ಉತ್ತಮ ಪ್ರಗತಿ ಸಾಧಿಸಿದೆ.ಕಳೆದ 16 ವರ್ಷಗಳಿಂದ ನಿರಂತರವಾಗಿ ಅತೀ ಹೆಚ್ಚು ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸತತ 8 ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಎ ಶ್ರೇಣಿಯನ್ನು ಪಡೆದು, ದಕ ಜಿಲ್ಲಾ ಸಹಕಾರಿ ಬ್ಯಾಂಕ್ ನೀಡುವ ಪ್ರತಿಷ್ಠಿತ ಪ್ರಶಸ್ತಿ ಸಾಧನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಬ್ಯಾಂಕಿನ ವತಿಯಿಂದ 2 ಸಾವಿರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 50 ಲಕ್ಷ ರು.ಗಳ ಪ್ರತಿಭಾ ಪುರಸ್ಕಾರವನ್ನು ವಿತರಿಸಲಾಗಿದೆ. ಬನ್ನಂಜೆಯಲ್ಲಿ ನೂತನ ಸುಮಾರು 7 ಕೋಟಿ ರು. ವೆಚ್ಚದ ಸುಸಜ್ಜಿತ ಸ್ವಂತ ಕಟ್ಟಡಕ್ಕೆ ಉಡುಪಿ ಶಾಖೆ ಶೀಘ್ರ ಸ್ಥಳಾಂತರಗೊಳ್ಳಲಿದೆ. 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿರುವ ಬ್ಯಾಂಕಿನ ಆಡಳಿತ ಕಚೇರಿ ಹಾಗೂ 7 ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.1 ಲಕ್ಷ ಗ್ರಾಹಕರು - 1000 ಕೋಟಿ ಠೇವಣಿ: ಸುವರ್ಣ ಮಹೋತ್ಸವ ಪೂರೈಸುವ ಸಂದರ್ಭದಲ್ಲಿ 1 ಲಕ್ಷ ಗ್ರಾಹಕರನ್ನೊಳಗೊಂಡು, ಒಂದು ಸಾವಿರ ಕೋಟಿ ರು. ಠೇವಣಿ ಸಂಗ್ರಹಣೆ ಗುರಿಯನ್ನು ಹೊಂದಿದೆ. ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ಉದ್ಯೋಗ ಮೇಳ, ಸಹಕಾರಿ ಸಂಘಗಳ ಸಿಬ್ಬಂದಿಯವರಿಗೆ ಕ್ರೀಡಾಕೂಟ, ಹೊಸ ಶಾಖೆ ಆರಂಭ ಹಾಗೂ ಆಶಕ್ತರಿಗೆ ಮನೆ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ರಾಜ್ಯಾದ್ಯಂತ ವಿಸ್ತರಣೆಗೆ ಯೋಜನೆ: ಪ್ರಸ್ತುತ ಬ್ಯಾಂಕಿನ ವ್ಯವಹಾರ ಕ್ಷೇತ್ರವು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಮಂಡ್ಯ ಜಿಲ್ಲೆಯನ್ನು ಒಳಗೊಂಡಿದ್ದು, ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಬ್ಯಾಂಕಿನ ಕಾರ್ಯಕ್ಷೇತ್ರವನ್ನು ವಿಸ್ತರಿಸಲು ಯೋಜನೆ ರೂಪಿಸಲಾಗಿದೆ ಎಂದು ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
