ಸಾರಾಂಶ
ಜಿ ದೇವರಾಜ ನಾಯ್ಡು
ಕನ್ನಡಪ್ರಭ ವಾರ್ತೆ ಹನೂರುಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟದ ರಸ್ತೆ ತೀವ್ರ ಸ್ವರೂಪದ ಗುಂಡಿಗಳಾಗಿ ಜಾತ್ರಾ ವಿಶೇಷ ದಿನಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ಭಕ್ತರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಪ್ರೇಕ್ಷಣಿಯ ಧಾರ್ಮಿಕ ಸ್ಥಳವಾದ ಶ್ರೀ ಕ್ಷೇತ್ರ ಮಲೆ ಮಾದೇಶ್ವರನ ಬೆಟ್ಟದ ಕೋಟ್ಯಂತರ ಭಕ್ತರ ಆರಾಧ್ಯದೈವ ಮಾದಪ್ಪನ ಸನ್ನಿಧಿಗೆ ವರ್ಷಪೂರ್ತಿ ಭಕ್ತಾದಿಗಳ ಮಹಾಸಾಗರವೇ ಹರಿದು ಬರುತ್ತಿದೆ. ಧಾರ್ಮಿಕ ಕ್ಷೇತ್ರಕ್ಕೆ ತೆರಳುವ ರಸ್ತೆಯೇ ತೀವ್ರ ಹದಗೆಟ್ಟ ರಸ್ತೆಯ ಎರಡು ಇಕ್ಕೆಲಗಳಲ್ಲಿಯೂ ಸಹ ಮಳೆ ಬಂದು ಕಲ್ಲು ಮಣ್ಣು ಕುಸಿದು ಕಂದಕಗಳ ಮಾದರಿ ನಿರ್ಮಾಣವಾಗಿದೆ.ಕಂದಕಗಳು ನಿರ್ಮಾಣ:
ತಾಳುಬೆಟ್ಟದಿಂದ ಮಲೆ ಮಾದೇಶ್ವರ ಬೆಟ್ಟದವರೆಗೆ ಬೆಟ್ಟ ಗುಡ್ಡಗಳ ತಿರುಗುಗಳಲ್ಲಿ ಇರುವ ರಸ್ತೆಯಲ್ಲಿ ಎರಡು ಇಕ್ಕೆಲಗಳಲ್ಲಿಯೂ ಸಹ ಮಳೆಯ ನೀರಿನ ರಭಸಕ್ಕೆ ರಸ್ತೆ ಬದಿಯಲ್ಲಿ ಕೊಚ್ಚಿ ಹೋಗಿ ಕಂದಕಗಳ ಮಾದರಿ ನಿರ್ಮಾಣವಾಗಿ ವಾಹನಗಳು ಓಡಾಡಲು ತೊಂದರೆ ಉಂಟಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಧಾರ್ಮಿಕ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಸುರಕ್ಷಿತ ರಸ್ತೆ ನಿರ್ಮಾಣ ಮಾಡಬೇಕಾಗಿದೆ ಎಂದು ಮಾದಪ್ಪನ ಭಕ್ತರು ಆಗ್ರಹಿಸಿದ್ದಾರೆ.ಅಪಘಾತಗಳ ಸರಣಿ:
ಹಬ್ಬ-ಹರಿದಿನ, ವಿಶೇಷ ದಿನಗಳಲ್ಲಿ ಭಾರಿ ವಾಹನಗಳ ದಟ್ಟಣೆಯಿಂದ ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಗಳಾಗಿರುವುದರಿಂದ ಪದೇ ಪದೇ ಟ್ರಾಫಿಕ್ ಜಾಮ್ ಉಂಟಾಗಿ ಅಪಘಾತಗಳು ಸಹ ಸಂಭವಿಸುತ್ತಿವೆ. ಕಿರಿದಾದ ರಸ್ತೆಯಲ್ಲಿ ವಾಹನಗಳು ಹೋಗಿ ಬರಲು ಸಮಸ್ಯೆ ಉಂಟಾಗಿತ್ತು. ರಸ್ತೆಯ ಎರಡು ಬದಿಗಳಲ್ಲಿ ಬೆಟ್ಟದ ಮಣ್ಣು ಮತ್ತು ಕಲ್ಲುಗಳಿಂದ ಅಲ್ಲಲ್ಲಿ ಕುಸಿದು ಸಂಚಾರಕ್ಕೆ ಅಡಚಣೆ ಉಂಟಾಗಿದೆ.ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಮಾದಪ್ಪನ ಭಕ್ತರು, ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಒತ್ತಾಯಿಸಿದ್ದಾರೆ.
