ಮಹಾತ್ಮ ಗಾಂಧಿ ಭಾರತದ ಅಸ್ಮಿತೆಯ ಸಂಕೇತ

| Published : Oct 03 2025, 01:07 AM IST

ಸಾರಾಂಶ

ದೊಡ್ಡಬಳ್ಳಾಪುರ: ಭಾರತದ ಅಸ್ಮಿತೆಯಾಗಿರುವ ಮಹಾತ್ಮಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಬದುಕು ಮತ್ತು ಆದರ್ಶಗಳು ಜಗತ್ತಿನ ಮನ್ನಣೆ ಪಡೆದಿವೆ ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ ತಿಳಿಸಿದರು.

ದೊಡ್ಡಬಳ್ಳಾಪುರ: ಭಾರತದ ಅಸ್ಮಿತೆಯಾಗಿರುವ ಮಹಾತ್ಮಗಾಂಧಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಬದುಕು ಮತ್ತು ಆದರ್ಶಗಳು ಜಗತ್ತಿನ ಮನ್ನಣೆ ಪಡೆದಿವೆ ಎಂದು ನಿವೃತ್ತ ಮುಖ್ಯಶಿಕ್ಷಕ ಕೆ.ವಿ.ವೆಂಕಟೇಶರೆಡ್ಡಿ ತಿಳಿಸಿದರು.

