ಕಡ್ಡಾಯ ಜಿಟಿಜಿಟಿ ಮಳೆ: ಜನಜೀವನ ಅಸ್ತವ್ಯಸ್ತ

| Published : Oct 17 2024, 12:57 AM IST

ಸಾರಾಂಶ

ಚಳ್ಳಕೆರೆ: ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಜಿಟಿಜಿಟಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಯಿತು.

ಚಳ್ಳಕೆರೆ: ತಾಲ್ಲೂಕಿನಾದ್ಯಂತ ಬುಧವಾರ ಸುರಿದ ಜಿಟಿಜಿಟಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಯಿತು.

ಬೆಳ್ಳಂಬೆಳ್ಳಗೆ ವರುಣರಾಯನ ಆಗಮನದಿಂದ ಸಣ್ಣಪುಟ್ಟ ವ್ಯಾಪರಸ್ಥರು, ಹಾಲು, ಪೇಪರ್ ಹಂಚಿಕೆ ಮಾಡುವವರು, ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಪರದಾಡಿದರು.

ಜಿಟಿಜಿಟಿ ಮಳೆಯಿಂದ ಸಣ್ಣಪುಟ್ಟ ಮಣ್ಣಿನ ಮನೆಯವರು ಯಾವಾಗ ಕುಸಿತವೋ ಎನ್ನುವ ಭಯದಲ್ಲೇ ದಿನದೂಡಿದರು. ನಿರಂತರ ಮಳೆ ಬಯಲುಸೀಮೆಯಲ್ಲಿ ಮಲೆನಾಡಿನ ಅನುಭವ ನೀಡಿತು. ಮಳೆಯ ಪ್ರಭಾವದಿಂದ ಕೆಲವರು ಮನೆಯಿಂದ ಹೊರಬರಲ್ಲೇ ಇಲ್ಲ, ಒಮ್ಮೆ ಜೋರು, ಮತ್ತೊಮ್ಮೆ ಜಿಟಿಜಿಟಿ ಮಳೆ ಜನರ ನೆಮ್ಮದಿ ಕಸಿದುಕೊಂಡಿತ್ತು.

ಜಿಟಿಜಿಟಿ ಮಳೆ ಬೆಳೆಗೆ ಕುತ್ತು : ಸಕಾಲಕ್ಕೆ ಮಳೆ ಇಲ್ಲದೆ ಕೃಷಿಚಟುವಟಿಕೆಯಲ್ಲಿ ಹಿನ್ನಡೆ ಅನುಭವಿಸ ಬಯಲು ಸೀಮೆ. ಆದರೂ ಮೊಂಡು ಧೈರ್ಯದಿಂದ ಬಿತ್ತನೆ ಮಾಡಿದ್ದ ರೈತನಿಗೆ ಅತಿವೃಷ್ಟಿ ಕಂಗಾಲು ಮಾಡಿದೆ.

ಶೇಂಗಾ ಬೆಳೆ ಹರಗಿ (ಕಿತ್ತು) ಹೊಲದಲ್ಲೇ ಕಂಪಾಗುತ್ತಿವೆ. ದನ ಕರುಗಳಿಗೆ ಇಷ್ಟುವಷ್ಟೋ ಮೇವಾದರೂ ಆಗೂವ ನಿರೀಕ್ಷೆಯಲ್ಲಿ ರೈತನಿಗೆ ನಿರಂತರ ಮಳೆಯಿಂದ ಅದು ಕೈಚೆಲ್ಲೂವ ಸಂಭವಹೆಚ್ಚುತ್ತಿದೆ. ಕೆಲ ಜಮೀನುಗಳಲ್ಲಿ ಶೇಂಗಾ, ಮೆಕ್ಕೆಜೋಳ, ರಾಗಿ, ತೊಗರಿ, ಸಜ್ಜೆ ಮುಂತಾದ ಬೆಳೆಗಳು ಜಮೀನಿನಲ್ಲೆ ಮೊಳಕೆ ಬರುತ್ತಿವೆ. ಅತಿವೃಷ್ಟಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗಿದೆ.

ಪ್ರತಿ ವರ್ಷವೂ ಅತಿವೃಷ್ಟಿ ಅನಾವೃಷ್ಟಿಯಿಂದ ಈ ಭಾಗದ ರೈತರು ಹೈರಾಣರಾಗಿದ್ದಾರೆ. ಬೆಳೆಯನ್ನು ರಕ್ಷಿಸಿಕೊಳ್ಳಲು ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಬೆಳೆ ಉತ್ಕೃಷ್ಟವಾಗುವ ಸಯಮಕ್ಕೆ ಬಾರದ ಮಳೆ ಅಕಾಲಿಕವಾಗಿ ಬಂದು ಕೈಸೇರುತ್ತಿದ್ದ ಅಲ್ಪಸ್ವಲ್ಪ ಬೆಳೆಯನ್ನು ಕಸಿದುಕೊಳ್ಳುತ್ತಿದೆ.

ಶೇಂಗಾ ಬೆಳೆ ಹೊಲದಲ್ಲೇ ಮೊಳಕೆ ಹೊಡೆಯುತ್ತಿದೆ. ಮೇವು ಸಹ ಕಪ್ಪಾಗುತ್ತಿದೆ. ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ ಎಂದು ರೈತ ಬಾಲರಾಜು ತಮ್ಮ ನೋವು ಪತ್ರಿಕೆಯೊಂದಿಗೆ ಹಂಚಿಕೊಂಡರು.