ಹಿರೇಕೆರೂರು: ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯದ ಸಭಾಭವನದಲ್ಲಿ ಆಡಳಿತಾಧಿಕಾರಿ, ತಹಸೀಲ್ದಾರ್‌ ಎಂ. ರೇಣುಕಾ ಅವರು ಪಟ್ಟಣ ಪಂಚಾಯಿತಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು.

ಈ ವೇಳೆ ಮಾತನಾಡಿದ ಅವರು, ಪಟ್ಟಣದ ಎಲ್ಲ ಸಾರ್ವಜನಿಕರು ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಆದಾಯದ ಮೂಲ ಹೆಚ್ಚಿಸಿಕೊಂಡು ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನದೊಂದಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವಂತೆ ಸಿಬ್ಬಂದಿಗೆ ಸೂಚಿಸಿದರು.

ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ್ ಎನ್.ಟಿ. ಬಜೆಟ್ ಮಂಡನೆಯ ಮಾಹಿತಿ ನೀಡುತ್ತಾ, ಸ್ಥಳೀಯ ಸಂಸ್ಥೆಯಿಂದ ಅನುದಾನದ ಸಂಗ್ರಹಣೆ ಭಾಗವಾಗಿ ನೀರು ಬಳಕೆ ಶುಲ್ಕದಿಂದ ₹65 ಲಕ್ಷ, ಆಸ್ತಿ ತೆರಿಗೆ ವಸೂಲಾತಿಯಿಂದ ₹92 ಲಕ್ಷ, ವಾಣಿಜ್ಯ ಮಳಿಗೆಗಳಿಂದ ₹26 ಲಕ್ಷ, ವ್ಯಾಪಾರ ಪರವಾನಗಿಯಿಂದ ₹4 ಲಕ್ಷ, ಸಂತೆ ಮತ್ತು ಮಾರುಕಟ್ಟೆ ಹರಾಜುಗಳಿಂದ ₹10 ಲಕ್ಷ, ಇತರ ಮೂಲಗಳಿಂದ ₹15 ಲಕ್ಷ, ಹೀಗೆ ಸ್ವಂತ ಮೂಲದಿಂದ ಆದಾಯ ಸಂಗ್ರಹಿಸುವ ಗುರಿ ಹೊಂದಲಾಗಿದೆ. ರಾಜ್ಯ ಹಣಕಾಸು ಯೋಜನೆಯಡಿ ₹4 ಲಕ್ಷ, ವೇತನ ನಿಧಿ ₹1.90 ಕೋಟಿ, ವಿದ್ಯುತ್ ಬಿಲ್ ಪಾವತಿ ಅನುದಾನ ₹1.82 ಕೋಟಿ, ಬರ ಪರಿಹಾರದಿಂದ ಹಾಗೂ ಎಸ್.ಎಫ್.ಸಿ. ಕುಡಿಯುವ ನೀರಿನ ಅನುದಾನದಿಂದ ₹10, ರಾಜಸ್ವ ಅನುದಾನವನ್ನು ರಾಜ್ಯ ಸರ್ಕಾರದಿಂದ ನಿರೀಕ್ಷಿಸಲಾಗಿದೆ. ಕೇಂದ್ರ ಹಣಕಾಸು ಆಯೋಗದಿಂದ ಅನುದಾನ (16ನೇ ಹಣಕಾಸು) ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಬಿಡುಗಡೆಯಾಗುವ ಅನುದಾನವನ್ನು ಒಟ್ಟು ₹1.59 ಕೋಟಿ ಎಂದು ಅಂದಾಜಿಸಲಾಗಿದೆ. ಹೀಗೆ ಎಲ್ಲ ಮೂಲಗಳಿಂದ ₹7.98 ಕೋಟಿ ಬರುವ ಅನುದಾನದಲ್ಲಿ, ₹7.96 ಕೋಟಿ ಖರ್ಚಿಗೆ ಮೀಸಲಿರಿಸಿದ್ದು, ಇದರಲ್ಲಿ ₹2 ಲಕ್ಷ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಇತರ ಬಡ ಜನಾಂಗದ ಮತ್ತು ಅಂಗವಿಕಲರ ಶ್ರೇಯೋಭಿವೃದ್ಧಿಗಾಗಿ ಅನುದಾನ ಕಾಯ್ದಿರಿಸಿಕೊಳ್ಳಲಾಗಿರುತ್ತದೆ. ಹೀಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುಧಾರಣೆಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗಾಗಿ ಅವಶ್ಯವಿರುವ ಹಣಕಾಸನ್ನು ವಿವಿಧ ಮೂಲಗಳಿಂದ ಸಂಗ್ರಹಿಸಲು ಪ್ರಯತ್ನಿಸಲಾಗುವುದು ಎಂದರು.

ಸಹಾಯಕ ಅಧಿಕಾರಿ ಸಿ.ಎಂ. ಪುಟ್ಟಕ್ಕಳವರ, ರಮೇಶ ತಿರಕಪ್ಪನವರ, ಪ್ರಮೋದ ಜಲ್ಲಾವರ, ರಾಜೇಶ್ವರಿ ಎಂ.ಎಚ್., ದೀಪಾ ಸವಣೂರ, ಮಮತಾ ಪಾಟೀಲ, ನಾಗರಾಜ ಶಾಮನೂರ, ಬಿ.ಎಂ. ಶಾಪೋಜ್, ಗೀತಾ ಕಾಯಕದ, ಜಯಶೀಲಾ ಅಜ್ಜಪ್ಪನವರ, ನಿಂಗರಾಜ ನಾಯ್ಕರ್ ಇದ್ದರು.