ನಗರದಿಂದ ದಾವಣಗೆರೆ ತೆರಳುವ ರಸ್ತೆಯ ಅಮರಾವತಿ ಬಳಿ ಇರುವ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ, ಸರ್ವೀಸ್‌ ರಸ್ತೆ ಸಂಪೂರ್ಣ ಹಾಳಾಗಿವೆ. ಕಾಮಗಾರಿ ನಡೆಯುವಾಗ, ಮುಗಿದ ಮೇಲೆ ಅಧಿಕಾರಿಗಳು ತಕ್ಷಣ ಪರಿಶೀಲಿಸಿದಲ್ಲಿ ಇಂತಹ ಕಳಪೆ ಕಾಮಗಾರಿಗಳು ನಡೆಯುವುದಿಲ್ಲ ಎಂದು ಶಾಸಕ ಬಿ.ಪಿ.ಹರೀಶ್‌ ಬೇಸರ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹರಿಹರ

ನಗರದಿಂದ ದಾವಣಗೆರೆ ತೆರಳುವ ರಸ್ತೆಯ ಅಮರಾವತಿ ಬಳಿ ಇರುವ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ, ಸರ್ವೀಸ್‌ ರಸ್ತೆ ಸಂಪೂರ್ಣ ಹಾಳಾಗಿವೆ. ಕಾಮಗಾರಿ ನಡೆಯುವಾಗ, ಮುಗಿದ ಮೇಲೆ ಅಧಿಕಾರಿಗಳು ತಕ್ಷಣ ಪರಿಶೀಲಿಸಿದಲ್ಲಿ ಇಂತಹ ಕಳಪೆ ಕಾಮಗಾರಿಗಳು ನಡೆಯುವುದಿಲ್ಲ ಎಂದು ಶಾಸಕ ಬಿ.ಪಿ.ಹರೀಶ್‌ ಬೇಸರ ವ್ಯಕ್ತಪಡಿಸಿದರು.

ಶಾಸಕ ಹರೀಶ್‌ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಕಳೆದ 15 ದಿನಗಳ ಹಿಂದೆ ಭೇಟಿ ಮಾಡಿ ನಗರದ ಅಮರಾವತಿ ಬಳಿ ಇರುವ ರೈಲ್ವೆ ಸೇತುವೆ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದ ಹಿನ್ನೆಲೆ ಶುಕ್ರವಾರ ಪರಿಶೀಲನೆಗೆ ಆಗಮಿಸಿದ ರಾಜ್ಯ ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿದರು.

ನಗರದಿಂದ ದಾವಣಗೆರೆಗೆ ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅವೆಲ್ಲವೂ ರೈಲ್ವೆ ಮೇಲ್ಸೇತುವೆ ಹಾಗೂ ಪರ್ಯಾಯ ರಸ್ತೆ ಮೂಲಕ ಸಂಚರಿಸುತ್ತವೆ. ಅದರೆ ಮೇಲ್ಸೇತುವೆ ತಗ್ಗು ಗುಂಡಿಗಳಿಂದ ಕೂಡಿದೆ. ಸೇತುವೆಗೆ ಪರ್ಯಾಯವಾಗಿ ನಿರ್ಮಿಸಿರುವ ಸರ್ವೀಸ್‌ ರಸ್ತೆಯೂ ಹಾಳಾಗಿದೆ ಎಂದು ಹೇಳಿದರು.

