ಪೌರ ಚಾಲಕರನ್ನು ಕಾಯಂಗೊಳಿಸಿ: ಸಚಿವ ಮಂಕಾಳ ವೈದ್ಯಗೆ ಮನವಿ

| Published : Feb 11 2024, 01:46 AM IST / Updated: Feb 11 2024, 04:01 PM IST

ಪೌರ ಚಾಲಕರನ್ನು ಕಾಯಂಗೊಳಿಸಿ: ಸಚಿವ ಮಂಕಾಳ ವೈದ್ಯಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

1ರಿಂದ 24 ವರ್ಷಗಳಿಂದ ಚಾಲಕರಾಗಿ ದುಡಿಯುತ್ತಿದ್ದು ಈ ತನಕ ಯಾವುದೇ ಸರ್ಕಾರ ಕಾಯಂಗೊಳಿಸಲು ಅಥವಾ ನೇರ ಪಾವತಿಗೆ ಪರಿಗಣಿಸಿಲ್ಲ. ಒಂದು ವೇಳೆ ಪರಿಗಣಿಸಿದರೆ ಜಿಎಸ್‌ಟಿ ಉಳಿತಾಯದ ಜತೆಗೆ ನಮಗೆ ಸೇವಾಭದ್ರತೆ ದೊರಕಿ ಏಜೆನ್ಸಿಗಳ ಕಿರುಕುಳ ತಪ್ಪಲಿದೆ.

ಹೊನ್ನಾವರ: ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ ಚಾಲಕರನ್ನು (ಪೌರ ಚಾಲಕರು) ಕಾಯಂ ನೌಕರರಾಗಿ ಅಥವಾ ನೇರ ಪಾವತಿಗೆ ಒಳಪಡಿಸಬೇಕೆಂದು ಜಿಲ್ಲೆಯ ಪೌರ ಚಾಲಕರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

1ರಿಂದ 24 ವರ್ಷಗಳಿಂದ ಚಾಲಕರಾಗಿ ದುಡಿಯುತ್ತಿದ್ದು ಈ ತನಕ ಯಾವುದೇ ಸರ್ಕಾರ ಕಾಯಂಗೊಳಿಸಲು ಅಥವಾ ನೇರ ಪಾವತಿಗೆ ಪರಿಗಣಿಸಿಲ್ಲ. ಒಂದು ವೇಳೆ ಪರಿಗಣಿಸಿದರೆ ಜಿಎಸ್‌ಟಿ ಉಳಿತಾಯದ ಜತೆಗೆ ನಮಗೆ ಸೇವಾಭದ್ರತೆ ದೊರಕಿ ಏಜೆನ್ಸಿಗಳ ಕಿರುಕುಳ ತಪ್ಪಲಿದೆ. ಈಗಾಗಲೆ ಎರಡು ವರ್ಷ ಮೇಲ್ಪಟ್ಟ ಹಲವು ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. 

ಅವರ ಜತೆಯಲ್ಲಿ ಇದ್ದು ಅವರ ಸರಿ ಸಮಾನವಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿರುವ ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷ ಮಾಡುತ್ತಿದ್ದಾರೆ. ಅಧಿಕಾರಿಗಳ ತಾರತಮ್ಯ ನೀತಿಯಿಂದಾಗಿ ನಮ್ಮ ಜೀವನ ಡೋಲಾಯಮಾನವಾಗಿದೆ. ನಾವೆಲ್ಲರು ಮುನ್ಸಿಪಾಲ್ ಕಾಯ್ದೆ ಪ್ರಕಾರ ಪೌರ ಕಾರ್ಮಿಕರೆ ಆಗಿದ್ದೇವೆ. 

ನಗರಾಭಿವೃದ್ಧಿ ಇಲಾಖೆಯು ಬಡ ಪೌರ ಚಾಲಕರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಘನ ತ್ಯಾಜ್ಯ ಕಸ ವಿಲೇವಾರಿ ಮಾಡುವ ವಾಹನ ಚಾಲಕರಾಗಿದ್ದು, ಕನಿಷ್ಠ ಸಂಬಳ ಪಡೆದು, ನಿಕೃಷ್ಟ ಜೀವನ ನಡೆಸುತ್ತಿದ್ದೇವೆ. 

ನಾವು ಇದೇ ವೃತ್ತಿ ನಂಬಿ ಕರ್ತವ್ಯ ನಿಷ್ಠೆಯಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದರಿಂದ ತಮ್ಮನ್ನು ಕಾಯಂ ಮಾಡಬೇಕು. ನಮ್ಮ ಕಣ್ಣೀರು ಒರೆಸುವ ಕಾರ್ಯವಾಗಬೇಕು ಎಂದು ಸಚಿವರಿಗೆ ಮನವಿ ಸಲ್ಲಿದ್ದಾರೆ.