ಪುರಸಭೆ ಅಧಿಕಾರಗಳ ಮೇಲೆ ಕ್ರಮಕ್ಕೆ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಒತ್ತಾಯ

| Published : Jan 17 2024, 01:45 AM IST

ಪುರಸಭೆ ಅಧಿಕಾರಗಳ ಮೇಲೆ ಕ್ರಮಕ್ಕೆ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸಕಲೇಶಪುರದ ೨೩ ವಾರ್ಡ್‌ ಗಳ ಕಸವನ್ನು ಹಸಿಕಸ ಮತ್ತು ಒಣ ಕಸವೆಂದು ಬೇರ್ಪಡಿಸದೇ ತಂದು ಹೇಮಾವತಿ ಹೊಳೆಗೆ ಹಾಕಿದ ಪುರಸಭಾ ಮುಖ್ಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಅಮಾನತ್ತುಗೊಳಿಸುವಂತೆ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಆಗ್ರಹಿಸಿದರು.

ಹಸಿಕಸ-ಒಣಕಸ ಬೇರ್ಪಡಿಸದೇ ನದಿಗೆ ಸುರಿದ ಆರೋಪ

ಕನ್ನಡಪ್ರಭ ವಾರ್ತೆ ಹಾಸನ

ಸಕಲೇಶಪುರದ ೨೩ ವಾರ್ಡ್‌ ಗಳ ಕಸವನ್ನು ಹಸಿಕಸ ಮತ್ತು ಒಣ ಕಸವೆಂದು ಬೇರ್ಪಡಿಸದೇ ತಂದು ಹೇಮಾವತಿ ಹೊಳೆಗೆ ಹಾಕಿದ ಪುರಸಭಾ ಮುಖ್ಯ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸಿ ಅಮಾನತ್ತುಗೊಳಿಸುವಂತೆ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ‘ಸಕಲೇಶಪುರದ ಪುರಸಭಾ ಮುಖ್ಯ ಅಧಿಕಾರಿಗಳು ಮತ್ತು ಅಧಿಕಾರಿಗಳು ಹಸಿಕಸ ಮತ್ತು ಒಣ ಕಸವನ್ನು ಬೇರ್ಪಡಿಸುತ್ತಿದ್ದೇವೆ ಎಂದು ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡುತ್ತ ಲಕ್ಷಾಂತರ ರುಪಾಯಿ ಬಿಲ್ ಮಾಡಿಕೊಂಡು ಬರುತ್ತಿದ್ದು, ಇದರ ವಿಚಾರವಾಗಿ ನಾವು ಪುರಸಭಾ ಮುಖ್ಯ ಅಧಿಕಾರಿಗಳ ಗಮನಕ್ಕೆ ತಂದು ಕಸವನ್ನು ಹೇಮಾವತಿ ನದಿಯ ದಂಡೆಗೆ ಹಾಕಬಾರದು ಎಂದು ಎಷ್ಟು ಬಾರಿ ತಿಳಿಸಿದರೂ ಅವರು ಬೇಜಾಬ್ದಾರಿ ತನದಿಂದ ಹೇಮಾವತಿ ನದಿ ದಂಡೆಗೆ ಕಸವನ್ನು ತಂದು ಸುರಿಯುತ್ತಿದ್ದರು. ನಾವು ಸಾಮಾಜಿಕ ಜಾಲತಾಣದಲ್ಲಿ ಮತ್ತು ಕೆಲವು ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಪತ್ರಿಕೆಯಲ್ಲೂ ಪ್ರಸಾರ ಮಾಡಲು ಮುಂದಾಗಬೇಕಾಯಿತು’ ಎಂದು ಹೇಳಿದರು.

