ಉನ್ನತ ಸ್ಥಾನಕ್ಕೇರಲು ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಪರಿಣಾಮಕಾರಿ ಶಿಕ್ಷಣ ಪಡೆದಿದ್ದೇವೆ ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರುಒಂದೇ ಮನಸ್ಥಿತಿಯ ಗೆಳೆಯರನ್ನು ಹೊಂದಿದಾಗ ಸಾಧನೆಗೆ ಸಹಕಾರಿಯಾಗುತ್ತದೆ ಎಂದು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ತಿಳಿಸಿದರು.ನಗರದ ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಮೈಸೂರು ವಿವಿ ಮಂಗಳವಾರ ಆಯೋಜಿಸಿದ್ದ ಮಾನಸ ಯುವ ಸಂವರ್ಧನೆ- 2025- 26 ಯುವ ಸಬಲೀಕರಣ ಮತ್ತು ಔದ್ಯೋಗಿಕ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಉನ್ನತ ಸ್ಥಾನಕ್ಕೇರಲು ಯಾವ ಮಾಧ್ಯಮದಲ್ಲಿ ಕಲಿತಿದ್ದೇವೆ ಎಂಬುದು ಮುಖ್ಯವಲ್ಲ, ಎಷ್ಟು ಪರಿಣಾಮಕಾರಿ ಶಿಕ್ಷಣ ಪಡೆದಿದ್ದೇವೆ ಎಂಬುದು ಪ್ರಾಮುಖ್ಯತೆ ಪಡೆಯುತ್ತದೆ. ಯಾವ ರೀತಿಯ ಪರಿಸರದಲ್ಲಿ ನೀವು ಇರುತ್ತೀರಿ ಎನ್ನುವುದು ನಿಮ್ಮ ಜೀವನಶೈಲಿ ನಿರ್ಧರಿಸುತ್ತದೆ. ನಮ್ಮ ಜೊತೆಗಿರುವ ಸ್ನೇಹಿತರು ಭವಿಷ್ಯದ ಮೇಲೆ ಪರಿಣಾಮ ಬೀರುತ್ತಾರೆ. ಹೀಗಾಗಿ, ಉತ್ತಮ ಸ್ನೇಹಿತರ ವಲಯವನ್ನು ರೂಪಿಸಿಕೊಳ್ಳಿ ಎಂದು ಅವರು ಹೇಳಿದರು.ಕಠಿಣ ಪರಿಶ್ರಮ, ಏಕಾಗ್ರತೆ, ಸ್ವ ಇಚ್ಛೆ ಇದ್ದಾಗ ಗುರಿ ಮುಟ್ಟಲು ಸಾಧ್ಯ. ಕಾಲೇಜು ಸಮಯ ನಿಮ್ಮ ಭವಿಷ್ಯ ನಿರ್ಧರಿಸುತ್ತದೆ. ಭವಿಷ್ಯದ ಬಗ್ಗೆ ನಿರ್ಧರಿಸಿ, ಅದರ ಬಗ್ಗೆ ಸಿದ್ಧತೆ ನಡೆಸಬೇಕು. ನಮ್ಮ ಗುರಿಯು ಪ್ರತಿ ದಿನ ನಮ್ಮನ್ನು ಕಾಡುತ್ತಿರಬೇಕು. ಮೋಜು– ಮಸ್ತಿಗಷ್ಟೇ ಕಾಲೇಜು ಸಮಯ ಮೀಸಲಿಡಬಾರದು. ಕೌಶಲ ಬೆಳೆಸಿಕೊಂಡು ಉದ್ಯೋಗ ವಲಯಕ್ಕೆ ಬೇಕಾದ ವಿಚಾರಗಳನ್ನು ಅಭ್ಯಾಸ ಮಾಡಬೇಕು ಎಂದರು.ಸಾಧನೆಗೆ ಪರಿಶ್ರಮದ ಹೊರತು ಬೇರೆ ಅಡ್ಡ ದಾರಿಯಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ತೇರ್ಗಡೆಯಾಗಲು ನಿತ್ಯ 8 ಗಂಟೆಯ ಓದು ಸಾಕು. ಅದರಲ್ಲಿ ನಿರಂತರತೆ ಇರಬೇಕು. ಧನಾತ್ಮಕ ವಿಚಾರ ಮಾತಾಡುವವರೊಂದಿಗೆ ವ್ಯವಹರಿಸಿದರೆ ಪ್ರೋತ್ಸಾಹ ದೊರೆಯುತ್ತದೆ. ಎಲ್ಲರೂ ಸ್ಪರ್ಧಾತ್ಮಕ ಪರೀಕ್ಷೆಯೇ ಮಾಡಬೇಕಾಗಿಲ್ಲ. ನಿಮಗೆ ಯಾವುದರಲ್ಲಿ ಇಚ್ಛಾಶಕ್ತಿ ಇದೆಯೋ ಆ ಕ್ಷೇತ್ರದಲ್ಲಿ ಮುಂದುವರಿಯಿರಿ ಎಂದು ಅವರು ಸಲಹೆ ನೀಡಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಸಂಪನ್ಮೂಲ ವ್ಯಕ್ತಿ ಪಿ.ಎನ್. ಹೇಮಚಂದ್ರ, ಕಾರ್ಯಕಾರಿ ಸಮಿತಿ ಅಧ್ಯಕ್ಷ ಪ್ರೊ.ಡಿ. ಆನಂದ್ ಮೊದಲಾದವರು ಇದ್ದರು.