ಮೂರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಬಗ್ಗೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಮೂರ್ನಾಡು ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ನಿಯಂತ್ರಣ ಹಾಗೂ ಹರಿಹರೆಯದವರ ಸಮಸ್ಯೆಗಳ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಯಿತು.ಮಡಿಕೇರಿಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಜಿಲ್ಲಾ ಸೂಪರ್ವೈಸರ್ ಆದ ಸುನಿತಾ ಮುತ್ತಣ್ಣ ಅವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಏಡ್ಸ್ ಕಾಯಿಲೆ ಹರಡುವ ಮತ್ತು ತಡೆಗಟ್ಟುವ ವಿಧಾನ, ಚಿಕಿತ್ಸೆ, ಸುರಕ್ಷತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿಯಮಿತ ಆರೋಗ್ಯಕರ ಜೀವನವನ್ನು ನಡೆಸುವುದು ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಲೈಡ್ ಶೋ ಮುಖಾಂತರ ಅರಿವನ್ನು ಮೂಡಿಸಿದರು. ಏಡ್ಸ್ ನಂತಹ ಮಹಾ ಕಾಯಿಲೆಯನ್ನು ಜಾಗೃತಿಯಿಂದ ಮತ್ತು ಜ್ಞಾನದಿಂದ ನಿಯಂತ್ರಿಸಬಹುದು . ಮುಕ್ತ ಸಮಾಜವನ್ನು ವಿದ್ಯಾರ್ಥಿಗಳು ಕಟ್ಟುವುದರತ್ತ ಪ್ರಮುಖ ಪಾತ್ರವನ್ನು ವಹಿಸಬೇಕು ಎಂದು ಹೇಳಿದರು.ಹದಿಹರೆಯದಲ್ಲಿ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳು ಬರುತ್ತಿದ್ದು ಯಾವುದೇ ಸಮಸ್ಯೆಗಳಿಗೆ ವಿದ್ಯಾರ್ಥಿಗಳು ಕುಗ್ಗದೆ ತಮ್ಮ ದೇಹ ಆರೋಗ್ಯದ ಬಗ್ಗೆ ತಿಳಿದುಕೊಂಡರೆ ಅವರು ಸುರಕ್ಷಿತ ಮತ್ತು ಬಲಿಷ್ಠರಾಗುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಮಾಹಿತಿಯನ್ನು ನೀಡಿ ಆರೋಗ್ಯಕರ ಸಂಬಂಧಗಳ ಬಗೆ ಅರಿವನ್ನು ಮೂಡಿಸಿ ಒತ್ತಡ, ಭಯ ಅಥವಾ ಬಲವಂತದಿಂದ ಇರುವ ಸಂಬಂಧ ಆರೋಗ್ಯಕರವಲ್ಲ. ವಿದ್ಯಾರ್ಥಿಗಳು ತಪ್ಪು ಮಾಹಿತಿ ಯಿಂದ ದೂರವಿದ್ದು ಆರೋಗ್ಯಕರ ಸಂಬಂಧದಲ್ಲಿ ಗೌರವ, ನಂಬಿಕೆ ಹೊಂದಿರಬೇಕು ಎಂದು ಹೇಳಿದರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಫೋಟೋ, ಖಾಸಗಿ ವಿಚಾರಗಳನ್ನ ವಿದ್ಯಾರ್ಥಿಗಳು ಹಂಚಿಕೊಳ್ಳುವಾಗ ಎಚ್ಚರವಹಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮೂರ್ನಾಡು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ದೇವಕಿ ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಾದ ದಮಯಂತಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.