ಸಾರಾಂಶ
ಮಹಾಲಿಂಗಪುರ ಮಹಾಲಿಂಗೇಶ್ವರರ ದೇವಸ್ಥಾನದಲ್ಲಿ ಜರುಗಿದ ಅಷ್ಟಲಿಂಗ ಪರುವ (ಪರ್ವ) ವೈವೇದ್ಯ ಪೂಜೆಯನ್ನು ರಾಜೇಂದ್ರ ಶ್ರೀಗಳು ನೆರವೇರಿಸಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶತಮಾನಗಳ ಹಿಂದೆ ದುಷ್ಟಶಕ್ತಿಗಳ ಪ್ರಭಾವದಿಂದ ರೋಗ ರುಜಿನಗಳು, ಕಾಯಿಲೆಗಳಿಂದ ಜರ್ಝರಿತರಾದ ಜನ ಪವಾಡ ಪುರುಷ ಮಹಾಲಿಂಗೇಶ್ವರರಲ್ಲಿ ಮೊರೆಹೋದಾಗ ಅಂದು ಭಕ್ತರನ್ನು ಕಾಪಾಡಲು ಯಾವುದೇ ದುಷ್ಟಶಕ್ತಿ ಪುರದೊಳಗೆ ಪ್ರವೇಶಿಸದಂತೆ ತಡೆಗಟ್ಟಲು ಪುರದ ಸುತ್ತ ಅಷ್ಟಲಿಂಗ ಮುದ್ರೆ ಸ್ಥಾಪಿಸಿದ್ದು, ಅಂದಿನಿಂದ ಅಷ್ಟಲಿಂಗ ಮುದ್ರೆಗಳಿಗೆ ನೈವೇದ್ಯ ಅರ್ಪಿಸುವ ಸಂಪ್ರದಾಯ ಬಂದಿದೆ. ಅದನ್ನು ದುಷ್ಟ ಶಕ್ತಿಗಳ ನೈವೇದ್ಯ ಎಂದೂ ಕರೆಯಲಾಗುತ್ತದೆ ಎಂದು ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿದರು.ಮಹಾಲಿಂಗೇಶ್ವರರ ದೇವಸ್ಥಾನದಲ್ಲಿ ಶುಕ್ರವಾರ ಜರುಗಿದ ಅಷ್ಟಲಿಂಗ ಪರುವ (ಪರ್ವ) ವೈವೇದ್ಯ ಪೂಜೆ ನೆರವೇರಿಸಿ ಮಾತನಾಡಿದರು. ದುಷ್ಟಶಕ್ತಿಗಳ ನಿಗ್ರಹ ಹಾಗೂ ಕಂಟಕ ನಿವಾರಣೆಗಾಗಿ ಮತ್ತು ಊರಿನ ಶಾಂತಿ ಸಮೃದ್ಧಿಗಾಗಿ ಮಹಾಲಿಂಗೇಶ್ವರರು ಊರಿನ ಅಷ್ಟ ದಿಕ್ಕುಗಳಲ್ಲೂ ಅಷ್ಟಲಿಂಗಗಳನ್ನು ಸ್ಥಾಪಿಸಿ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಊರುಗಳ ಸುಖ, ಶಾಂತಿ, ಸಮೃದ್ಧಿಗೆ ಹಾರೈಸಿದ್ದು, ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಕಾರಹುಣ್ಣಿಮೆಯ ಹಿಂದಿನ ದಿನ ಗುರುವಾರ ಪೀಠಾಧಿಪತಿಗಳ ನೇತೃತ್ವದಲ್ಲಿ ಪರ್ವ ಆಚರಿಸಲಾಗುತ್ತದೆ.
ಭಕ್ತರು ಮತ್ತು ಸೇವಕರ ಮನೆಗಳಿಂದ ದವಸ, ಧಾನ್ಯ ಸಂಗ್ರಹಿಸಿ ಶ್ರೀಮಠದಲ್ಲಿಯೇ ಪ್ರಸಾದ ತಯಾರಿಸಿ ಶ್ರೀಗಳು ಪೂಜೆ ಸಲ್ಲಿಸಿದ ನಂತರ ಊರಿನ 18 ದೇವಸ್ಥಾನಗಳಿಗೂ ತೆರಳಿ ಸ್ತ್ರೀ ದೇವತೆಗಳಿಗೆ ಉಡಿತುಂಬಿ, ಪುರುಷ ದೇವತೆಗಳಿಗೆ ಬಟ್ಟೆ ಏರಿಸಿ ಎಡೆ ಕೊಟ್ಟು ನಂತರ ಅಷ್ಟದಿಕ್ಕುಗಳಲ್ಲಿರುವ ಲಿಂಗಮುದ್ರೆಗಳತ್ತ ದಾರಿಯುದ್ದಕ್ಕೂ ಎಡೆ ಚೆಲ್ಲುತ್ತಾ ಲಿಂಗ ಮುದ್ರೆಗಳಿಗೆ ಎಡೆ ಏರಿಸಿ ನಂತರ ಭೂಮಿಗೆ ಎಡೆ ಸಮರ್ಪಿಸಲಾಗುತ್ತದೆ. ಇದರಿಂದ ಊರಿಗೆ ಯಾವುದೇ ದುಷ್ಟಶಕ್ತಿಗಳ ವಕ್ರ ದೃಷ್ಟಿಯೂ ಬೀಳದೇ ಸುಖ ಶಾಂತಿ ಸಮೃದ್ಧಿ ನೆಲೆಸುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ ಎಂದರು.ಯಲ್ಲನಗೌಡ ಪಾಟೀಲ, ಕೃಷ್ಣಗೌಡ ಪಾಟೀಲ, ಯಲ್ಲಪ್ಪ ಹಟ್ಟಿ, ವಿಜು ಕುಳ್ಳೊಳ್ಳಿ, ಗಂಗಪ್ಪ ಮೇಟಿ, ಈಶ್ವರ ಮಠದ, ಶ್ರೀಶೈಲ ಮಠದ, ಸಿದ್ಧಯ್ಯ ಮಠದ, ಈಶ್ವರಪ್ಪ ಹಲಗಣಿ, ಸುಭಾಸ್ ವಜ್ರಮಟ್ಟಿ ಇತರರಿದ್ದರು.