ತಾಲೂಕು ಕಸಾಪ ಡಾ.ರಾಜ್ ಕುಮಾರ್ ಕಲಾಮಂದಿರದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ಅವರ ಶಾಂತಿ ಮತ್ತು ಅಹಿಂಸಾ ಅಸ್ತ್ರಗಳ ಎದುರು ಸುಸಜ್ಜಿತ ಸೇನೆ ಹೊಂದಿದ್ದ ಬ್ರಿಟನ್‌ ಸರ್ಕಾರ ತಲೆಬಾಗಿತ್ತು. ಜಾಗತಿಕ ಮಟ್ಟದಲ್ಲಿ ಮಹಾತ್ಮಗಾಂಧಿ ಅವರ ಹೋರಾಟದ ಹಾದಿಯನ್ನು ನೆಲ್ಸನ್ ಮಂಡೇಲಾ ಸೇರಿದಂತೆ ಹಲವು ಜಾಗತಿಕ ನಾಯಕರು ಅನುಸರಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರಾಮಾಣಿಕತೆ, ಸರಳತೆ, ದೇಶಭಕ್ತಿ, ನಿಸ್ವಾರ್ಥ ಸೇವೆ ಸದಾ ಸ್ಮರಣೀಯವಾಗಿದೆ. ಜೈ ಜವಾನ್, ಜೈ ಕಿಸಾನ್ ಘೋಷವಾಕ್ಯದ ಮೂಲಕ ಭಾರತ ದೇಶದ ಶ್ರಮಜೀವಿಗಳನ್ನು ಪ್ರೋತ್ಸಾಹಿಸಿದರು ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಮಹಾತ್ಮಗಾಂಧಿ ಅವರ ತತ್ವ ಚಿಂತನೆ ಮತ್ತು ಆದರ್ಶಗಳನ್ನು ದಮನ ಮಾಡುವ ಹುನ್ನಾರಗಳು ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಯುವಜನರಲ್ಲಿ ಗಾಂಧಿ ಕುರಿತ ಆಲೋಚನೆಗಳನ್ನು ಭಿನ್ನ ಹಾದಿಯಲ್ಲಿ ಬಿತ್ತುವ ಕೆಲಸವಾಗುತ್ತಿದೆ. ಪೂರ್ವಾಗ್ರಹಪೀಡಿತ ಮನೋಸ್ಥಿತಿಗಳು ಗಾಂಧಿಸ್ಮೃತಿಯನ್ನು ಹತ್ತಿಕ್ಕುವ ಪ್ರಯತ್ನದಲ್ಲಿವೆ. ಯುದ್ದೋನ್ಮಾದದಲ್ಲಿ ತೇಲುತ್ತಿರುವ ಇಂದಿನ ಜಗತ್ತಿಗೆ ಗಾಂಧಿ ಚಿಂತನೆಗಳು ಮಾತ್ರ ಚಿಕಿತ್ಸಕ ಶಕ್ತಿಯಾಗಿ ಕೆಲಸ ಮಾಡಬಲ್ಲವು. ಇಂದಿನ ಯುವಜನತೆ ಮಹಾತ್ಮಗಾಂಧಿ ಅವರ ವಿಚಾರಧಾರೆಗಳನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಮಾತನಾಡಿ, ದೊಡ್ಡಬಳ್ಳಾಪುರ ತಾಲೂಕಿನ ಹಲವಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಮಹಾತ್ಮಗಾಂಧಿ ಅವರ ಪ್ರೇರಣಾಶಕ್ತಿಯಾಗಿದ್ದರು. ಜವಳಿ ಕ್ಷೇತ್ರದಲ್ಲಿ ಸುಸ್ಥಿರತೆ, ಪರಿಸರ ಸ್ನೇಹಪರತೆಯನ್ನು ಭಾರತೀಯ ಪ್ರಜೆಗಳಿಗೆ ಮಹಾತ್ಮಗಾಂಧಿ ಅರಿವು ಮೂಡಿಸಿದ್ದರು. ಶಾಸ್ತ್ರಿ ಅವರ ಸ್ವಾಭಿಮಾನ ಮತ್ತು ದೇಶಾಭಿಮಾನ ಭಾರತೀಯ ನಾಗರೀಕರಿಗೆ ಎಂದಿಗೂ ಮಾದರಿ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ನಿಕಟಪೂರ್ವ ಅಧ್ಯಕ್ಷೆ ಪ್ರಮೀಳಾಮಹಾದೇವ್, ಕೋಶಾಧ್ಯಕ್ಷ ಸಾ.ಲ.ಕಮಲನಾಥ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಪಿ.ಡಿ.ದಾದಾಪೀರ್, ಕೋಶಾಧ್ಯಕ್ಷ ಜಿ.ಸುರೇಶ್, ಪ್ರತಿನಿಧಿಗಳಾದ ನಾಗರತ್ನಮ್ಮ, ಸಫೀರ್, ಇಸ್ತೂರು ಕೋದಂಡರಾಮ ಭಜನಾ ಮಂಡಲಿ ಕಾರ್ಯದರ್ಶಿ ರಂಗಸ್ವಾಮಯ್ಯ, ರಂಗಭೂಮಿ ಕಲಾವಿದ ಸಂಘದ ಜಿಲ್ಲಾ ಕಾರ್ಯದರ್ಶಿ ಪುಟ್ಟಸಿದ್ದಯ್ಯ, ಗೆಜ್ಜಗದಹಳ್ಳಿ ಮುನಿರಾಜು, ಲಾವಣ್ಯ ಕಾಲೇಜಿನ ಪ್ರಾಂಶುಪಾಲ ಎಂ.ಸಿ.ಮಂಜುನಾಥ್, ಕಲಾವಿದ ದರ್ಗಾಜೋಗಿಹಳ್ಳಿ ಮಲ್ಲೇಶ್, ಮಹಾದೇವಪ್ಪ, ಅಂಜನಗೌಡ, ಶ್ರೀನಿವಾಸ್, ನಾಗದಳ ನಟರಾಜ್, ಕನ್ನಡ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ನಾಗರಾಜ್, ಶಶಿಧರ್, ಮಂಜುನಾಥ್ ಭಾಗವಹಿಸಿದ್ದರು.

2ಕೆಡಿಬಿಪಿ2-ದೊಡ್ಡಬಳ್ಳಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್‌ಬಹದ್ದೂರ್‌ ಶಾಸ್ತ್ರಿ ಜನ್ಮದಿನಾಚರಣೆ ನಡೆಯಿತು.