ಮಂಗಳೂರು ಹುಡುಗ ಅರ್ಜುನ್‌ ಕುಮಾರ್‌ ವರನಾದರೆ, ವಧು- ನ್ಯೂಜಿಲ್ಯಾಂಡ್‌ ಹುಡುಗಿ ಲಿಲ್ಲಿ ಚೂ. ಇವರಿಬ್ಬರು ಭಾನುವಾರ ಕುದ್ರೋಳಿ ದೇವಾಲಯ ಸಭಾಂಗಣದಲ್ಲಿ ಸಪ್ತಪದಿ ತುಳಿದರು.

ಮಂಗಳೂರು: ಮಂಗಳೂರು ಹುಡುಗ ಅರ್ಜುನ್‌ ಕುಮಾರ್‌ ವರನಾದರೆ, ವಧು- ನ್ಯೂಜಿಲ್ಯಾಂಡ್‌ ಹುಡುಗಿ ಲಿಲ್ಲಿ ಚೂ. ಇವರಿಬ್ಬರು ಭಾನುವಾರ ಕುದ್ರೋಳಿ ದೇವಾಲಯ ಸಭಾಂಗಣದಲ್ಲಿ ಸಪ್ತಪದಿ ತುಳಿದರು.

ಮಂಗಳೂರು ಹೊಸಬೆಟ್ಟಿನ ಅರ್ಜುನ್‌ ಕುಮಾರ್‌ ಅವರು ಮಂಗಳೂರಿನ ಕೆನರಾ, ಶ್ರೀನಿವಾಸ ಕಾಲೇಜಿನಲ್ಲಿ ಶಿಕ್ಷಣ ಮುಗಿದ ಬಳಿಕ 8 ವರ್ಷಗಳ ಹಿಂದೆ ಉನ್ನತ ವ್ಯಾಸಂಗಕ್ಕೆಂದು ನ್ಯೂಜಿಲ್ಯಾಂಡ್‌ ತೆರಳಿದ್ದರು. ಅಲ್ಲಿ ಸೈಕಾಲಜಿ ವಿದ್ಯಾಭ್ಯಾಸ ಮಾಡುತ್ತಿದ್ದ ಲಿಲ್ಲಿ ಚೂ ಅವರ ಪರಿಚಯವಾಗಿತ್ತು. ವಿದ್ಯಾಭ್ಯಾಸ ಮುಗಿದು ಅಲ್ಲೇ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಅರ್ಜುನ್‌ ಉದ್ಯೋಗಕ್ಕೆ ಸೇರಿದ್ದರು.ಅದೇ ಸಂದರ್ಭ ಕೋವಿಡ್‌ ಆವರಿಸಿತ್ತು. ಈ ಸಂಕಷ್ಟದ ನಡುವೆ ಅರ್ಜುನ್‌ಗೆ ಕೌಟುಂಬಿಕ ಆಘಾತವೊಂದು ಎದುರಾಗಿದ್ದು, ಇದರಿಂದ ಅರ್ಜುನ್‌ ಕುಸಿದು ಹೋಗಿದ್ದರು. ಆಗ ಸಾಂತ್ವನ ತುಂಬಿ ಧೈರ್ಯ ಹೇಳಿದ್ದು ಲಿಲ್ಲಿ ಚೂ. ಈ ಮಾನವೀಯ ಸೆಲೆಯೇ ಇಬ್ಬರ ಹೃದಯಗಳ ನಡುವೆ ಸೇತುವೆಯಾಯಿತು.

ತಮ್ಮ ಪ್ರೀತಿಯ ಬಗ್ಗೆ ಅರ್ಜುನ್‌ ಮತ್ತು ಲಿಲ್ಲಿ ಮನೆಯವರಿಗೆ ಮನವರಿಕೆ ಮಾಡಿದ್ದು, ಎರಡೂ ಕುಟುಂಬಗಳು ವಿವಾಹಕ್ಕೆ ಸಂತೋಷದಿಂದ ಒಪ್ಪಿಕೊಂಡಿವೆ. ಇದೀಗ ಅರ್ಜುನ್‌ ಅಭಿಲಾಷೆಯಂತೆ ಭಾರತೀಯ ಸಂಪ್ರದಾಯದ ಪ್ರಕಾರ ಕುದ್ರೋಳಿಯಲ್ಲಿ ವಿವಾಹ ಕಾರ್ಯ ನೆರವೇರಿತು. ಎರಡೂ ಕುಟುಂಬದವರು ಈ ಸಂದರ್ಭ ಉಪಸ್ಥಿತರಿದ್ದು ನೂತನ ವಧು-ವರರಿಗೆ ಶುಭ ಹಾರೈಸಿದರು.