ಎಸ್ಸೆಸ್ ಮಲ್ಲಿಕಾರ್ಜುನಗೆ ಡಿಸಿಎಂ ಮಾಡಿ: ಎಸ್ಸೆಸ್ಸೆಂ ಅಭಿಮಾನಿ ಬಳಗ

| Published : Oct 30 2025, 01:15 AM IST

ಎಸ್ಸೆಸ್ ಮಲ್ಲಿಕಾರ್ಜುನಗೆ ಡಿಸಿಎಂ ಮಾಡಿ: ಎಸ್ಸೆಸ್ಸೆಂ ಅಭಿಮಾನಿ ಬಳಗ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ಸಿನ ಯುವ ನಾಯಕ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರ, 16 ಸಾವಿರಕ್ಕೂ ಅಧಿಕ ಆಶ್ರಯ ಮನೆ ನಿರ್ಮಿಸಿದ, ಮಧ್ಯ ಕರ್ನಾಟಕ ದಾವಣಗೆರೆಗೆ ಹೊಸ ರೂಪವನ್ನೇ ಕೊಟ್ಟ ಎಸ್.ಎಸ್.ಮಲ್ಲಿಕಾರ್ಜುನರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಎಸ್ಸೆಸ್ ಮಲ್ಲಿಕಾರ್ಜುನ್‌ ಅಭಿಮಾನಿ ಬಳಗ, ಕಾಂಗ್ರೆಸ್ಸಿನ ಮುಖಂಡರು, ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಕಾಂಗ್ರೆಸ್ಸಿನ ಯುವ ನಾಯಕ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವರ, 16 ಸಾವಿರಕ್ಕೂ ಅಧಿಕ ಆಶ್ರಯ ಮನೆ ನಿರ್ಮಿಸಿದ, ಮಧ್ಯ ಕರ್ನಾಟಕ ದಾವಣಗೆರೆಗೆ ಹೊಸ ರೂಪವನ್ನೇ ಕೊಟ್ಟ ಎಸ್.ಎಸ್.ಮಲ್ಲಿಕಾರ್ಜುನರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಎಸ್ಸೆಸ್ ಮಲ್ಲಿಕಾರ್ಜುನ್‌ ಅಭಿಮಾನಿ ಬಳಗ, ಕಾಂಗ್ರೆಸ್ಸಿನ ಮುಖಂಡರು, ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದರು.

ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಳಗದ ವಿ.ಗಣೇಶ ಕೇರಂ, ಬಿ.ಎಚ್.ಚೈತನ್ಯಕುಮಾರ ಮೇಸ್ತ್ರಿ, ನಾಗೇಂದ್ರ ಬಂಡೀಕರ್, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ಲಕ್ಷಣ ಕಾಣುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ಸಿಕ್ಕು, ಸಂಪುಟ ಪುನಾರಚನೆಯಾದರೆ ಎಸ್ಸೆಸ್ ಮಲ್ಲಿಕಾರ್ಜುನರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದರು.

ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ 4 ಸಲ ಶಾಸಕರಾಗಿ ಆಯ್ಕೆಯಾದ ಎಸ್ಸೆಸ ಮಲ್ಲಿಕಾರ್ಜುನ ಎಸ್ಸೆಂ ಕೃಷ್ಣ ಸರ್ಕಾರದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಸಚಿವರಾಗಿ ಮೊದಲ ಅವದಿಯಲ್ಲೇ ಇಡೀ ರಾಜ್ಯ, ರಾಷ್ಟ್ರದ ಗಮನ ಸೆಳೆದಿದ್ದರು. ದಾವಣಗೆರೆಯನ್ನು ಮಾದರಿ ನಗರವನ್ನಾಗಿಸಿದವರು. ಸೂರಿಲ್ಲದ ಜನರಿಗಾಗಿ 16 ಸಾವಿರಕ್ಕೂ ಅದಿಕ ಆಶ್ರಯ ಮನೆ ಕಟ್ಟಿದರು. ಕುಂದುವಾಡ ಕೆರೆ, ಟಿವಿ ಸ್ಟೇಷನ್ ಕೆರೆಗೆ ಕಾಯಕಲ್ಪ, ಸಿಸಿ ರಸ್ತೆಗಳ ನಿರ್ಮಾಣ, ಗಾಜಿನ ಮನೆ ನಿರ್ಮಾಣ ಹೀಗೆ ನಗರ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಎಸ್ಸೆಸ್ ಮಲ್ಲಿಕಾರ್ಜುನ 1998ರ ಉಪ ಚುನಾವಣೆ, 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಏಷ್ಯಾದಲ್ಲೇ ಆಕರ್ಷಕವಾದ ಗಾಜಿನ ಮನೆ ನಿರ್ಮಿಸಿ, ಪ್ರವಾಸಿ ತಾಣವಾಗಿ ಮಾರ್ಪಡಿಸಿದ್ದಾರೆ. ಜಿಲ್ಲಾ ಕೇಂದ್ರದ ಬಹುತೇಕ ಎಲ್ಲಾ ರಸ್ತೆಗಳನ್ನು ಸಿಮೆಂಟ್ ರಸ್ತೆಗಳನ್ನಾಗಿಸಿ, ನಗರ ಸೌಂದರ್ಯೀಕರಣಕ್ಕೆ ಹೆಚ್ಚು ಮಹತ್ವ ನೀಡಿದರು. ಜಿಲ್ಲಾ ಕೇಂದ್ರ ನೀರಿನ ಬವಣೆಯಿಂದ ಮುಕ್ತವಾಗಿದ್ದರೆ ಕುಂದುವಾಡ ಕೆರೆಗೆ ಕಾಯಕಲ್ಪ ನೀಡಿದ್ದೇ ಕಾರಣ. 2013 ಮತ್ತು 2023ರಲ್ಲಿ ದಾವಣಗೆರೆ ಮತದಾರರು ಪ್ರೀತಿಯಿಂದ ಗೆಲ್ಲಿಸಿದ್ದು, ಜನಾನುರಾಗಿ, ಅಭಿವೃದ್ಧಿ ಪರ ಸಚಿವರಾಗಿ ಎಸ್ಸೆಸ್ ಮಲ್ಲಿಕಾರ್ಜುನ ಗಮನ ಸೆಳೆಯುತ್ತಾರೆ ಎಂದು ಅವರು ಹೇಳಿದರು.

