ಅನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ದಲಿತರು ಜಮೀನು, ಬೀದಿ ಬದಿಗಳಲ್ಲಿ ಶವವನ್ನು ಹೂಳುವ ಪರಿಸ್ಥಿತಿ ಇದೆ.
ಕನ್ನಡಪ್ರಭ ವಾರ್ತೆ ಹುಣಸೂರು ತಾಲೂಕಿನಲ್ಲಿ ದಲಿತ ಸಮುದಾಯ ಎದುರಿಸುತ್ತಿರುವ ಭೂ ಸಮಸ್ಯೆಗಳು ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸುವತ್ತ ತಾಲೂಕು ಆಡಳಿತ ನಿರ್ಲಕ್ಷ್ಯತೆ ವಹಿಸಿದೆ ಎಂದು ದಸಂಸ ರಾಜ್ಯ ಸಂಘಟನಾ ಸಂಚಾಲಕ ನಿಂಗರಾಜ ಮಲ್ಲಾಡಿ ಆರೋಪಿಸಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ದಲಿತರ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದಲೂ ತಾಲೂಕಿನ ದಲಿತರ ಭೂ ಸಮಸ್ಯೆಗಳು, ಸ್ಮಶಾನದ ಸಮಸ್ಯೆಗಳು, ನಿವೇಶನದ ಸಮಸ್ಯೆಗಳು, ಜಮೀನಿಗೆ ತಿರುಗಾಡುವ ರಸ್ತೆಗಳ ಸಮಸ್ಯೆ ಮುಂತಾದ ಸಮಸ್ಯೆಗಳ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಿತಿಯು ಅನೇಕ ಸಭೆಗಳಲ್ಲಿ ಮನವಿ ಮಾಡುತ್ತಾ ಬರುತ್ತಿದ್ದರೂ ಅಧಿಕಾರಿಗಳು ದಲಿತರ ಸಮಸ್ಯೆಗಳನ್ನು ಪರಿಹರಿಸಲು ನಿರ್ಲಕ್ಷ್ಯತೆ ವಹಿಸುತ್ತಿದೆ ಎಂದು ದೂರಿದರು.ಅನೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ದಲಿತರು ಜಮೀನು, ಬೀದಿ ಬದಿಗಳಲ್ಲಿ ಶವವನ್ನು ಹೂಳುವ ಪರಿಸ್ಥಿತಿ ಇದೆ. ಇಂತಹ ಗ್ರಾಮಗಳಿಗೆ ಸ್ಮಶಾನವನ್ನು ಮಂಜೂರಾತಿ ಮಾಡಲಾಗಿಲ್ಲ. ಅಲೆಮಾರಿ ಸಮುದಾಯಗಳು ಗುಡಿಸಲುಗಳನ್ನು ಹಾಕಿಕೊಂಡು ಹಾವು, ಹಲ್ಲಿ ಹರಿದಾಡುವ ಸ್ಥಳಗಳಲ್ಲಿ ವಾಸ ಮಾಡುವ ಸ್ಥಿತಿ ಇದ್ದರೂ ಇಂತಹ ನಿರ್ಗತಿಕ ಕುಟುಂಬಗಳಿಗೆ ನಿವೇಶನಗಳ ಉದ್ದೇಶಕ್ಕಾಗಿ ಸರ್ಕಾರಿ ಜಾಗವನ್ನು ಮಂಜೂರು ಮಾಡುವಂತೆ ಮನವಿ ಮಾಡಿದರೂ ಧನಿ ಇಲ್ಲದ, ದಿಕ್ಕಿಲ್ಲದ ಅಲೆಮಾರಿ ಕುಟುಂಬಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ವಹಿಸಿಲ್ಲವೆಂದರು.ತಾಲೂಕು ಸಂಚಾಲಕ ಕೆಂಪರಾಜು ಮಾತನಾಡಿ, ಹುಣಸೂರಿನಲ್ಲಿ ಹಲವಾರು ವರ್ಷಗಳಿಂದ ನಿವೇಶನಗಳನ್ನು ಹಂಚದೆ ಎಲ್ಲ ಜಾತಿಯ ಬಡ ಕುಟುಂಬಗಳು ಒಂದೊಂದು ಮನೆಯಲ್ಲಿ 3-4 ಕುಟುಂಬಗಳು ಇಕ್ಕಟ್ಟಿನಲ್ಲಿ ವಾಸ ಮಾಡುತ್ತಿದ್ದಾರೆ. ಇಂತಹ ಕುಟುಂಬಗಳಿಗೆ 2004 ರಲ್ಲಿ 800 ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದ್ದು, ಇವುಗಳನ್ನು ಪರಿಶೀಲಿಸಿ ನಿಜವಾದ ಬಡ ಕುಟುಂಬಗಳಿಗೆ ಹಂಚಿಕೆ ಮಾಡಿಲ್ಲ ಎಂದು ಆರೋಪಿಸಿದರು.ತಾಲೂಕಿನ ದಲಿತರು, ಅಲೆಮಾರಿ ಸಮುದಾಯಗಳು ಪರಿತಪಿಸುತ್ತಿದ್ದರೂ ಅಧಿಕಾರಿಗಳು ಇಂತಹ ಬಡವರ ಸಮಸ್ಯೆಗಳನ್ನು ಬಗೆಹರಿಸದೆ ನಿರ್ಲಕ್ಷ್ಯತೆ ವಹಿಸುತ್ತಿದ್ದು, ಅಧಿಕಾರಿಗಳ ದಲಿತ ವಿರೋಧಿ ವರ್ತನೆಯನ್ನು ಖಂಡಿಸಿ ಈ ತಿಂಗಳ ಅಂತ್ಯದ ಒಳಗೆ ದಲಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗುವುದು ಎಂದರು.ಸಭೆಯಲ್ಲಿ ಮುಖಂಡರಾದ ಗಜೇಂದ್ರ, ಅಬ್ದುಲ್ ಮಲೀಕ್, ಲತೇಶ್ ಸ್ವಾಮಿ ಆದಿವಾಸಿ ಮಹಿಳೆ ವಸಂತ, ಕಣ್ಣಯ್ಯ, ದಾಸಪ್ಪ, ಶೋಭಮ್ಮ, ಗಣೇಶ, ಸ್ವಾಮಿ ಇದ್ದರು.