ಸಾರಾಂಶ
- ಹೊನ್ನಾಳಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಮಾಯಣ ಮಹಾಕಾವ್ಯದ ವೈಶಿಷ್ಟ್ಯ ಮತ್ತು ಅದರ ಜನಪ್ರಿಯತೆಯಿಂದಾಗಿ ಆದಿಕವಿ ಮಹರ್ಷಿ ವಾಲ್ಮೀಕಿ ಅವರು ಕವಿಕುಲಸೌರ್ವಭೌಮರಾಗಿ ದೇಶದ ಸಾಂಸ್ಕೃತಿಕ ಲೋಕದಲ್ಲಿ ನಿತ್ಯವೂ ಆರಾಧಿಸಲ್ಪಡುತ್ತಿದ್ದಾರೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಅಭಿಪ್ರಾಯಪಟ್ಟರು.ಹೊನ್ನಾಳಿ ತಾಲೂಕು ಆಡಳಿತ, ಸಮಾಜದ ಕಲ್ಯಾಣ ಇಲಾಖೆ ನೇತೃತ್ವದಲ್ಲಿ ಗುರುವಾರ ಪಟ್ಟಣದ ಪುರಸಭೆ ಆವರಣದ ಕನಕ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ, ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ವಾಲ್ಮೀಕಿ, ಬುದ್ದ, ಬಸವ, ಕನಕ ಮುಂತಾದವರು ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಓದಿದವರಲ್ಲ. ಆದರೂ, ಅವರ ಸ್ವಚಿಂತನೆಗಳು ಸಮಾಜಕ್ಕೆ ನೀಡಿದ ಮಾರ್ಗದರ್ಶನ, ಆದರ್ಶಗಳು ಜಗತ್ತಿನಲ್ಲಿ ಸೂರ್ಯ- ಚಂದ್ರ ಇರುವತನಕ ಮಾನವ ಕುಲಕ್ಕೆ ಪ್ರಸ್ತತವಾಗಿವೆ ಎಂದು ಹೇಳಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಸಿಎಂ ಸ್ಥಾನದಲ್ಲಿದ್ದಾಗಲೂ ಆಯವ್ಯಯದಲ್ಲಿ ಶೋಷಿತ ವರ್ಗದವರಿಗಾಗಿಯೇ ಪ್ರತಿ ಬಜೆಟ್‌ನಲ್ಲಿ ಶೇ.24.1ರಷ್ಟು ಅನುದಾನ ಮೀಸಲಿಡುವ ವ್ಯವಸ್ಥೆ ಜಾರಿಗೆ ತಂದಿದ್ದರು. ಇದರಿಂದ ಈ ವರ್ಗಗಳ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಿದೆ. ಪ್ರಸ್ತುತ ಹೊನ್ನಾಳಿಯಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ 11 ಮತ್ತು ಹಿಂದುಳಿದ ವರ್ಗಗಳ 12 ವಿದ್ಯಾರ್ಥಿ ನಿಲಯಗಳಿದ್ದು, ಈ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಸಾಕಷ್ಟು ಅವಕಾಶಗಳನ್ನು ಸರ್ಕಾರ ನೀಡಿದೆ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಅಭಿಷೇಕ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದ ಅನೇಕ ಭಾಷೆಗಳ ಕವಿಗಳು ಮಹರ್ಷಿ ವಾಲ್ಮೀಕಿ ಅವರ ಮಹಾಕಾವ್ಯ ರಾಮಾಯಣದಿಂದ ಪ್ರಭಾವಿತರಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ರಾಮಾಯಣದರ್ಶನಂ ಹಾಗೂ ತೆಲುಗು ಕವಿ ವಿಶ್ವನಾಥ ಸತ್ಯನಾರಾಯಣ ಅವರಿಂದ ರಚಿತವಾದ ರಾಮಾಯಣ ಕಲ್ಪವೃಕ್ಷಮು ಈ ಕೃತಿಗಳಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ ಎಂದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ ಉಪನ್ಯಾಸ ನೀಡಿ, ಸುಮಾರು 24 ಸಾವಿರ ಶ್ಲೋಕಗಳನ್ನು ಒಳಗೊಂಡಿರುವ ರಾಮಾಯಣ ಮಹಾಕಾವ್ಯವು ಭಾರತದ ಸಂವಿಧಾನವನ್ನೂ ಒಳಗೊಂಡಂತೆ ಕಲೆ, ಸಂಸ್ಕೃತಿ, ಸಂಗೀತ, ನಾಟಕ, ರಂಗಭೂಮಿ ಮುಂತಾದ ಕ್ಷೇತ್ರಗಳ ಮೇಲೆ ಅಗಾಧ ಪ್ರಭಾವ ಬೀರಿದೆ ಎಂದು ವಿವರಿಸಿದರು.
ತಾಲೂಕು ವಾಲ್ಮೀಕಿ ಸಮಾಜ ಅಧ್ಯಕ್ಷ ಶಿವಾನಂದಪ್ಪ ಇತರ ಗಣ್ಯರು ಮಾತನಾಡಿದರು. ಸಮಾಜದ ಗೌರವಾಧ್ಯಕ್ಷ ಕೋಣನತಲೆ ನಾಗಪ್ಪ, ಕಾರ್ಯದರ್ಶಿ ಸಿ.ಹನುಮಂತಪ್ಪ, ಹಿರಿಯ ಮುಖಂಡ ಮಾರಿಕೊಪ್ಪದ ತಿಮ್ಮಪ್ಪ, ಪುರಸಭೆ ಅಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ತಹಸೀಲ್ದಾರ್ ಪಟ್ಟರಾಜಗೌಡ, ತಾಪಂ ಇಒ ಪ್ರಕಾಶ್, ಪಿಪಿಐ ಸುನಿಲ್ ಕುಮಾರ್, ಬಿಇಒ ನಿಂಗಪ್ಪ, ಕೆ.ರಂಗನಾಥ್, ಕ್ಯಾಸಿನಕೆರೆ ಶೇಖರಪ್ಪ, ಸಮಾಜದ ಖಜಾಂಚಿ ಕುಳಗಟ್ಟೆ ಹನುಮಂತಪ್ಪ, ಸಮಾಜ ಕಲ್ಯಾಣಾಧಿಕಾರಿ ಉಮಾ, ಬಿಸಿಎಂ ಅಧಿಕಾರಿ ಮೃತ್ಯುಂಜಯ, ಪುರಸಭೆ ಸದಸ್ಯರು, ವಾಲ್ಮೀಕಿ ಸಮಾಜದ ಹಲವಾರು ಮುಖಂಡರು ಉಪಸ್ಥಿತರಿದ್ದರು.- - - -17ಎಚ್.ಎಲ್.ಐ1:
ಹೊನ್ನಾಳಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.