ಸಾರಾಂಶ
ಕೂಡ್ಲಿಗಿ: ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನ್ಯಾಯಾಲಯ ಜಾಮೀನು ಮುಂಜೂರು ಮಾಡಿರುವುದು ನ್ಯಾಯೋಚಿತವಾಗಿದೆ. ಇವರು ಮುಂದಿನ ದಿನಗಳಲ್ಲಿ ನಿರ್ದೋಷಿಯಾಗಿ ಹೊರಬರಲಿ ಇವರು ಜಾಮೀನು ಮೂಲಕ ಜೈಲಿನಿಂದ ಬಿಡುಗಡೆಯಾಗಿದ್ದು ನಮಗೆಲ್ಲ ಸಂತಸ ತಂದಿದೆ ಎಂದು ರಾಜ್ಯ ಕಾಂಗ್ರೆಸ್ ಒಬಿಸಿ ಘಟಕದ ಉಪಾಧ್ಯಕ್ಷ ಮಧುಸೂದನ್ ಆರ್. ಕಲ್ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಅವರು ಬುಧವಾರ ರಾತ್ರಿ ಕನ್ನಡಪ್ರಭದೊಂದಿಗೆ ಮಾತನಾಡಿ, ಬಿ.ನಾಗೇಂದ್ರ ಜನಪರ ಕಾಳಜಿಯ ವ್ಯಕ್ತಿಯಾಗಿದ್ದು, ಜನಾನುರಾಗಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲರ ಹೃದಯ ಗೆದ್ದು ಮನೆಮಾತಾಗಿರುವ ನಾಗೇಂದ್ರ ನೊಂದವರ ಕೈಹಿಡಿದ ಜನತೆಯ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಾಲ್ಮೀಕಿ ಹಗರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದರಿಂದ ಅಪಾರ ಅಭಿಮಾನಿಗಳು ನೊಂದುಕೊಂಡಿದ್ದರು. ಈಗ ಅವರಿಗೆ ಜಾಮೀನು ಸಿಕ್ಕು ಹೊರಬಂದಿದ್ದರಿಂದ ಎಲ್ಲರ ಮೊಗದಲ್ಲಿ ನಗು ಮೂಡಿಬಂದಿದೆ ಎಂದರು.ಕೂಡ್ಲಿಗಿ ಕ್ಷೇತ್ರದಲ್ಲಿ 2 ಬಾರಿ ಶಾಸಕರಾಗಿ ಕೂಡ್ಲಿಗಿ ಕ್ಷೇತ್ರದವರೇ ಆಗಿದ್ದರು. ನಂತರ ಸ್ವಕ್ಷೇತ್ರ ಬಳ್ಳಾರಿಯಲ್ಲಿಯೂ 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ. ಸದಾ ಜನತೆಗಾಗಿ ನಂಬಿದವರಿಗೆ, ನೊಂದವರಿಗೆ ಹೆಗಲಾಗಿ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದ ಬಿ. ನಾಗೇಂದ್ರ ಅವರಿಗೆ ಜಾಮೀನು ದೊರಕಿದ್ದು ಪುನಃ ಜನಸೇವೆ ಮಾಡಲು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಕೊಟ್ಟೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ವಿ.ರವೀಂದ್ರನಾಥ ಬಾಬು, ರಾಜ್ಯ ಕಾಂಗ್ರೆಸ್ ಓಬಿಸಿ ಘಟಕದ ಕಾರ್ಯದರ್ಶಿ ಹೇಮೇಶ್ ಗೌಡ, ಕೆ.ಆರ್. ಸತ್ಯನಾರಾಯಣ, ಕೆ.ಎನ್. ದರ್ಶನ್, ಹೊಸಹಳ್ಳಿ ಸುರೇಶ್, ಕಾಟ್ರಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಹನುಮೇಶ್ ಮುಂತಾದ ಮುಖಂಡರು ಇದ್ದರು.ಶಾಸಕ ಬಿ.ನಾಗೇಂದ್ರಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅವರನ್ನು ಮಾಜಿ ಶಾಸಕ ಕೆ.ವಿ.ರವೀಂದ್ರನಾಥ ಬಾಬು, ರಾಜ್ಯ ಕಾಂಗ್ರೆಸ್ ಓಬಿಸಿ ಘಟಕದ ಉಪಾಧ್ಯಕ್ಷ ಮಧುಸೂದನ್ ಆರ್. ಕಲ್ಮಾಡಿ ಸ್ವಾಗತ ಕೋರಿ ಸಂತಸವ್ಯಕ್ತಪಡಿಸಿದರು.