‘ಪರಿಸರ ಸಂರಕ್ಷಣಾ ನಿಯಂತ್ರಣ ಅಧಿಕಾರಿಗಳಿಗೂ ನಾವು ಪೋನ್ ಮುಖಾಂತರ ದೂರು ನೀಡಿದ್ದು, ಅವರು ನಮ್ಮ ಕರೆಗೆ ಓಗೊಟ್ಟು ರಾತ್ರೋರಾತ್ರಿ ಸ್ಥಳಕ್ಕೆ ಬಂದು ಹೇಮಾವತಿ ದಂಡೆಯಲ್ಲಿ ಕಸವನ್ನು ಹಾಕುವುದು ಅಕ್ಷಮ್ಯ ಅಪರಾಧ ಎಂದು ತಿಳಿಸಿ ಪುರಸಭಾ ಮುಖ್ಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಇಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಹಾಕಬಾರದು ಮತ್ತು ಈಗಾಗಲೇ ಹಾಕಿರುವ ಕಸವನ್ನು ಇಲ್ಲಿಂದ ತಕ್ಷಣಕ್ಕೆ ಸ್ಥಳಾಂತರ ಮಾಡಬೇಕು ಎಂದು ತಿಳಿಸಿ ನಿಮ್ಮ ಮೇಲೆ ನೋಟೀಸ್ ಜಾರಿ ಮಾಡುವುದಾಗಿ ಹೇಳಿದರು. ಮೇಲಾಧಿಕಾರಿಗಳಿಗೆ ತಿಳಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿ ಹೋದರು. ಸಾರ್ವಜನಿಕರು ಇದ್ದಂತಹ ಸಮಯದಲ್ಲಿ ಕಸವನ್ನು ಅಲ್ಲಿ ಹಾಕದೇ ರಾತ್ರಿ ಎಲ್ಲಾ ಸಾರ್ವಜನಿಕರು ಮಲಗಿದ ನಂತರ ಕಸವನ್ನು ಅದೇ ಜಾಗಕ್ಕೆ ಸುರಿಯುತ್ತಿದ್ದರು. ಇದನ್ನು ಮನಗಂಡ ನಾವು ಪುನಃ ಸ್ಥಳಕ್ಕೆ ಹೋಗಿ ಕಸವನ್ನು ಹಾಕುತ್ತಿದ್ದ ವಾಹನಗಳ ಚಿತ್ರಿಕರಣ ಮಾಡಿ ಜಿಲ್ಲಾಧಿಕಾರಿ ಬಳಿಗೆ ಬಂದು ನಡೆದ ಘಟನೆಗಳನ್ನೆಲ್ಲಾ ಸಂಪೂರ್ಣವಾಗಿ ವಿವರಿಸಿ, ಲಿಖಿತ ಮುಖಾಂತರ ಪುರಸಭಾ ಮುಖ್ಯ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದೆವು. ದೂರು ನೀಡಿದ ಮರುಕ್ಷಣವೇ ಜಿಲ್ಲಾಧಿಕಾರಿ ಎಚ್ಚೆತ್ತುಕೊಂಡು ದೂರವಾಣಿ ಮುಖಾಂತರ ಪುರಸಭಾ ಮುಖ್ಯ ಅಧಿಕಾರಿಗಳಿಗೆ ಕರೆ ಮಾಡಿ ಕಸವನ್ನು ಯಾವುದೇ ಕಾರಣಕ್ಕೂ ಹೇಮಾವತಿ ನದಿಗೆ ಹಾಕಬಾರದು ಎಂದು ಎಚ್ಚರಿಕೆ ನೀಡಿದರು’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿ ಹೇಳಿದ ಕೆಲವೇ ಗಂಟೆಗಳಿಂದ ಅಲ್ಲಿ ಕಸವನ್ನು ಹಾಕುವುದನ್ನು ನಿಲ್ಲಿಸಿದ್ದಾರೆ. ಆದ ಕಾರಣ ಜಿಲ್ಲಾಧಿಕಾರಿ ಹಾಗೂ ಪರಿಸರ ಸಂರಕ್ಷಣ ನಿಯಂತ್ರಣ ಅಧಿಕಾರಿಗಳಿಗೂ ಧನ್ಯವಾದಗಳನ್ನು ತಿಳಿಸುತ್ತೇವೆ. ನಾವು ಇಷ್ಟು ದಿನ ಪುರಸಭಾ ಅಧಿಕಾರಿಗಳ ವಿರುದ್ದ ಹೋರಾಟ ಮಾಡಿದ ಪ್ರತಿಫಲವಾಗಿ ನಮ್ಮ ಹೋರಾಟಕ್ಕೆ ಜಯಸಿಕ್ಕಿರುತ್ತದೆ’ ಎಂದು ಸಂತೋಷ ವ್ಯಕ್ತಪಡಿಸಿದರು.

ಹಸಿಕಸ ಮತ್ತು ಒಣಕಸವನ್ನು ಬೇರ್ಪಡಿಸದೇ ಕಸವನ್ನು ಹೇಮಾವತಿ ನದಿಗೆ ಸುರಿದಂತಹ ಪುರಸುಭಾ ಮುಖ್ಯ ಅಧಿಕಾರಿಗಳನ್ನು ತನಿಖೆ ನಡೆಸಿ ಅಮಾನತುಗೊಳಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಲೆನಾಡು ರಕ್ಷಣಾ ಸೇನೆ ರಾಜ್ಯ ಉಸ್ತುವಾರಿ ಜಿ.ಎಸ್. ವಸಂತಕುಮಾರ್ ಇತರರು ಉಪಸ್ಥಿತರಿದ್ದರು.

ಫೋಟೋ: ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಲೆನಾಡು ರಕ್ಷಣಾ ಸೇನೆ ರಾಜ್ಯಾಧ್ಯಕ್ಷ ಸಾಗರ್ ಜಾನೆಕೆರೆ.