ಮಾನವ ಸರಪಳಿ ಕಾರ್ಯಕ್ರಮ ಯಶಸ್ವಿಗೊಳಿಸಿ

| Published : Sep 10 2024, 01:38 AM IST

ಸಾರಾಂಶ

ದೇವದುರ್ಗ ತಾಪಂ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವ ಸಿದ್ಧತಾ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ದೇವದುರ್ಗ

ರಾಜ್ಯದಲ್ಲಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಸೆ.15ರಂದು ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಹಾಯಕ ಆಯುಕ್ತೆ ಮಹಬೂಬಿ ತಿಳಿಸಿದರು.

ಸ್ಥಳೀಯ ತಾಪಂ ಸಭಾಂಗಣದಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಲಿಂಗಸಗೂರು ಮತ್ತು ದೇವದುರ್ಗ ತಾಲೂಕುಗಳಲ್ಲಿ ಮಾತ್ರ ಮಾನವ ಸರಪಳಿ ಮಾರ್ಗವನ್ನು ಸೂಚಿಸಲಾಗಿದೆ ಎಂದು ತಿಳಿಸಿದರು.

ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದಿಂದ ಕೊಪ್ಪರ, ದೇವದುರ್ಗ, ಅಮರಾಪೂರ ಕ್ರಾಸ್, ಜಾಲಹಳ್ಳಿ, ಚಿಂಚೋಡಿ ಹಾಗೂ ತಿಂಥಣಿ ಸೇತುವೆ ವರೆಗೆ ಸುಮಾರು 60 ಕಿಮೀ ಏಕಕಾಲಕ್ಕೆ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದ್ದು, ಪ್ರಜಾಪ್ರಭುತ್ವ ದೇಶದ ಪ್ರಜೆಗಳಾದ ನಾವೆಲ್ಲರೂ ಕಡ್ಡಾಯವಾಗಿ ಪಾಲ್ಗೊಂಡು ತಮ್ಮ ತಮ್ಮ ಗ್ರಾಮಗಳಲ್ಲಿಯೇ ಸರಪಳಿ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಆಶಾ, ಅಂಗವಾಡಿ ಕಾರ್ಯಕರ್ತರು, ಗ್ರಾಪಂ, ಎಪಿಎಂಸಿ, ಟಿಎಪಿಸಿಎಂಸ್ ಆಡಳಿತ ಮಂಡಳಿ, ಎಲ್ಲಾ ಶಾಲಾ ಸರ್ಕಾರಿ ಮತ್ತು ಖಾಸಗಿ ಶಾಲಾ-ಕಾಲೇಜು, ವಸತಿ ನಿಲಯಗಳ, ವಸತಿ ಶಾಲೆಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲ್ಗೊಳ್ಳಲು ಶಿಕ್ಷಣ ಇಲಾಖೆ ಪ್ರತ್ಯೇಕ ಯೋಜನೆ ತಯಾರಿಸಲು ತಿಳಿಸಿದರು.

5 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳನ್ನು ಮಾತ್ರ ಕಾರ್ಯಕ್ರಮಕ್ಕೆ ಕರೆ ತರಬೇಕು. ಎಲ್ಲಾ ಗ್ರಾಪಂಗಳಲ್ಲಿ ಪ್ರತ್ಯೇಕ ಪೂರ್ವ ಸಿದ್ಧತಾ ಸಭೆ ಮಾಡಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಪ್ರತಿ 500 ಮೀಟರ್, 1 ಕಿಮೀ ಹಾಗೂ 5 ಕಿಮೀ ರಸ್ತೆ ಮಾರ್ಗದಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಲೋಕೋಪಯೋಗಿ ಇಲಾಖೆಯು ರಸ್ತೆ ಮಾರ್ಗಸೂಚಿ ತಯಾರಿಬೇಕು ಹಾಗೂ ಜಿಪಂ ಕುಡಿಯುವ ನೀರಿನ ವಿಭಾಗ ಮಾರ್ಗ ಮಧ್ಯೆ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆಗೆ 5 ಅಂಬ್ಯುಲೆನ್ಸ್ ನೀಡಲು ಸೂಚಿಸಿದ್ದು, ಅಗತ್ಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲು ಕೋರಿದರು.

ಸಭೆಯಲ್ಲಿ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿ, ತಾಪಂ ಇಒ ಬಸವರಾಜ ಹಟ್ಟಿ, ಬಿಇಒ ಸುಖದೇವ, ಸಿಡಿಪಿಒ ಮಾಧವಾನಂದ, ಎಇಗಳಾದ ಪರಮೇಶ್ವರಪ್ಪ, ಶಿವಾಜಿರಾವ್, ಸಂಘಟನೆ ಪದಾಧಿಕಾರಿಗಲಾದ ಶಿವಪ್ಪ ಪಲಕಮರಡಿ, ಶಿವುಕುಮಾರ, ಮಹಾಂತೇಶ ಹಾಗೂ ಎಲ್ಲಾ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಪಾಲ್ಗೊಂಡಿದ್ದರು.