ಸಾರಥಿ ಗೌಳಿಗರ ಕ್ಯಾಂಪಿನಲ್ಲಿ ವಿಶೇಷ ದಸರಾ ಸಂಪನ್ನ

| Published : Oct 19 2024, 12:29 AM IST

ಸಾರಾಂಶ

ಚನ್ನಗಿರಿ ತಾಲೂಕಿನ ಸಾರಥಿ ಗೌಳಿಗರ ಕ್ಯಾಂಪ್‌ನಲ್ಲಿ ಕಳೆದ 3 ದಿನಗಳಿಂದ ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು. ಅಮಾವಾಸ್ಯೆ ದಿನದಿಂದ ಪಾಂಡುರಂಗ ವಿಠಲ ಆರಾಧಕರಾದ ಗೌಳಿಗರು ಶಿಲ್ಲೇರಿಗಾನ್ ಎಂದು ಕರೆಯುವ ಈ ದಸರಾ ಹಬ್ಬವನ್ನು ಅವರವರ ಮನೆಗಳಲ್ಲಿ ಆಚರಿಸಿದರು. ಅನಂತರ ಕ್ಯಾಂಪಿನ ಹೊರಭಾಗದಲ್ಲಿ ದಸರಾ ಆಚರಣೆ ಮಾಡುವುದು ವಿಶೇಷ.

- ಸಾಂಪ್ರಾದಾಯಿಕ ಉಡುಪು ಧರಿಸಿ ಕತ್ತಿ, ದೊಣ್ಣೆ ಹಿಡಿದು ಗಜನೃತ್ಯ, ಪುಗಡಿ ನೃತ್ಯ- - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಸಾರಥಿ ಗೌಳಿಗರ ಕ್ಯಾಂಪ್‌ನಲ್ಲಿ ಕಳೆದ 3 ದಿನಗಳಿಂದ ವಿಶಿಷ್ಟವಾಗಿ ದಸರಾ ಹಬ್ಬವನ್ನು ಆಚರಿಸಲಾಯಿತು. ಅಮಾವಾಸ್ಯೆ ದಿನದಿಂದ ಪಾಂಡುರಂಗ ವಿಠಲ ಆರಾಧಕರಾದ ಗೌಳಿಗರು ಶಿಲ್ಲೇರಿಗಾನ್ ಎಂದು ಕರೆಯುವ ಈ ದಸರಾ ಹಬ್ಬವನ್ನು ಅವರವರ ಮನೆಗಳಲ್ಲಿ ಆಚರಿಸಿದರು. ಅನಂತರ ಕ್ಯಾಂಪಿನ ಹೊರಭಾಗದಲ್ಲಿ ದಸರಾ ಆಚರಣೆ ಮಾಡುವುದು ವಿಶೇಷ.

ಈ ಜನಾಂಗದಲ್ಲಿ ಶಿಂಧೆ, ಬುಡಕೆ, ಎಡಗೆ, ತಾಟೆ, ಕೊಕ್ಕರೆ, ಪಾಟ್‌ಗರ್‌ ಪಂಗಡಗಳಿದ್ದು, ಗ್ರಾಮದಲ್ಲಿ ಸುಮಾರು 50 ಮನೆಗಳಿವೆ. ಮಕ್ಕಳಿಂದ ಹಿಡಿದು ದೊಡ್ಡವರ ತನಕ ಸುಮಾರು 200 ಜನರಿದ್ದಾರೆ. ಹೈನುಗಾರಿಕೆಯನ್ನೆ ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಪ್ರತಿ ಮನೆಯ ಸದಸ್ಯರು ನವರಾತ್ರಿ ಪ್ರಯುಕ್ತ ಉಪವಾಸ ಆಚರಣೆ ಮಾಡುತ್ತಾರೆ. ಸಾಕಿರುವ ಎಮ್ಮೆಗಳ ಹಾಲಿನ ತುಪ್ಪದಿಂದ ಕುಲದೇವರಾದ ವಿಠಲ ಪಾಂಡುರಂಗ ದೇವರಿಗೆ ನೈವೇಧ್ಯ ಮಾಡುತ್ತಾರೆ.

ವಿಜಯದಶಮಿಯ ದಿನದಂದು ಈ ಜನಾಂಗದ ವಿವಿಧ ಪಂಗಡಗಳವರು ಕುಲ ದೇವರನ್ನು ಕರಿಯ ಕಂಬಳಿಯ ಗದ್ದಿಗೆಯ ಮೇಲೆ ಕೂರಿಸಿ ಪೂಜಿಸುತ್ತಾರೆ. ದೇವರ ಸನ್ನಿಧಿಯಲ್ಲಿ ಪುರುಷರು ವೃತ್ತಾಕಾರವಾಗಿ ನಿಂತು, ಸಾಂಪ್ರಾದಾಯಿಕ ಉಡುಪುಗಳನ್ನು ಧರಿಸಿ, ಕೈಯಲ್ಲಿ ಕತ್ತಿ, ದೊಣ್ಣೆಗಳನ್ನು ಹಿಡಿದು ಗಜನೃತ್ಯ ಮಾಡುವುದು ಪದ್ಧತಿ. ಹಾಗೆಯೇ ಗೌಳಿ ಮಹಿಳೆಯರು ಪುಗಡಿ ನೃತ್ಯವನ್ನು ಮಾಡುತ್ತಾರೆ.

ದೇವರಿಗೆ ಪ್ರಸಾದ ತಯಾರಿಸುವಾಗ ಸಾಂಪ್ರದಾಯಿಕವಾದ ಹಾಡುಗಳನ್ನು ಹಾಡುತ್ತಾರೆ. ಬೀಸೋಕಲ್ಲಿನಿಂದ ಅಕ್ಕಿ ಹಿಟ್ಟನ್ನು ತಯಾರಿಸಿ, ಅದರಲ್ಲಿ ದೇವರಿಗೆ ಪ್ರಸಾದ ತಯಾರಿಸುತ್ತಾರೆ. ಅನಂತರ ಗ್ರಾಮದ ಎಲ್ಲ ಗೌಳಿಗರು ಅದೇ ಕ್ಯಾಂಪಿನಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯ ಬಳಿ ಬಂದು ಅಂಬಿನೋತ್ಸವವನ್ನು ಆಚರಿಸುತ್ತಾರೆ. ಬನ್ನಿಪತ್ರೆಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು, ಶುಭಾಶಯಗಳನ್ನು ಕೋರುತ್ತಾರೆ. ಇದು ನಮ್ಮ ಗ್ರಾಮದ ವಿಷೇಶ ಹಬ್ಬವಾಗಿದೆ ಎಂದು ಕ್ಯಾಂಪಿನ ಯಜಮಾನ ಬಾಬು ಬಾಪು ತಾಟೆ ಹೇಳುತ್ತಾರೆ.

- - - -14ಕೆಸಿಎನ್ಜಿ2, 3:

ಚನ್ನಗಿರಿ ತಾಲೂಕಿನ ಸಾರಥಿ ಗೌಳಿಗರ ಕ್ಯಾಂಪ್‌ನಲ್ಲಿ ದಸರಾ ಹಬ್ಬದ ಆಚರಣೆಯ ಸಂದರ್ಭದಲ್ಲಿ ಕರಿಯ ಕಂಬಳಿ ಮೇಲೆ ದೇವರನ್ನು ಪ್ರತಿಷ್ಠಾಪಿಸಿ ಪೂಜಿಸಿದರು.