ಕನ್ನಡಪ್ರಭ ವಾರ್ತೆ ಸುರಪುರ

ಮಕ್ಕಳಲ್ಲಿ ರಕ್ತಹೀನತೆ (ಅನೀಮಿಯಾ) ಸಮಸ್ಯೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು 2ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಹಿಮೊಗ್ಲೋಬಿನ್ (ಎಚ್‌ಬಿ) ಪರೀಕ್ಷೆ ನಡೆಸಬೇಕು. ಪೌಷ್ಟಿಕ ಆಹಾರದ ಅಭ್ಯಾಸ ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದು ಫಿನ್ನಿಕ್ಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥ ವಸಂತಕುಮಾರ ಹೇಳಿದರು.

ತಾಲೂಕಿನ ಕೃಷ್ಣಾಪುರದ ಫಿನ್ನಿಕ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀಮದ್ ರಾಜಚಂದ್ರ ಆಸ್ಪತ್ರೆ ಸಂಶೋಧನಾ ಕೇಂದ್ರ (ಗುಜರಾತ್), ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ಐಆರ್‌ಡಿ) ವಿಜಯಪುರ, ಸ್ಪಂದನ ಸ್ವಯಂಸೇವಾ ಸಂಸ್ಥೆ ವಿಜಯಪುರ ಹಾಗೂ ವಿಶ್ವಗಂಗಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸುರಪುರ ಇವರ ಸಂಯುಕ್ತ ಆಶ್ರಯದಲ್ಲಿ 2026-27ನೇ ಸಾಲಿನ ಅನೀಮಿಯಾ ತಡೆಗಟ್ಟುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ವಿಶ್ವಗಂಗಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಚಂದಪ್ಪ ಯಾದವ್ ಮಾತನಾಡಿ, ಯಾದಗಿರಿ ಜಿಲ್ಲೆಯ ಅನುದಾನಿತ ಹಾಗೂ ಅನುದಾನರಹಿತ ಶಾಲೆಗಳ 2ರಿಂದ 18 ವರ್ಷದೊಳಗಿನ ಮಕ್ಕಳಿಗೆ ಹಿಮೊಗ್ಲೋಬಿನ್ ಪರೀಕ್ಷೆ ನಡೆಸಿ, ರಕ್ತಹೀನತೆ ಕಂಡುಬಂದವರಿಗೆ ಅಗತ್ಯ ಔಷಧೋಪಚಾರ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಮಹಿಳೆಯರು ಹಾಗೂ ಸಾರ್ವಜನಿಕರಲ್ಲಿ ರಕ್ತಹೀನತೆ ಕುರಿತು ಅರಿವು ಮೂಡಿಸಿ, ಅನೀಮಿಯಾ ನಿರ್ಮೂಲನೆಗೆ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಸಂಯೋಜಕ ಅಯ್ಯಣ್ಣ ನಾಗನಟಗಿ ಮಾತನಾಡಿ, ಅನೀಮಿಯಾದ ಲಕ್ಷಣಗಳು, ಮಕ್ಕಳ ಹಾಗೂ ಮಹಿಳೆಯರಲ್ಲಿ ಇರಬೇಕಾದ ಸಾಮಾನ್ಯ ಹಿಮೊಗ್ಲೋಬಿನ್ ಪ್ರಮಾಣ, ರಕ್ತಹೀನತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹಾಗೂ ತಡೆಗಟ್ಟುವ ಕ್ರಮಗಳ ಕುರಿತು ವಿವರಿಸಿದರು.


ಶಿಬಿರದಲ್ಲಿ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ, ರಕ್ತಹೀನತೆ ಪತ್ತೆಗಾಗಿ ಹಿಮೊಗ್ಲೋಬಿನ್ (ಎಚ್‌ಬಿ) ಪರೀಕ್ಷೆ ಕೈಗೊಳ್ಳಲಾಯಿತು.

ತಾಲೂಕು ಮೇಲ್ವಿಚಾರಕ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ದರ್ಶನ, ನಿಂಗರಾಜ, ಆತಿ೯ ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

-----

ಫೋಟೋ:

ಸುರಪುರ ಸಮೀಪದ ಕೃಷ್ಣಾಪುರದ ಫಿನ್ನಿಕ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅನೀಮಿಯಾ ತಡೆಗಟ್ಟುವ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಹಿಮೊಗ್ಲೋಬಿನ್ (ಎಚ್‌ಬಿ) ಪರೀಕ್ಷೆ ನಡೆಸಲಾಯಿತು.