ನಾಳೆಯಿಂದ ಬಿಜೆಪಿ ‘ಗ್ರಾಮ ಪರಿಕ್ರಮ ಯಾತ್ರೆ’

| Published : Feb 11 2024, 01:45 AM IST / Updated: Feb 11 2024, 01:46 AM IST

ಸಾರಾಂಶ

ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ದೇಶಾದ್ಯಂತ ರೈತ ಮೋರ್ಚಾ ವತಿಯಿಂದ ‘ಗ್ರಾಮ ಪರಿಕ್ರಮ ಯಾತ್ರೆ’ಯನ್ನು ಇದೇ 12ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್‌ ನಡಹಳ್ಳಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ದೇಶಾದ್ಯಂತ ರೈತ ಮೋರ್ಚಾ ವತಿಯಿಂದ ‘ಗ್ರಾಮ ಪರಿಕ್ರಮ ಯಾತ್ರೆ’ಯನ್ನು ಇದೇ 12ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ಪಾಟೀಲ್‌ ನಡಹಳ್ಳಿ ಹೇಳಿದ್ದಾರೆ.

ಶನಿವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇದೇ ಫೆ. 12ರಂದು ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಗ್ರಾಮ ಪರಿಕ್ರಮ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ದೇಶದ ಎಲ್ಲ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆ ನೆರವೇರಲಿದೆ. ಎಲ್ಇಡಿ ಮೂಲಕ ರಾಷ್ಟ್ರೀಯ ಅಧ್ಯಕ್ಷರ ಉದ್ಘಾಟನೆ ಕಾರ್ಯಕ್ರಮದ ಪ್ರಸಾರ ಇರಲಿದೆ ಎಂದು ತಿಳಿಸಿದರು.

ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ್‌ಕುಮಾರ್ ಚಾಹರ್ ಅವರು ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲು ತಿಳಿಸಿದ್ದು, ರಾಜ್ಯದ 4-5 ನಗರ ಪ್ರದೇಶ ಹೊರತುಪಡಿಸಿ ರಾಜ್ಯದ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ಪದಾಧಿಕಾರಿಗಳು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲು ಗೋಪೂಜೆ ಮಾಡಲಾಗುವುದು. 30 ದಿನಗಳ ಕಾಲ ಪರಿಕ್ರಮ ಯಾತ್ರೆ ಇರುತ್ತದೆ. ಪ್ರತಿದಿನ ಪ್ರತಿ ಜಿಲ್ಲೆಯ 5 ಹಳ್ಳಿಗಳಿಗೆ ಪ್ರವಾಸ ಮಾಡಲಾಗುವುದು. ಭವಿಷ್ಯದಲ್ಲಿ ನಮ್ಮ ಸರ್ಕಾರದ ಯೋಜನೆ ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆಗಳನ್ನು ಅಳವಡಿಸಿಕೊಳ್ಳುವುದೇ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ ಎಂದರು. ಈ ವೇಳೆ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ರುದ್ರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.