ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ನಗರದ ಕರಾವಳಿ ಉತ್ಸವ ಮೈದಾನದ ಕೀರ್ತಿಶೇಷ ಡಾ.ಎನ್. ವಿನಯ ಹೆಗ್ಡೆ ವೇದಿಕೆಯಲ್ಲಿ ಮಾ.21ರಂದು ಸಂಜೆ 6.15ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಲಿದೆ.
ಮಂಗಳೂರು: ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಆಶ್ರಯದಲ್ಲಿ ನಗರದ ಕರಾವಳಿ ಉತ್ಸವ ಮೈದಾನದ ಕೀರ್ತಿಶೇಷ ಡಾ.ಎನ್. ವಿನಯ ಹೆಗ್ಡೆ ವೇದಿಕೆಯಲ್ಲಿ ಮಾ.21ರಂದು ಸಂಜೆ 6.15ಕ್ಕೆ ಆಳ್ವಾಸ್ ಸಾಂಸ್ಕೃತಿಕ ವೈಭವ ಮೇಳೈಸಲಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ, ಅಂದು ಸಂಜೆ 6.10ಕ್ಕೆ ಸರಿಯಾಗಿ ಅತಿಥಿಗಳು ವೇದಿಕೆಗೆ ಆಗಮಿಸಲಿದ್ದಾರೆ. 6.15ಕ್ಕೆ ಪ್ರಾರ್ಥನೆಯ ಬಳಿಕ 45 ನಿಮಿಷ ಸಭಾ ಕಾರ್ಯಕ್ರಮ ನಡೆಯಲಿದೆ. ಅದಾದ ಬಳಿಕ ನಿಗದಿತ 3 ಗಂಟೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 10 ಗಂಟೆಯೊಳಗೆ ಮುಕ್ತಾಯಗೊಳಿಸಲಾಗುವುದು. ಸಮಯ ಪರಿಪಾಲನೆ ಈ ಕಾರ್ಯಕ್ರಮದಲ್ಲೂ ಮುಂದುವರಿಯಲಿದೆ ಎಂದು ಹೇಳಿದರು.
ಆರಂಭದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸುವರು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾಜದ ಎಲ್ಲ ಸ್ತರಗಳ ಪ್ರಮುಖರು ಸಭಾ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿ ಇರಲಿದ್ದಾರೆ. ಈ ಕಾರ್ಯಕ್ರಮವನ್ನು ಕೀರ್ತಿಶೇಷ ಡಾ. ಎನ್. ವಿನಯ ಹೆಗ್ಡೆ ಅವರಿಗೆ ಅರ್ಪಿಸಲಾಗಿದೆ ಎಂದು ತಿಳಿಸಿದರು.500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರು: ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ-ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಲಿದೆ ಎಂದು ಡಾ. ಮೋಹನ್ ಆಳ್ವ ವಿವರಿಸಿದರು.8 ಸಾವಿರಕ್ಕೂ ಅಧಿಕ ಆಸನಗಳು: ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಪ್ರೇಕ್ಷಕರಿಗಾಗಿ 8,000ಕ್ಕೂ ಅಧಿಕ ಆಸನದ ವ್ಯವಸ್ಥೆ ಮಾಡಲಾಗುವುದು. ಸಾಂಸ್ಕೃತಿಕ ಕಾರ್ಯಕ್ರಮ ಕ್ಲಪ್ತ ಸಮಯಕ್ಕೆ ಆರಂಭವಾಗಿ ನಿಗದಿತ ಸಮಯಕ್ಕೆ ಮುಕ್ತಾಯಗೊಳ್ಳಲಿದೆ. ಜಾತಿ, ಮತ ಭೇದವಿಲ್ಲದೆ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಎಲ್ಲರೂ ಒಟ್ಟುಸೇರಿ ಈ ಕಾರ್ಯಕ್ರಮ ರೂಪುಗೊಂಡಿದೆ ಎಂದರು.ಆಳ್ವಾಸ್ ಸಾಂಸ್ಕೃತಿಕ ವೈಭವವು ಕರ್ನಾಟಕದ ಅತ್ಯಂತ ಪ್ರಸಿದ್ಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ರೂಪುಗೊಂಡಿದೆ. ಇದು ಕೇವಲ ಒಂದು ಕಾರ್ಯಕ್ರಮವಲ್ಲ, ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯ ಸೊಬಗನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳಲು ಇರುವ ಸುಂದರ ಅವಕಾಶ. ಈ ಕಾರ್ಯಕ್ರಮದ ಮೂಲಕ ನೂರು ಸಂದೇಶಗಳು ಸಮಾಜಕ್ಕೆ ತಲುಪಿ, ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವಿದೆ ಎಂದು ಡಾ.ಮೋಹನ್ ಆಳ್ವ ಆಶಿಸಿದರು.
ಆಳ್ವಾಸ್ ನುಡಿಸಿರಿ- ವಿರಾಸತ್ ಮಂಗಳೂರು ಘಟಕದ ಸಂಘಟನಾ ಕಾರ್ಯದರ್ಶಿ ಪ್ರಸಾದ್ ರೈ ಕಲ್ಲಿಮಾರ್, ಕೋಶಾಧಿಕಾರಿ ಶಶಿರಾಜ್ ಕಾವೂರು, ಪ್ರಮುಖರಾದ ಪ್ರದೀಪ ಕುಮಾರ ಕಲ್ಕೂರ, ಲೀಲಾಕ್ಷ ಕರ್ಕೇರ, ಆಳ್ವಾಸ್ ಕಾಲೇಜು ಉಪನ್ಯಾಸಕ ರಾಮ್‌ಪ್ರಸಾದ್ ಕಾಂಚೋಡು ಇದ್ದರು.ಈ ಕಾರ್ಯಕ್ರಮ ನಿಲ್ಲಿಸಲ್ಲ: ಡಾ.ಮೋಹನ್ ಆಳ್ವಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವತಿಯಿಂದ 2012ರಿಂದ ಆಳ್ವಾಸ್ ನುಡಿಸಿರಿ- ವಿರಾಸತ್‌ನ 88 ಘಟಕಗಳ ಮೂಲಕ ದೇಶ- ವಿದೇಶಗಳಲ್ಲಿ 500ಕ್ಕೂ ಅಧಿಕ ಕಾರ್ಯಕ್ರಮ ನೀಡಲಾಗಿದೆ. ಈ ವರ್ಷ 40 ಕಾರ್ಯಕ್ರಮ ನೀಡಿದ್ದು, ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಆಳ್ವಾಸ್ ಸಾಂಸ್ಕೃತಿಕ ವೈಭವ ಆಯೋಜಿಸುತ್ತಿರುವುದು ನೆಮ್ಮದಿ, ಖುಷಿ ನೀಡಿದೆ. ಸಾಂಸ್ಕೃತಿಕ ವಿಭಾಗದಲ್ಲಿ ದತ್ತು ಸ್ವೀಕಾರದ ವಿದ್ಯಾರ್ಥಿಗಳು ಅತ್ಯಂತ ಆಸಕ್ತಿಯಿಂದ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮವನ್ನು ಎಷ್ಟೇ ಕಷ್ಟ ಆದರೂ ನಿಲ್ಲಿಸಬಾರದು ಎಂದು ತೀರ್ಮಾನಿಸಿದ್ದೇವೆ ಎಂದು ಡಾ.ಎಂ. ಮೋಹನ್ ಆಳ್ವ ಹೇಳಿದರು.