ಸಾಹಿತಿಗಳಿಗೆ, ಕವಿಗಳಿಗೆ ಮಹರ್ಷಿ ಸ್ಫೂರ್ತಿ ಸೆಲೆ: ಡಾ.ಎನ್.ಕೆ.ಹೆಗಡೆ

| Published : Oct 19 2024, 12:29 AM IST / Updated: Oct 19 2024, 12:30 AM IST

ಸಾಹಿತಿಗಳಿಗೆ, ಕವಿಗಳಿಗೆ ಮಹರ್ಷಿ ಸ್ಫೂರ್ತಿ ಸೆಲೆ: ಡಾ.ಎನ್.ಕೆ.ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹರ್ಷಿ ಮೂಲ ಹೆಸರು ರತ್ನಾಕರ. ವಿಶ್ವದ ಮೊದಲ ಶ್ಲೋಕ ರಚಿಸಿದ್ದಾರೆ. ರಾಮಾಯಣ ಆಧಾರದ ಮೇಲೆ ಕಾವ್ಯ, ನಾಟಕ, ಕಾದಂಬರಿ ಮತ್ತು ಕಥೆಗಳನ್ನು ಅನೇಕರು ರಚಿಸಿದ್ದಾರೆ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಯಾಯಣವು ನಮ್ಮ ದೇಶದ ಹಿರಿಮೆಯಾಗಿದೆ. ಭಾರತವು ಋಷಿ, ಮುನಿಗಳ ಬೀಡು ಹಾಗೂ ಕೃಷಿ ಪ್ರಧಾನವಾದ ದೇಶವಾಗಿದೆ. ವಾಲ್ಮೀಕಿಯು ಕವಿಕುಲದ ಗುರುವಾಗಿ ಹಲವಾರು ಕವಿಗಳಿಗೆ ಹಾಗೂ ಸಾಹಿತಿಗಳಿಗೆ ಸ್ಫೂರ್ತಿ ಸೆಲೆಯಾಗಿದ್ದಾರೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಭಾರಿ ಕುಲಪತಿ ಡಾ.ಎನ್.ಕೆ. ಹೆಗಡೆ ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯ, ಬಾಗಲಕೋಟೆ ಹಾಗೂ ರಾಷ್ಟೀಯ ಸೇವಾ ಯೋಜನಾ ಘಟಕದ ಸಹಯೋಗದೊಂದಿಗೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಆವರಣದಲ್ಲಿ ಆಯೋಜಿಸಲಾದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಮಹರ್ಷಿ ಮೂಲ ಹೆಸರು ರತ್ನಾಕರ. ವಿಶ್ವದ ಮೊದಲ ಶ್ಲೋಕ ರಚಿಸಿದ್ದಾರೆ. ರಾಮಾಯಣ ಆಧಾರದ ಮೇಲೆ ಕಾವ್ಯ, ನಾಟಕ, ಕಾದಂಬರಿ ಮತ್ತು ಕಥೆಗಳನ್ನು ಅನೇಕರು ರಚಿಸಿದ್ದಾರೆ ಎಂದರು.

ಇಂದಿಗೂ ಸಹ ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಸತ್ವ ಮತ್ತು ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ಪ್ರೇರಣೆಯಾಗಿದೆ. ರಾಮಯಣವು ಭಾರತೀಯರ ಜೀವನ ಚರಿತ್ರೆ ಮತ್ತು ಸಂಸ್ಕೃತಿ ಪ್ರತಿಬಿಂಬಿಸುವ ಮಹಾಕಾವ್ಯವಾಗಿದೆ. ರಾಮಾಯಣ ಮಹಾಕಾವ್ಯದಲ್ಲಿ ಮಾತೃ, ಪಿತೃ, ಆಚಾರ್ಯ, ಅತಿಥಿ ದೇವೋಭವದಂತಹ ಮೌಲ್ಯ ಎತ್ತಿ ಹಿಡಿಯಲಾಗಿದ್ದು, ಅವುಗಳು ಇಂದಿನ ಪೀಳಿಗೆಗೆ ದಾರಿದೀಪವಾಗಿವೆ ಎಂದು ಹೇಳಿದರು.

ತೋಟಗಾರಿಕೆ ಮಹಾವಿದ್ಯಾಲಯದ ದ್ವಿತೀಯ ವರ್ಷದ ಬಿಎಸ್ಸಿ, ವಿದ್ಯಾರ್ಥಿನಿಯಾದ ಕುಮಾರಿ ಪರಿಣಿತಾ ಮಾತನಾಡಿ, ಆದಿಕವಿ ವಾಲ್ಮೀಕಿಯವರು ಧರ್ಮದ ಮಾರ್ಗದಲ್ಲಿ ನಡೆಯುವುದರ ಜೊತೆಗೆ ಪ್ರೀತಿ, ವಾತ್ಸಲ್ಯ, ತ್ಯಾಗ, ದೃಢತೆ ಮತ್ತು ಖ್ಯಾತಿ ಭಾವನೆಗಳಿಗೆ ಪ್ರಾಮುಖ್ಯತೆ ಕೊಟ್ಟ ಮಹಾನ್ ವ್ಯಕ್ತಿಯಾಗಿದ್ದರು ಎಂದು ಪೂಜ್ಯರ ಜೀವನ ಚರಿತ್ರೆ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿಸ್ತರಣಾ ನಿರ್ದೇಶಕರಾದ ಡಾ. ಟಿ.ಬಿ. ಅಲ್ಲೋಳ್ಳಿ, ಡೀನ್, ಸ್ನಾತಕೋತ್ತರಾದ ಡಾ. ಲಕ್ಷ್ಮೀನಾರಾಯಣ ಹೆಗಡೆ, ಡೀನ್ರಾದ ಡಾ. ಬಾಲಾಜಿ ಕುಲಕರ್ಣಿ, ಸಹ ಸಂಶೋಧನ ನಿರ್ದೇಶಕರಾದ ಡಾ. ಎಮ್. ಎಸ್. ಲೋಕೆಶ, ಆಸ್ತಿ ಅಧಿಕಾರಿಗಳಾದ. ವಿಜಯ ಭಾಸ್ಕರ ಭಜಂತ್ರಿ, ಉಪ ಹಣಕಾಸು ನಿಯಂತ್ರಣಾಧಿಕಾರಿಗಳಾದ. ಡಿ.ಎಲ್. ಸುತಗಟ್ಟಿ, ವಿಶ್ವವಿದ್ಯಾಲಯದ ಇನ್ನಿತರ ಅಧಿಕಾರಿಗಳು, ಶಿಕ್ಷಕ, ಶಿಕ್ಷಕೇತರ ನೌಕರರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕ ವರ್ಗದವರು ಅತ್ಯಂತ ಉತ್ಸಾಹದಿಂದ ಜಯಂತಿಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಕುಮಾರಿ ಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕುಮಾರಿ ನವ್ಯ ಸ್ವಾಗತಿಸಿದರು. ಕುಮಾರಿ ನಿಸರ್ಗ ವಂದನಾರ್ಪಣೆ ಮಾಡಿದರೆ ಕುಮಾರಿ ರೋಹಿಣಿ, ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.