ಡಾ.ಅಂಬೇಡ್ಕರ್‌, ಸಂವಿಧಾನ ಅರಿವು ಎಲ್ಲರಲ್ಲೂ ಮುಖ್ಯ

| Published : Feb 11 2024, 01:45 AM IST

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಧನೆ ಹಾಗೂ ಅವರು ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದರ ಜೊತೆಗೆ ಸಂವಿಧಾನದ ಬಗ್ಗೆ ಜಾಗೃತಿ ಹೊಂದಬೇಕು. ಇತಿಹಾಸದ ಅರಿವು ಇದ್ದರೆ ಸಾಧನೆ ಮಾಡುವುದಕ್ಕೆ ಮತ್ತು ದೇಶವನ್ನು ಅಭಿವೃದ್ಧಿಯತ್ತ ಒಯ್ಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರವು ಸಂವಿಧಾನದ ಮಹತ್ವವನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಸೊರಬದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಸೊರಬ

ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಧನೆ ಹಾಗೂ ಅವರು ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವುದರ ಜೊತೆಗೆ ಸಂವಿಧಾನದ ಬಗ್ಗೆ ಜಾಗೃತಿ ಹೊಂದಬೇಕು ಎಂದು ಗ್ರಾಪಂ ಉಪಾಧ್ಯಕ್ಷ ಎಂ.ಬಿ. ರೇಣುಕಾಪ್ರಸಾದ್ ಹೇಳಿದರು.

ತಾಲೂಕಿನ ಚಂದ್ರಗುತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಚಂದ್ರಗುತ್ತಿ ಗ್ರಾಮ ಪಂಚಾಯಿತಿ ವತಿಯಿಂದ ಭಾರತ ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆ ಪ್ರಯುಕ್ತ ಸಂವಿಧಾನ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತಿಹಾಸದ ಅರಿವು ಇದ್ದರೆ ಸಾಧನೆ ಮಾಡುವುದಕ್ಕೆ ಮತ್ತು ದೇಶವನ್ನು ಅಭಿವೃದ್ಧಿಯತ್ತ ಒಯ್ಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರವು ಸಂವಿಧಾನದ ಮಹತ್ವವನ್ನು ಜನತೆಗೆ ತಿಳಿಸುವ ದೃಷ್ಟಿಯಿಂದ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಪ್ರತಿಯೊಬ್ಬರೂ ಕಾನೂನು ಬದ್ಧವಾಗಿ ಸಂವಿಧಾನವನ್ನು ಪಾಲಿಸಬೇಕು. ಅದರ ಮಹತ್ವವನ್ನು ಅರಿತುಕೊಂಡು ಜಾತ್ಯತೀತ ಮನೋಭಾವನೆಯಿಂದ ನಾವೆಲ್ಲ ಭಾರತೀಯರು ಎಂದು ಒಗ್ಗಟ್ಟಿನಿಂದ ಅಭಿವೃದ್ಧಿ ಪಥದತ್ತ ಸಾಗಿದಾಗ ಮಾತ್ರ ದೇಶದ ಕೀರ್ತಿಯನ್ನು ಹೆಚ್ಚಿಸಬಹುದು ಎಂದು ಅಭಿಪ್ರಾಯಪಟ್ಟರು.

ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಸಂವಿಧಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ವೇದಿಕೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಶ್ರೀ ರೇಣುಕಾಂಬ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್. ಶಶಿಕುಮಾರ್ ಸಂವಿಧಾನ ಪೀಠಿಕೆ ಬಗ್ಗೆ ಉಪನ್ಯಾಸ ನೀಡಿದರು.

ಈ ಸಂದರ್ಭ ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಸಂವಿಧಾನ ಜಾಗೃತಿ ರಥವನ್ನು ಮಹಿಳೆಯರು ಪೂರ್ಣಕುಂಭ ಮೂಲಕ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಮುಂಭಾಗದಿಂದ ಮುಖ್ಯ ರಸ್ತೆ ಮಾರ್ಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣವರೆಗೆ ಜಾಥಾ ನಡೆಯಿತು.

ಗ್ರಾಪಂ ಸದಸ್ಯರಾದ ಎಂ.ಪಿ. ರತ್ನಾಕರ್, ರಾಜಶೇಖರ್, ಲಕ್ಷ್ಮೀ ಚಂದ್ರಪ್ಪ, ಶ್ರೀಮತಿ ಚಂದ್ರಕಾಂತ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ನಾರಾಯಣಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು, ತಾಪಂ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ಸೇರಿದಂತೆ ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಜರಿದ್ದರು.

- - - -09ಕೆಪಿಸೊರಬ03:

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ ಉದ್ಘಾಟಿಸಿದರು.