ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಶುದ್ದೀಕರಿಸಿದ ನೀರನ್ನು ಮಂಡಳಿಯು ನಿಗದಿಪಡಿಸಿರುವ ಮಾಪಕಗಳಿಗೆ ಅನುಗುಣವಾಗಿ ಸಂಸ್ಕರಣೆ ಮಾಡಿ ಸಮೀಪದಲ್ಲಿರುವ ವ್ಯವಸಾಯ ಭೂಮಿಗೆ ಹಾಗೂ ತೋಟಗಾರಿಕೆಗೆ ಉಪಯೋಗಿಸಲು ಸೂಕ್ತ ಕ್ರಮ ವಹಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗುತ್ತಲು ಕೆರೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು 30 ಕೋಟಿ ರು. ವೆಚ್ಚದಲ್ಲಿ ಉನ್ನತೀಕರಣಗೊಳಿಸಲು ಕಾರ್ಯಾದೇಶ ನೀಡಿ ಹತ್ತು ತಿಂಗಳಾದರೂ ಕೆಲಸ ಆರಂಭವಾಗದಿರುವುದು ಬೇಸರದ ಸಂಗತಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಸಮಾಧಾನ ವ್ಯಕ್ತಪಡಿಸಿದರು.ನಗರದ ಗುತ್ತಲು ಕೆರೆಗೆ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಿದ ಅವರು, ತ್ಯಾಜ್ಯ ನೀರು ಸಂಸ್ಕರಣ ಘಟಕದ ಉನ್ನತೀಕರಣಕ್ಕಾಗಿ 30 ಕೋಟಿ ರು. ಟೆಂಡರ್ ಕರೆದು ಕಳೆದ ಮಾರ್ಚ್ ತಿಂಗಳಲ್ಲೇ ಗುತ್ತಿಗೆದಾರರಿಗೆ ಕೆಲಸ ಆರಂಭಿಸಲು ಆದೇಶ ನೀಡಲಾಗಿದೆ. ಆದರೂ ಕೆಲಸ ಆರಂಭಿಸಲು ತಡವಾಗಿದೆ. ಕೆಲಸ ಯಾವ ಹಂತಗಳಲ್ಲಿ ತಡವಾಗಿದೆ ಎಂಬುದರ ಬಗ್ಗೆ ಪರಿಶೀಲಿಸಲು ಗುತ್ತಲು ಕೆರೆಗೆ ಭೇಟಿ ನೀಡಿರುವುದಾಗಿ ತಿಳಿಸಿದರು.
ಪರಿಶೀಲನೆ ಸಮಯದಲ್ಲಿ ಗುತ್ತಲು ಕೆರೆಗೆ ಹಾಲಹಳ್ಳಿ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪ್ರದೇಶದ ಒಳಚರಂಡಿ ಕೊಳವೆ ಮಾರ್ಗವನ್ನು ನೇರವಾಗಿ ತೆರೆದ ಚರಂಡಿಗೆ ಸಂಪರ್ಕ ಕಲ್ಪಿಸಿದೆ. ಇದರಿಂದ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿದೆ. ಅದನ್ನು ಬೇರ್ಪಡಿಸಿ ಹತ್ತಿರದ ಮ್ಯಾನ್‌ಹೋಲ್‌ಗಳಿಂದ ತ್ಯಾಜ್ಯ ನೀರು ಶುದ್ಧೀಕರಣ ಘಟಕಕ್ಕೆ ರೊಚ್ಚು ನೀರನ್ನು ಪಂಪ್ ಮಾಡಿ ಸಂಸ್ಕರಿಸಬೇಕು ಎಂದು ಈಗಾಗಲೇ ಅನುಮೋದನೆಗೊಂಡು ಕಾಮಗಾರಿ ನಿರ್ವಹಿಸಲು ಕಾರ್ಯಾದೇಶ ನೀಡಿರುವ ಟೆಂಡರ್ ದಾರರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳಲ್ಲಿ ಅಳವಡಿಸಿರುವ ಎಸ್.ಟಿ.ಪಿಯನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಣೆ ಮಾಡಬೇಕು. ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಶುದ್ದೀಕರಿಸಿದ ನೀರನ್ನು ಮಂಡಳಿಯು ನಿಗದಿಪಡಿಸಿರುವ ಮಾಪಕಗಳಿಗೆ ಅನುಗುಣವಾಗಿ ಸಂಸ್ಕರಣೆ ಮಾಡಿ ಸಮೀಪದಲ್ಲಿರುವ ವ್ಯವಸಾಯ ಭೂಮಿಗೆ ಹಾಗೂ ತೋಟಗಾರಿಕೆಗೆ ಉಪಯೋಗಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಈ ವಿಚಾರದಲ್ಲಿ, ಪ್ರತಿ 15 ದಿನಗಳಿಗೊಮ್ಮೆ ಕೆಲಸದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ಕರೆಯಬೇಕು ಎಂದು ಸೂಚನೆ ನೀಡಲಾಯಿತು.ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ಟಿ.ಎನ್.ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ನಗರಸಭೆ ಪೌರಾಯುಕ್ತೆ ಯು.ಪಿ.ಪಂಪಾಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾವೇರಿ ನದಿಗೆ ಕಲುಷಿತ ನೀರು ಸೇರ್ಪಡೆ: ಡೀಸಿ ಪರಿಶೀಲನೆಶ್ರೀರಂಗಪಟ್ಟಣ:
ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿರುವುದನ್ನು ತಡೆಗಟ್ಟುವ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿಯ ಕಾವೇರಿ ನದಿ ತಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕಾವೇರಿ ನದಿ ನೀರು ಹಾಗೂ ದಡವನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿ ಹಾಜರಿದ್ದ ಸಂಬಂಧಿಸಿದ ಅಧಿಕಾರಿಗಳಿಗೆ ಕಾವೇರಿ ನದಿಗೆ ತ್ಯಾಜ್ಯ ನೀರು ಮತ್ತು ಕೈಗಾರಿಕಾ ತ್ಯಾಜ್ಯಗಳು ಎಲ್ಲಿಂದ ಮತ್ತು ಯಾವ ಪ್ರಮಾಣದಲ್ಲಿ ಹರಿಯುತ್ತಿವೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಸೂಚಿಸಿದರು.
ಕೊಳಚೆ ನೀರು ಹರಿಯುವ ಪ್ರದೇಶಗಳಲ್ಲಿ ತಡೆಗೋಡೆಗಳು ಅಥವಾ ಮಾರ್ಗಾಂತರ ವ್ಯವಸ್ಥೆಗಳನ್ನು ನಿರ್ಮಿಸಲು ಸೂಕ್ತ ಸ್ಥಳ ಗುರುತಿಸಬೇಕು. ಲಭ್ಯವಿರುವ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಸಾಮರ್ಥ್ಯ ಮತ್ತು ಅವುಗಳ ಪರಿಣಾಮಯಾಗಿ ಪರಿಶೀಲಿಸಬೇಕು ಎಂದರು.ನದಿ ಉದ್ದಕ್ಕೂ ಇರುವ ನಗರ ಮತ್ತು ಪಟ್ಟಣ ಸ್ಥಳೀಯ ಸಂಸ್ಥೆಗಳು (ಯುಎಲ್ ಬಿಎಸ್) ಕಸ ಮತ್ತು ತ್ಯಾಜ್ಯ ವಿಲೇವಾರಿ ಕುರಿತು ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು. ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳು (ಸಿಇಟಿಪಿಎಸ್): ಸಣ್ಣ ಕೈಗಾರಿಕೆಗಳಿಗೆ ಪ್ರತ್ಯೇಕ ಎಸ್ ಟಿಪಿ ನಿರ್ಮಿಸಲು ಸಾಧ್ಯವಾಗದ ಕಾರಣ, ಅವುಗಳ ತ್ಯಾಜ್ಯವನ್ನು ಸಂಸ್ಕರಿಸಲು ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕಗಳ (ಸಿಇಟಿಪಿಎಸ್) ಕಡ್ಡಾಯ ಬಳಕೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಬೇಕು ಎಂದರು.
ಶೂನ್ಯ ದ್ರವ ವಿಸರ್ಜನೆ, ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಜಡ್ ಎಲ್ ಡಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ, ಯಾವುದೇ ಸಂಸ್ಕರಿಸದ ಅಥವಾ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಪರಿಸರಕ್ಕೆ ಬಿಡುವಂತಿಲ್ಲ ಎಂಬುದನ್ನು ಕಡ್ಡಾಯವಾಗಿ ಸೂಚಿಸಲು ಹೇಳಿದರು.ಈ ವೇಳೆ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾಧಿಕಾರಿ ನರಸಿಂಹಮೂರ್ತಿ, ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಅಭಿಯಂತರ ಪ್ರತಾಪ್, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.