ಅಮರಾವತಿ, ಕೇಶವ ನಗರ, ಸಾಹಿಬಾಬಾ ಮಂದಿರ, ಪಟೇಲ್ ಬಡಾವಣೆ, ಟಿಪ್ಪು ನಗರ ಭಾಗದಿಂದ ಅನೇಕರು ರೈಲ್ವೆ ಹಳಿಯ ಕೆಳಗೆ ನಿರ್ಮಿಸಿರುವ ಅಂಡರ್‌ ಬಿಡ್ಜ್‌ ಮೂಲಕವೇ ನಗರ ಹಾಗೂ ದಾವಣಗೆರೆ ಸಂಚರಿಸಬೇಕು ಆದರೆ ಅಂಡರ್‌ ಬಿಡ್ಜ್‌ ಕೆಳಭಾಗ ಸಂಪೂರ್ಣ ಗುಂಡಿಮಯವಾಗಿದ್ದು, ಮಳೆಗಾಲದಲ್ಲಿ ಒಂದು ಬಾರಿ ಮಳೆ ಆದರೆ 15 ದಿನ ಮೊಳಕಾಲ ವರೆಗೂ ನೀರು ನಿಲ್ಲುತ್ತದೆ ಅನೇಕರು ಅದರಲ್ಲಿ ಬಿದ್ದು ತೊಂದರೆ ಅನುಭವಿಸಿದ್ದಾರೆ. ಅಂಡರ್ ಬ್ರಿಡ್ಜ್ ಹಾಗೂ ಸರ್ವೀಸ್‌ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿರುವ ಕಾರಣ, ನೆಲಕ್ಕೆ ಹಾಕಿರುವ ಕಬ್ಬಿಣದ ರಾಡುಗಳು ಎದ್ದು ನಿಂತಿವೆ ಎಂದರು.

ನ.7ರಂದು ರಾಜ್ಯ ರೈಲ್ವೆ ಸಚಿವ ಸೋಮಣ್ಣ ಅವರು ಖಾಸಗಿ ಕಾರ್ಯಕ್ರಮಕ್ಕೆ ಜಿಲ್ಲೆಗೆ ಆಗಮಿಸಲಿದ್ದಾರೆ. ಅಷ್ಟರೊಳಗೆ ಅಗತ್ಯ ಕಾಮಗಾರಿಗಳ ರೂಪುರೇಷೆ ಸಿದ್ಧಪಡಿಸಿಕೊಳ್ಳಿ. ಅಗತ್ಯ ಅನುದಾನ ಪಡೆದು ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣ ಗೊಳಿಸಿ ಎಂದು ಸಲಹೆ ನೀಡಿದರು.

ಬೆಂಗಳೂರಿನ ಎಇಇ ಪುರುಶೊತ್ತಮ್‌ ಮಾತನಾಡಿ, ಅಂಡರ್‌ ಬಿಡ್ಜ್‌ ಕೆಳಗೆ ಚರಂಡಿ ನೀರು ಹರಿದು ಬರುತ್ತಿದೆ. ಅದನ್ನು ನಗರಸಭೆಯವರು ಸರಿ ಪಡಿಸಿ ಚರಂಡಿ ನಿರ್ಮಿಸಿದಲ್ಲಿ ಅಂಡರ್‌ ಬಿಡ್ಜ್‌ನಲ್ಲಿ ನೀರು ಬರುವುದಿಲ್ಲ ಎಂದರು

ದೂಡಾ ಮಾಜಿ ಸದಸ್ಯ ರಾಜು ರೋಖಡೆ, ರೈಲ್ವೆ ಸೀನಿಯರ್‌ ಸೆಕ್ಷನ್‌ ಎಂಜಿನಿಯರ್‌ ಶಣ್ಮುಖಪ್ಪ, ರವಿ ಕುಮಾರ್‌, ದೂಡಾ ಮಾಜಿ ಸದಸ್ಯ ಚಂದ್ರಶೇಖರ್‌ ಬಾತಿ, ರವಿರಾಜ್‌ ತಾವರಿಗಿ, ರೈಲ್ವೆ ಸಲಹಾ ಸಮಿತಿ ಸದಸ್ಯ ಚಂದ್ರಶೇಖರ್‌ ಪರ್ಪದ್‌, ಶಕೀಲ್‌ ಅಹ್ಮದ್‌, ಜಮಾಲ್‌ ಸಾಬ್‌, ರಫೀಕ್‌, ಕೆ. ಅಹ್ಮದ್‌ ಇತರರು ಹಾಜರಿದ್ದರು.