ಸಾರಾಂಶ
ಕಾರವಾರ: ಇಂದಿನ ಧಾವಂತದ ಬದುಕಿನಲ್ಲಿ ಕಾಡುವ ಹಲವು ರೀತಿಯ ಒತ್ತಡಗಳ ನಿವಾರಣೆಯ ಜತೆಗೆ ಉತ್ತಮ ಆರೋಗ್ಯ ಕೂಡಾ ಲಭಿಸುವುದರಿಂದ ಪ್ರತಿಯೊಬ್ಬರೂ ನಿತ್ಯ ಯೋಗಾಭ್ಯಾಸ ಮಡುವ ಮೂಲಕ, ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.
ಶುಕ್ರವಾರ ಕಾಜುಭಾಗದ ಪೊಲೀಸ್ ಕಲ್ಯಾಣಮಂಟಪದಲ್ಲಿ ವಿವಿಧ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮನುಷ್ಯನಿಗೆ ಬಾಹ್ಯ ಸೌಂದರ್ಯದಷ್ಟೇ, ಆಂತರಿಕ ಸೌಂದರ್ಯವೂ ಮುಖ್ಯವಾಗಿರುತ್ತದೆ. ಇವೆರಡನ್ನು ಕಾಪಾಡಿಕೊಂಡು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಹಾಗೂ ಏಕಾಗ್ರತೆಯಿಂದ ಇರಲು ಮತ್ತು ಶರೀರದ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಯೋಗವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಯೋಗ ಬಲ್ಲವನಿಗೆ ರೋಗವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ 5ರಿಂದ 10 ನಿಮಿಷವಾದರೂ ಯೋಗ ಮಾಡಬೇಕು. ಇದರಿಂದ ಉತ್ತಮವಾದ ಆರೋಗ್ಯಕರ ಜೀವನವನ್ನು ನಡೆಸಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಈಶ್ವರ್ ಕುಮಾರ್ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಎನ್., ಅಪರ ಜಿಲ್ಲಾಧಿಕಾರಿ ಪ್ರಕಾಶ ರಜಪೂತ್ ಮತ್ತಿತರರು ಇದ್ದರು. ಯೋಗ ಶಿಕ್ಷಕ ಗಣಪತಿ ಹೆಗಡೆ ಅವರು ಭಾಗವಹಿಸಿದ್ದ ಸಾರ್ವಜನಿಕರಿಗೆ ಪ್ರಾತ್ಯಕ್ಷಿಕೆ ಮೂಲಕ ಯೋಗಾಭ್ಯಾಸ ಮಾಡಿಸಿದರು. ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕವಿತಾ ಪ್ರಾಣಾಯಾಮ ಮತ್ತು ಧ್ಯಾನದ ಕುರಿತು ತರಬೇತಿ ನೀಡಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ ಸ್ವಾಗತಿಸಿದರು.ವಿವಿಧ ಆಸನ ಮಾಡಿದ ಅಧಿಕಾರಿಗಳು: ಜಿಲ್ಲಾಧಿಕಾರಿ, ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ವಿವಿಧ ಆಸನಗಳನ್ನು ಅಭ್ಯಾಸ ಮಾಡುವ ಮೂಲಕ ಗಮನ ಸೆಳೆದರು.