ಸಮ ಸಮಾಜದ ನಿರ್ಮಾಣಕ್ಕಾಗಿ ಹೋರಾಟ ನಡೆಸಿದ್ದ ಮಹಾತ್ಮ ಗಾಂಧೀಜಿ

| Published : Nov 03 2025, 02:03 AM IST

ಸಾರಾಂಶ

ದೇಶದಲ್ಲಿ ಕೋಮು, ದ್ವೇಷ ಹೆಡೆ ಎತ್ತಿದಾಗ, ಬೃಹತ್ ಜನವಿರೋಧಿ ಯೋಜನೆಗಳು ಅನುಷ್ಠಾನಕ್ಕೆ ಬಂದಾಗ ನಮಗೆ ನೆನಪಾಗುವ ಎರಡಕ್ಷರವೇ ಗಾಂಧಿ. ಗಾಂಧಿ ಎಂದರೆ ಅನ್ಯಾಯ- ಅಕ್ರಮಗಳ ವಿರುದ್ಧ ಹೋರಾಟದ ಸ್ಫೂರ್ತಿಯ ಚಿಲುಮೆಯಾಗುವ ಪ್ರೇರಕ ಶಕ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರಿಂದ ವಿಶ್ವನಾಯಕ ಎಂದು ಕರೆಸಿಕೊಂಡ ಮಹಾತ್ಮ ಗಾಂಧೀಜಿ ಅವರು ಜಾತಿ, ಮತ ಪಂಥಗಳಿಂದ ಮುಕ್ತವಾದ ಸಮ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಹೋರಾಟ ನಡೆಸಿದರು ಎಂದು ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ನಿರ್ದೇಶಕ ಪ್ರೊ.ಶಿವರಾಜು ಹೇಳಿದರು.

ಪಟ್ಟಣದ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಕರ್ನಾಟಕ ಸಂಘ, ಕೆ.ಆರ್.ಪೇಟೆ ಕೃಷ್ಣ ಪ್ರತಿಷ್ಠಾನ, ಸಮಾನ ಮನಸ್ಕರ ವೇದಿಕೆ, ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ, ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ, ಲಕ್ಷ್ಮಮ್ಮ ವೆಂಕಟರಾಮ್ ಚಾರಿಟಬಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿಯವರ ಬದುಕು ಮತ್ತು ಹೋರಾಟ ಕುರಿತ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದಲ್ಲಿ ಕೋಮು, ದ್ವೇಷ ಹೆಡೆ ಎತ್ತಿದಾಗ, ಬೃಹತ್ ಜನವಿರೋಧಿ ಯೋಜನೆಗಳು ಅನುಷ್ಠಾನಕ್ಕೆ ಬಂದಾಗ ನಮಗೆ ನೆನಪಾಗುವ ಎರಡಕ್ಷರವೇ ಗಾಂಧಿ. ಗಾಂಧಿ ಎಂದರೆ ಅನ್ಯಾಯ- ಅಕ್ರಮಗಳ ವಿರುದ್ಧ ಹೋರಾಟದ ಸ್ಫೂರ್ತಿಯ ಚಿಲುಮೆಯಾಗುವ ಪ್ರೇರಕ ಶಕ್ತಿಯಾಗಿದೆ ಎಂದರು.

ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ನೆಲ್ಸನ್ ಮಂಡೇಲಾ ಅವರಿಗೆ ಹೋರಾಟದ ಜ್ವಾಲೆಯ ಕಿಚ್ಚನ್ನು ಹಚ್ಚಿದ್ದು ಗಾಂಧೀಜಿ ಎಂದು ತಿಳಿಸಿದರು.

ಯುವಜನರು ಹಾಗೂ ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಂದೆ- ತಾಯಿಗಳು, ಮಾನವ ಧರ್ಮ ಹಾಗೂ ಗುರು- ಹಿರಿಯರ ಬಗ್ಗೆ ಗೌರವ ಭಾವನೆಯನ್ನು ಹೊಂದಬೇಕು. ಅನಾಹುತ, ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಂಡು ಗಾಂಧೀಜಿ ಯವರು ನಮಗೆ ಬಳುವಳಿಯಾಗಿ ನೀಡಿರುವ ತತ್ವಾದರ್ಶಗಳು ಹಾಗೂ ಜೀವನದ ಸಂದೇಶಗಳನ್ನು ಪಾಲಿಸುವ ಮೂಲಕ ಬದಲಾವಣೆಯ ದಿಕ್ಕಿನಲ್ಲಿ ಸಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಹಿರಿಯ ಪತ್ರಕರ್ತರಾದ ಬಳ್ಳೇಕೆರೆ ಮಂಜುನಾಥ್, ಬಲ್ಲೇನಹಳ್ಳಿ ಮಂಜುನಾಥ್, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಕೆ.ಆರ್.ಜಯರಾಂ, ಮುದುಗೆರೆ ರಾಜೇಗೌಡ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶೀಳನೆರೆ ಮೋಹನ್, ವಿಶ್ರಾಂತ ಕನ್ನಡ ಶಿಕ್ಷಕರಾದ ಚಾಶಿ ಜಯಕುಮಾರ್, ಶೀಳನೆರೆ ಶಿವಕುಮಾರ್, ಸಂತೇಬಾಚಹಳ್ಳಿ ರಂಗಸ್ವಾಮಿ, ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್, ಯುವ ಸಾಹಿತಿ ಮಹಮದ್ ಅಜರುದ್ಧೀನ್, ವಿದ್ಯಾರ್ಥಿಗಳು ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.