ಪ್ರಯಾಸದ ಪ್ರಯಾಣ:ಮಲೆ ಮಹದೇಶ್ವರ ಬೆಟ್ಟ ಇತಿಹಾಸ ಪ್ರಸಿದ್ಧ ಪುಣ್ಯ ಧಾರ್ಮಿಕ ಸ್ಥಳವಾದ ಮಾದಪ್ಪನ ಬೆಟ್ಟಕ್ಕೆ ಕೋಟ್ಯಂತರ ರು. ಆದಾಯ ಬರುತ್ತಿದೆ. ಈ ಧಾರ್ಮಿಕ ಸ್ಥಳಕ್ಕೆ ಬರುವ ಭಕ್ತಾದಿಗಳಿಗೆ ಹೋಗಿ ಬರಲು ರಸ್ತೆ ಗುಂಡಿಮಯವಾಗಿ ಪ್ರಯಾಸದ ಪ್ರಯಾಣದ ನಡುವೆ ಭಕ್ತಾದಿಗಳು ಮಾದಪ್ಪನ ದರ್ಶನಕ್ಕೆ ಆಗಮಿಸುವ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಈ ಧಾರ್ಮಿಕ ಕ್ಷೇತ್ರಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ರಸ್ತೆಯ ಸ್ಥಿತಿಗತಿ ಬಗ್ಗೆ ಇಲಾಖೆಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ತಾಳುಬೆಟ್ಟದಿಂದ ಮಲೆ ಮಹದೇಶ್ವರ ಬೆಟ್ಟದ ವರೆಗೆ ಇರುವ ಗುಂಡಿಗಳನ್ನು ಮುಚ್ಚಲು ತಾತ್ಕಾಲಿಕವಾಗಿ ಕ್ರಮವಹಿಸಲಾಗಿದೆ. ಎರಡು ಇಕ್ಕೆಲಗಳಲ್ಲಿ ಇರುವ ಮಣ್ಣು ಕಲ್ಲು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಚಿನ್ನಣ್ಣ, ಲೋಕೋಪಯೋಗಿ ಇಲಾಖೆ ಎಇಇ
ಕೋಟ್ಯಂತರ ರು. ಆದಾಯ ಬರುವ ಧಾರ್ಮಿಕ ಕ್ಷೇತ್ರ ಮಾದೇಶ್ವರ ಬೆಟ್ಟಕ್ಕೆ ಹೋಗಿ ಬರಲು ರಸ್ತೆ ತೀವ್ರ ಹದಗೆಟ್ಟಿರುವುದರಿಂದ ಗುಂಡಿಮಯ ಆಗುವುದರ ಜತೆಗೆ ಬೆಟ್ಟ ಅಲ್ಲಲ್ಲಿ ಕುಸಿದು ಮಳೆಯ ನೀರಿನಿಂದ ಕೊಚ್ಚಿ ಹೋಗಿ ರಸ್ತೆ ಬದಿಯಲ್ಲಿ ಕಂದಕದ ಮಾದರಿ ನಿರ್ಮಾಣವಾಗಿದೆ. ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ. ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕಾಗಿದೆ.ಪ್ರಭು, ಹನೂರು