ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಮಣಿಪಾಲ್ ಕಾಲೇಜ್ ಆಫ್ ನರ್ಸಿಂಗ್ (ಎಂಕಾನ್) ಇದರ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಟರ್‌ಪ್ರೊಫೆಷನಲ್ ಅಡ್ವಾನ್ಸ್‌ಡ್ ವೂಂಡ್ ಕೇರ್ ವತಿಯಿಂದ ಎಎನ್‌ಆರ್‌ಎಫ್ ಅನುದಾನಿತ ಇಂಟರ್‌ಪ್ರೊಫೆಷನಲ್ ವುಂಡ್ ಕೇರ್ ಮಾಸ್ಟರಿ: ಕೊಲ್ಯಾಬೊರೇಟಿಂಗ್ ಫಾರ್ ಬೆಟರ್ ಹೀಲಿಂಗ್ ಔಟ್‌ಕಮ್ಸ್ ಎಂಬ ಕಾರ್ಯಾಗಾರವನ್ನು ಆಯೋಜಿಸಲಾಯಿತು.
ಕಾರ್ಯಾಗಾರದಲ್ಲಿ ನಾಲ್ಕು ಮುಖ್ಯ ಉಪನ್ಯಾಸಗಳು ಹಾಗೂ 18 ನೇರ ಪ್ರಾಯೋಗಿಕ (ಹ್ಯಾಂಡ್ಸ್-ಆನ್) ತರಬೇತಿ ಅಧಿವೇಶನಗಳು ನಡೆದಿದ್ದು, ಗಾಯ ನಿರ್ವಹಣೆಯಲ್ಲಿನ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಚಿಕಿತ್ಸಾ ವಿಧಾನಗಳ ಬಗ್ಗೆ ಆರೋಗ್ಯ ವೃತ್ತಿಪರರಿಗೆ ಪ್ರಾಯೋಗಿಕ ಅನುಭವ ಒದಗಿಸಲಾಯಿತು.ಕೇಂದ್ರದ ಸಂಯೋಜಕಿ ಡಾ. ಎಲ್ಸಾ ಸನಾಟೊಂಬಿ ದೇವಿ ಅವರು, ಗಾಯ ಆರೈಕೆಯ ಕ್ಷೇತ್ರದಲ್ಲಿ ಕೇಂದ್ರದ ಉದ್ದೇಶಗಳು ಹಾಗೂ ವಿವಿಧ ಉಪಕ್ರಮಗಳನ್ನು ಪರಿಚಯಿಸಿದರು. ಮುಖ್ಯ ಅತಿಥಿಯಾಗಿ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಅಸೋಸಿಯೇಟ್ ಡೀನ್ ಡಾ. ಎಸ್. ಎಸ್. ಪ್ರಸಾದ್ ಅವರು, ಉತ್ತಮ ರೋಗಿ ಫಲಿತಾಂಶಗಳನ್ನು ಸಾಧಿಸಲು ವಿವಿಧ ಆರೋಗ್ಯ ವೃತ್ತಿಪರರ ತಂಡದ ಸಹಕಾರ ಮತ್ತು ಸಹಾನುಭೂತಿಯ ಆರೈಕೆಯ ಮಹತ್ವವನ್ನು ಒತ್ತಿ ಹೇಳಿದರು. ಅಮೆರಿಕನ್ ಅಕಾಡೆಮಿ ಆಫ್ ನರ್ಸಿಂಗ್ ನ ಪ್ರತಿಷ್ಠಿತ ಫೆಲೋ ಗೌರವಕ್ಕೆ ಪಾತ್ರರಾದ ಎಂಕಾನ್ ಡೀನ್ ಡಾ. ಜುಡಿತ್ ಎ. ನೊರೊನ್ಹಾ ಅವರನ್ನು ಸನ್ಮಾನಿಸಲಾಯಿತು.
ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ ಉಪಕುಲಪತಿ ಮೇ. ಡಾ. ಮ್ಯಾಥ್ಯೂಸ್ ಜೇಕಬ್, ಮುಂಬೈನ ಕೋರೆ ಅಡಿಟಿವ್ಸ್ ಮ್ಯಾನುಫ್ಯಾಕ್ಚರಿಂಗ್ ಮತ್ತು ಮೆಡಿಕಲ್ ರೀಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಚೈತನ್ಯ ದೋಷಿ, ಮಾಹೆಯ ಜೈವಿಕ ಚಿಕಿತ್ಸಾ ಸಂಶೋಧನಾ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಎಸ್. ವಿ. ಕೀರ್ತನಾಶ್ರೀ ಅವರು ಮಾತನಾಡಿದರು.ದೇಶದ ಮೊದಲ ಕೇಂದ್ರ: ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಟರ್‌ಪ್ರೊಫೆಷನಲ್ ಅಡ್ವಾನ್ಸ್‌ಡ್ ವೂಂಡ್ ಕೇರ್ ಸುಧಾರಿತ ಗಾಯದ ಆರೈಕೆಗೆ ಮೀಸಲಾಗಿರುವ ದೇಶದ ಮೊದಲ ನರ್ಸ್ ನೇತೃತ್ವದ ಕೇಂದ್ರವಾಗಿದೆ.