ಸರ್ವ ಜಾತಿ-ಧರ್ಮೀಯರ ಜತೆಗೆ ನೇರ ಸಂಪರ್ಕ, ಆತ್ಮೀಯತೆ ಹೊಂದಿರುವ ಎಸ್ಸೆಸ್ ಮಲ್ಲಿಕಾರ್ಜುನ ಅಭಿವೃದ್ಧಿ ಬಗ್ಗೆ ಚಿಂತನಾಶೀಲ ವ್ಯಕ್ತಿತ್ವ ಹೊಂದಿದ್ದಾರೆ. ದಾವಣಗೆರೆ ನಗರ, ಜಿಲ್ಲೆಯು ಎಸ್ಸೆಸ್ ಮಲ್ಲಿಕಾರ್ಜುನರ ಸಾರಥ್ಯದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದರು.

ಮಧ್ಯ ಕರ್ನಾಟಕಕ್ಕೆ ರಾಜಕೀಯ ಪಕ್ಷಗಳು ಅಷ್ಟಾಗಿ ಉನ್ನತ ಸ್ಥಾನಮಾನ ನೀಡಿಲ್ಲ. ಹಾಗಾಗಿ ಉಪ ಮುಖ್ಯಮಂತ್ರಿ ಸ್ಥಾನವನ್ನು ಎಸ್ಸೆಸ್ ಮಲ್ಲಿಕಾರ್ಜುನರಿಗೆ ನೀಡುವ ಮೂಲಕ ಪಕ್ಷ ನಿಷ್ಟೆಗೆ ಪ್ರೋತ್ಸಾಹಿಸಬೇಕು ಎಂದು ಅವರು ವಿ.ಕೇರಂ ಗಣೇಶ, ನಾಗೇಂದ್ರ ಬಂಡೀಕರ್, ಚೈತನ್ಯಕುಮಾರ ಮೇಸ್ತ್ರಿ ಮನವಿ ಮಾಡಿದರು.

ಎಸ್.ಮಾನು, ಗೋಣೆಪ್ಪ, ಆದಾಪುರ ನಾಗರಾಜಪ್ಪ, ಮೈಲಾರಪ್ಪ, ಕೆ.ಎಸ್.ವಿಜಯಕುಮಾರ, ಗುರು, ವಿಶ್ವಕರ್ಮ ಸಮಾಜದ ಮುಖಂಡ ಬಿ.ವಿ.ರಾಜಶೇಖರ, ಅಕ್ಬರ್ ಬಾಷಾ ಇತರರು ಇದ್ದರು.

ಸುದ್ದಿಗೋಷ್ಟಿ ನಂತರ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಎಸ್ಸೆಸ್ ಮಲ್ಲಿಕಾರ್ಜುನ್‌ ರಾಜ್ಯದ ಡಿಸಿಎಂ ಆಗಲೆಂದು ಪ್ರಾರ್ಥಿಸಿ, ಪೂಜೆ ಸಲ್ಲಿಸುವ ಮೂಲಕ ದೇವಸ್ಥಾನದ ಅಂಗಳದಲ್ಲಿ 101 ತೆಂಗಿನ ಕಾಯಿಗಳನ್ನು ಒಡೆಯುವ ಮೂಲಕ ವಿ.ಕೇರಂ ಗಣೇಶ, ಬಿ.ಎಚ್.ಚೈತನ್ಯಕಮಾರ ಮೇಸ್ತ್ರಿ, ನಾಗೇಂದ್ರ ಬಂಡೀಕರ್, ಎಸ್.ಮಾನು, ಗೋಣೆಪ್ಪ, ಆದಾಪುರ ನಾಗರಾಜಪ್ಪ, ಮೈಲಾರಪ್ಪ, ಕೆ.ಎಸ್.ವಿಜಯಕುಮಾರ, ಗುರು, ವಿಶ್ವಕರ್ಮ ಸಮಾಜದ ಮುಖಂಡ ಬಿ.ವಿ.ರಾಜಶೇಖರ, ಅಕ್ಬರ್ ಬಾಷಾ ಇತರರು ಘೋಷಣೆ ಕೂಗಿದರು.