22ರಿಂದ ಮಂಗಳಾದೇವಿ ದೇವಾಲಯ ನವರಾತ್ರಿ ಮಹೋತ್ಸವ

| Published : Sep 20 2025, 01:02 AM IST

ಸಾರಾಂಶ

ಮಂಗಳೂರಿನ ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.22ರಿಂದ ಅ.3ರವರೆಗೆ ನಡೆಯಲಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಮಂಗಳೂರು ಎಂಬ ಹೆಸರು ಬರಲು ಕಾರಣೀಭೂತವಾದ, ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಮಹೋತ್ಸವ ಸೆ.22ರಿಂದ ಅ.3ರವರೆಗೆ ನಡೆಯಲಿದೆ.ಸಾವಿರಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನವು ದೆಹಲಿಯ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಪುರಾತನ ಕಾಲದ ಬಿಂಬರೂಪದ ಲಿಂಗ ಇಲ್ಲಿನ ವಿಶೇಷ, ಇದರಲ್ಲಿನ ಆಕೃತಿಯು ಸ್ತ್ರೀ ರೂಪವನ್ನು ಹೋಲುತ್ತಿದ್ದು, ಶಿವಶಕ್ತಿ ರೂಪದ ಲಿಂಗವೆಂದು ಆರಾಧಿಸಲ್ಪಡುತ್ತಿದೆ.ಏನೇನು ಕಾರ್ಯಕ್ರಮ?:

ಸೆ.22ರಂದು ಬೆಳಗ್ಗೆ 9 ಗಂಟೆಗೆ ಗಣಪತಿ ಪ್ರಾರ್ಥನೆ, ನಂತರ ನವರಾತ್ರಿ ಉತ್ಸವ ಉದ್ಘಾಟನೆ, ಸೆ.27ರಂದು ಲಲಿತಾ ಪಂಚಮಿ, ಸೆ.29ರಂದು ಮೂಲನಕ್ಷತ್ರ, ರಾತ್ರಿ ಬಲಿ ಉತ್ಸವಾರಂಭ, ಅ.1ರಂದು ಮಹಾನವಮಿ, ಚಂಡಿಕಾ ಹೋಮ, ರಾತ್ರಿ ದೊಡ್ಡ ರಂಗಪೂಜೆ, ಸಣ್ಣ ರಥೋತ್ಸವ, ಅ.2ರಂದು ವಿಜಯದಶಮಿ (ವಿದ್ಯಾರಂಭ ಮತ್ತು ತುಲಾಭಾರ ಸೇವೆ ಬೆಳಗ್ಗೆ 9.30ಕ್ಕೆ), ಮಧ್ಯಾಹ್ನ 12.30ಕ್ಕೆ ರಥಾರೋಹಣ, ಸಂಜೆ 7ಕ್ಕೆ ರಥೋತ್ಸವ, ಅ.3ರಂದು ಸಂಜೆ 7 ಗಂಟೆಗೆ ಅವಭೃತ ಮಂಗಳಸ್ನಾನ (ನವರಾತ್ರಿ ಮಹೋತ್ಸವ ಸಂಪನ್ನ), ಅ.4ರಂದು ಸಂಪ್ರೋಕ್ಷಣೆ, ಸಂಜೆ 6.30ಕ್ಕೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.ನವವಿಧ ಅಲಂಕಾರ: ಉತ್ಸವದ ಆರಂಭವು ಕೊಪ್ಪರಿಗೆ ಏರಿಸುವುದರಿಂದ ಆರಂಭವಾದರೆ, ನವರಾತ್ರಿಯ ಹತ್ತು ದಿನಗಳ ಪರ್ಯಂತ ನವ ವಿಧಗಳಲ್ಲಿ ದೇವಿಯನ್ನು ಅಲಂಕರಿಸಿ ಕಲ್ಪೋಕ್ತ ಪೂಜೆಗಳು ನಡೆಯಲಿವೆ. ಸೆ.22ರಂದು ದುರ್ಗಾದೇವಿ (ಕೆಂಪು ಬಣ್ಣದ ಸೀರೆ), ಸೆ.23ರಂದು ಆರ್ಯದೇವಿ (ಆಕಾಶ ನೀಲಿ), ಸೆ.24ರಂದು ಭಗವತಿ (ಕೇಸರಿ ಚೌಕಳಿ), ಸೆ.25ರಂದು ಭಗವತಿ (ಕೇಸರಿ ಚೌಕಳಿ), ಸೆ.26ರಂದು ಕುಮಾರಿ (ನಸು ಹಳದಿ), ಸೆ.27ರಂದು ಅಂಬಿಕೆ (ಕಡು ಹಸಿರು), ಸೆ.28ರಂದು ಮಹಿಷ ಮರ್ದಿನಿ (ಕುಂಕುಮ ಕೆಂಪು), ಸೆ.29ರಂದು ಚಂಡಿಕೆ (5 ಸೀರೆ), ಸೆ.30ರಂದು ಸರಸ್ವತಿ (ಬಿಳಿ), ಅ.1ರಂದು ವಾಗೀಶ್ವರಿ (ಮೆರೂನ್‌), ಅ.2ರಂದು ಮಂಗಳಾದೇವಿ (ನೇರಳೆ), ಅ.3ರಂದು ಮಂಗಳಾದೇವಿ (ಯಾವುದೇ ಬಣ್ಣ) ರೂಪದಲ್ಲಿ ಪೂಜಿಸಲಾಗುವುದು.ವಿಶೇಷತೆಗಳು:

ವಿಜಯ ದಶಮಿಯಂದು 500ಕ್ಕೂ ಹೆಚ್ಚು ಮಕ್ಕಳಿಗೆ ವಿದ್ಯಾರಂಭ ನೆರವೇರಿಸಲಾಗುತ್ತದೆ. ಮಹಾನವಮಿಯಂದು ಚಂಡಿಕಾಹೋಮ 10 ಸಾವಿರಕ್ಕೂ ಮಿಕ್ಕಿ ವಾಹನ ಪೂಜೆ (ಆಯುಧ ಪೂಜೆ), ರಾತ್ರಿ ದೊಡ್ಡ ವಿಶೇಷ ರಂಗಪೂಜೆ ನಂತರ ಸಣ್ಣ ರಥೋತ್ಸವ ನೆರವೇರಿಸಲಾಗುವುದು. ದೂರದೂರುಗಳಿಂದ ಬರುವ ಭಕ್ತರು ಪ್ರತಿದಿನ 30-40ರವರೆಗೆ ಸ್ವಯಂವರ ಪಾರ್ವತಿ ಪೂಜೆ ಸಲ್ಲಿಸುತ್ತಾರೆ. ಪ್ರತಿ ತಿಂಗಳ ಮೊದಲ ಶುಕ್ರವಾರ ಮಂಗಳಾದೇವಿ ದೇವಸ್ಥಾನದಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಸಲಾಗುತ್ತಿದೆ.ವಿಜಯ ದಶಮಿಯಂದು ಬೆಳಗ್ಗೆ ತೆನೆ ಹಬ್ಬ- ಎಂಟು ಗ್ರಾಮಗಳ ಜನರಿಗೆ ತೆನೆ ನೀಡುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ನಂತರ ತುಲಾಭಾರ ಸೇವೆ, ಮಧ್ಯಾಹ್ನ ರಥಾರೋಹಣವಾಗಿ ಸಂಜೆ ಗಂಟೆ 6ಕ್ಕೆ ಸರಿಯಾಗಿ ರಥೋತ್ಸವ ಜರುಗಲಿದೆ. ಅ.3ರಂದು ಸಂಜೆ 7ಕ್ಕೆ ಅವಭೃತ ಮಂಗಳ ಸ್ನಾನದೊಂದಿಗೆ ನವರಾತ್ರಿ ಮಹೋತ್ಸವ ಸಂಪನ್ನವಾಗಲಿದೆ ಎಂದು ಅನುವಂಶಿಕ ಆಡಳಿತ ಮೊಕೇಸರ ಎಂ. ಅರುಣ್ ಐತಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.26ರಂದು ಸೀರೆ ಏಲಂ

ದೇವಾಲಯದಲ್ಲಿ ಸೆ.26ರಿಂದ 28ರವರೆಗೆ ಬೆಳಗ್ಗೆ 10ರಿಂದ 1 ಗಂಟೆವರೆಗೆ ಸೀರೆ ಏಲಂ ಕರೆಯಲಾಗುವುದು. ಉತ್ಸವದ ಪ್ರತಿದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಅದೇ ರೀತಿ ದಿನಂಪ್ರತಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.