ಸಾರಾಂಶ
ಅರಸೀಕೆರೆ: ಸನಾತನ ಧರ್ಮ ಮಾನವ ಸಮಾಜಕ್ಕೆ ಭಗವಂತ ಕೊಟ್ಟ ವರ. ಈ ಧರ್ಮವು ವಿಶ್ವದೆಲ್ಲೆಡೆ ಪಸರಿಸಬೇಕು ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ಅಭಿಪ್ರಾಯಪಟ್ಟರು.ನಗರದ ಹೊರವಲಯದಲ್ಲಿರುವ ಕಸ್ತೂರಿ ಬಾ ಶಿಬಿರದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಪಠ್ಯಕ್ರಮದಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದ ಇತಿಹಾಸವನ್ನು ಮಕ್ಕಳಿಗೆ ತಿಳಿಸಬೇಕು. ರಾಮಾಯಣ, ಮಹಾಭಾರತ, ಸತ್ಯ ಹರಿಶ್ಚಂದ್ರನಂತಹ ಆದರ್ಶ ಕಥೆಗಳು ಮತ್ತು ಗಾಂಧೀಜಿ,ಶಾಸ್ತ್ರಿಯವರ ಚಿಂತನೆಗಳು ಪಠ್ಯದಲ್ಲಿರಬೇಕು. ಮಕ್ಕಳು ನಮ್ಮ ಸಂಸ್ಕೃತಿ ಮತ್ತು ಸನಾತನ ಧರ್ಮದ ಬಗ್ಗೆ ಅರಿವು ಹೊಂದಬೇಕು ಎಂದು ಅಭಿಪ್ರಾಯಪಟ್ಟರು.ಮಹಾತ್ಮ ಗಾಂಧೀಜಿ ಜನರನ್ನೆಲ್ಲ ಸಂಘಟಿಸಿ ಸ್ವಾತಂತ್ರ್ಯ ಹೋರಾಟವನ್ನು ಯಶಸ್ವಿಗೊಳಿಸಿದರು. ಇದಕ್ಕೂ ಮುನ್ನ ಅನೇಕರು ಹೋರಾಟ ನಡೆಸಿದರೂ ಏಕತೆಯ ಕೊರತೆಯಿಂದ ಯಶಸ್ಸು ಸಿಕ್ಕಿರಲಿಲ್ಲ. ಸಾಮಂತ ರಾಜರುಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕಿ ಬ್ರಿಟಿಷರು ಒಡೆದು ಆಳಿದರು. ಇಂದಿಗೂ ರಾಜಕೀಯದಲ್ಲಿ ಬ್ರಿಟಿಷರ ‘ವಿಭಜಿಸಿ ಆಳುವ’ ತತ್ವ ಮುಂದುವರಿದಿದೆ. ಆದರೆ ನಮ್ಮ ಸಂಸ್ಕೃತಿ ಮತ್ತು ಧರ್ಮವು ವಿಶ್ವಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಮಹಾತ್ಮ ಗಾಂಧೀಜಿ ಕೇವಲ ಸ್ವಾತಂತ್ರ್ಯ ಹೋರಾಟಗಾರರಲ್ಲ, ಆರ್ಥಿಕ ತಜ್ಞರೂ ಹೌದು. ರೈತರ ಆರ್ಥಿಕತೆ ಸುಧಾರಿಸಲು ಸಾಮೂಹಿಕ ಕೃಷಿಗೆ ಒತ್ತು ನೀಡಿದರು. ಜಾತಿ ಅನಿಷ್ಟವನ್ನು ತೊಡೆದು ಹಾಕಲು ಸಮಾನತೆಯ ಸಂದೇಶ ನೀಡಿದರು. ಪಕ್ಷರಹಿತ ರಾಜಕೀಯವೇ ಅವರ ತತ್ವ. ಇಂದಿಗೂ ಯುರೋಪಿನಲ್ಲಿ ಗಾಂಧಿ ಗ್ರಾಮವಿದೆ. ಅವರ ಚಿಂತನೆಗಳು ಶಾಶ್ವತ. ಅವರ ಚಿತಾಭಸ್ಮ ಇರುವ ಈ ಸ್ಥಳವೇ ಪುಣ್ಯಕ್ಷೇತ್ರ ಎಂದು ಹೇಳಿದರು.ಗಾಂಧಿ ಸ್ಮಾರಕ ಟ್ರಸ್ಟಿನ ಟ್ರಸ್ಟಿ ಅಂತಕುಮಾರ್ ಮಾತನಾಡಿ, ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಚಿಂತನೆ ಒಂದೇ ಆಗಿತ್ತು. ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಹಾಕಿಕೊಟ್ಟ ಅಡಿಪಾಯದಿಂದ ಭಾರತ ಇಂದು ಪ್ರಬಲ ರಾಷ್ಟ್ರಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಗಾಂಧಿ ಸ್ಮಾರಕ ಅಭಿವೃದ್ಧಿಗೆ ಶಾಸಕರಾದ ಶಿವಲಿಂಗೇಗೌಡರ ಪರಿಶ್ರಮ ಅಪಾರ ಎಂದು ಕೃತಜ್ಞತೆ ಸಲ್ಲಿಸಿದರು.ಕಾರ್ಯಕ್ರಮದ ಆರಂಭದಲ್ಲಿ ಗಣ್ಯರು ಗಾಂಧೀಜಿಯವರ ಚಿತಾಭಸ್ಮವಿರುವ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿಗಳಾದ ಕಾತ್ಯಾಯಿನಿ, ಕುಸುಮ ಹಾಗೂ ತಂಡವು ಶಾಂತಿಮಂತ್ರ ಹಾಗೂ ಭಜನೆ ಕಾರ್ಯಕ್ರಮ ನಡೆಸಿಕೊಟ್ಟಿತು.ಕಾರ್ಯಕ್ರಮದಲ್ಲಿ ಗೀಜೆಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ, ಶಿಕ್ಷಣಾಧಿಕಾರಿ ಮೋಹನ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಮೂರ್ತಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಯಶೋಧ, ಬಿಆರ್‌ಸಿ ಶಂಕರ್, ಬಿಸಿಯೂಟ ನಿರ್ದೇಶಕ ಯೋಗೇಶ್, ಶಿಕ್ಷಣ ಸಂಯೋಜಕ ಮಲ್ಲೇಶ್ ಸೇರಿದಂತೆ ಅನಂತ್ ಇಂಟರ್‌ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.